* ಫೆಬ್ರವರಿ 7 ಕ್ಕೆ ಬಿಡುಗಡೆ *
ನೈಜ ಪ್ರೇಮ ಕಥೆಗಳು ಯಾವಾಗಲೂ ಸೋಲುವುದಿಲ್ಲ; ಅದೇ ರೀತಿ ರೋಮ್ಯಾಂಟಿಕ್ ಕಥೆಗಳು ಸದಾ ರಮ್ಯಾ ಕಾಲವನ್ನೇ ಸೃಷ್ಟಿಸಿವೆ.
ಇಲ್ಲಿ ಒಂದು ಲವಲವಿಕೆಯ ಪ್ರೇಮ ಕಥೆ ಪ್ರೇಮಿಗಳ ದಿನಕ್ಕೆ ಹತ್ತಿರವಾಗಿ ಪ್ರೇಮಿಗಳನ್ನು ಮೋಡಿ ಮಾಡಲು ಬರುತ್ತಿದೆ.
ಅದೇ ಅನ್ ಲಾಕ್ ರಾಘವ..!
ನವನಟ ಮಿಲಿಂದ್ ಹಾಗೂ ಲವ್ ಮಾಕ್ಟೇಲ್ ಖ್ಯಾತಿಯ ರೆಚೆಲ್ ಡೇವಿಡ್ ಮುಖ್ಯ ಪಾತ್ರದಲ್ಲಿರುವ ಈ ಚಿತ್ರವನ್ನು ಮಂಜುನಾಥ್ ದಾಸೇಗೌಡ ಹಾಗೂ ಗಿರೀಶ್ ಕುಮಾರ್ ನಿರ್ಮಾಣ ಮಾಡಿದ್ದು, ದೀಪಕ್ ಮಧುವನಹಳ್ಳಿ ನಿರ್ದೇಶಕ.
ಚಿತ್ರದ ಬಿಡುಗಡೆ ಘೋಷಣೆ ಸಲುವಾಗಿ ಏರ್ಪಡಿಸಿದ್ದ ಪ್ರಚಾರ ಸಭೆಯಲ್ಲಿ ಚಿತ್ರತಂಡ ಅತ್ಯಂತ ಉತ್ಸಾಹದಲ್ಲಿ ಭಾಗವಹಿಸಿತ್ತು.
‘ರಾಮ ರಾಮ ರೇ’ ಖ್ಯಾತಿಯ ಸತ್ಯ ಪ್ರಕಾಶ್ ಕಥೆ, ಚಿತ್ರಕಥೆ ಬರೆದಿದ್ದು, ಪ್ರೇಕ್ಷಕನಿಗೆ ಕಚಗುಳಿ ಇಡುವ ನಗು, ಆಹ್ಲಾದ ಪ್ರೇಮೋನ್ಮಾದ ಉಂಟಾಗುವ ನಿರೂಪಣೆ ಇರುತ್ತದೆ ಎಂಬ ವಿವರ ಬಂತು ಚಿತ್ರತಂಡದಿಂದ.
ಚಿತ್ರೀಕರಣ ಆರಂಭವಾದಾಗಿನಿಂದ ಹೆಚ್ಚು ಹೆಚ್ಚು ನಿರೀಕ್ಷೆಗಳನ್ನು ಹುಟ್ಟು ಹಾಕಿರುವ ‘ಅನ್ ಲಾಕ್ ರಾಘವ’ 2025 ರ ಆರಂಭಿಕ ಗೆಲುವಿನ ಚಿತ್ರವಾಗುತ್ತದೆ ಎಂಬುದು ಚಿತ್ರತಂಡದ ನಂಬಿಕೆ.
ಅಲ್ಲದೆ ಪ್ರೇಮಿಗಳ ದಿನಕ್ಕೆ ಒಂದು ವಾರ ಮುಂಚೆ ಚಿತ್ರವು ಬಿಡುಗಡೆ ಕಾಣುವುದರಿಂದ ರೋಮಾಂಚನದ ರಸದೌತಣ ಪ್ರೇಮಿಗಳಿಗೆ ಸಿಗಲಿದೆ. ಏಕೆಂದರೆ ಚಿತ್ರಕಥೆಯ ಸಾರ ಆ ರೀತಿ ಇರುತ್ತದೆ ಎಂಬುದು ನಿರ್ದೇಶಕ ದೀಪಕ್ ಮಧುವನಹಳ್ಳಿ ವಿವರಣೆ.
ಮನರಂಜನೆಯ ರಸದೌತಣವಿರುತ್ತದೆ. ಗ್ಲಾಮರ್ ಗೆ ಒತ್ತು ನೀಡಲಾಗಿದೆ ಜೊತೆಗೆ ಈ ಯುವ ಜೋಡಿ ಪ್ರೇಕ್ಷಕರನ್ನು ಮೋಡಿ ಮಾಡುವುದರಲ್ಲಿ ಸಂಶಯವೇ ಇಲ್ಲ ಎಂದರು.
ಚಿತ್ರದುರ್ಗದಲ್ಲಿ ಹೆಚ್ಚಿನ ಭಾಗದ ಚಿತ್ರೀಕರಣ ನಡೆಸಲಾಗಿದೆ. ಲವಿತ್ ಛಾಯಾಗ್ರಹಣದಲ್ಲಿ ಚಿತ್ರದುರ್ಗದ ಸೊಗಸು ಎದ್ದು ಕಾಣುತ್ತದೆ. ಅನೂಪ್ ಸೀಳಿನ್ ಸಂಗೀತದಲ್ಲಿ ಈಗಾಗಲೇ ಹಾಡುಗಳು ಪ್ರೇಕ್ಷಕರ ಮನ ಗೆದ್ದಿವೆ ಎಂದು ಹೇಳುತ್ತಾ ಹೋದರು ನಿರ್ದೇಶಕ ದೀಪಕ್ ಮಧುವನಹಳ್ಳಿ.
ಒಂದು ಪ್ರೇಮ ಮತ್ತು ಲವ ಲವಿಕೆಯ
ಕಥೆಯ ಭಾಗವಾಗಿದ್ದು ಹೆಮ್ಮೆಯ ವಿಷಯವಾಗಿದೆ ಎಂದರು ಮುಖ್ಯ ಪಾತ್ರದಲ್ಲಿರುವ ಮಿಲಿಂದ್.
ಸಾಧುಕೋಕಿಲ ಹಾಗೂ ಶೋಭ್ ರಾಜ್, ಅವಿನಾಶ್, ಭೂಮಿ ಶೆಟ್ಟಿ ಮೊದಲಾದವರ ತಾರಾಗಣದ ಈ ಚಿತ್ರದಲ್ಲಿ ತಂತ್ರಜ್ಞರ ಕಾರ್ಯವೈಖರಿ ಅದ್ಭುತ ಎಂದರು.
ಸಂಶೋಧನಾ ವಿದ್ಯಾರ್ಥಿನಿಯ ಪಾತ್ರದಲ್ಲಿ ಕಾಣಿಸಿಕೊಂಡಿರುವೆ. ಇದೊಂದು ಸುಂದರ ಕಥಾನಕ ಎಂಬುದು ರೆಚೆಲ್ ಡೇವಿಡ್ ವಿವರಣೆ.
ನಿರ್ಮಾಪಕ ಮಂಜುನಾಥ್ ದಾಸೇಗೌಡ ಅವರಿಗೆ ಇದು ನಾಲ್ಕನೇ ಚಿತ್ರ. ಅತ್ಯುತ್ತಮವಾಗಿ ಮೂಡಿ ಬಂದಿದೆ. ಮುಖ್ಯವಾಗಿ ತಂತ್ರಜ್ಞರ ಕೆಲಸ ಇಷ್ಟವಾಗಿದೆ ಮತ್ತು ಹೆಚ್ಚು ಭರವಸೆಗಳನ್ನು ಮೂಡಿಸಿದೆ ಎಂದರು ಮಂಜುನಾಥ್ ದಾಸೇಗೌಡ.