ಮನಸ್ಸು ಮನಸ್ಸುಗಳ ನಡುವೆ ಹುಚ್ಚು ಕೋಡಿಯಂತೆ ಹರಿಯುವ ಪ್ರೇಮಕ್ಕೆ ಈಗ ಧಣಿವಾಗಿದೆಯೇ. ಹೀಗೊಂದು ಪ್ರಶ್ನೆ ಅಲ್ಲಲ್ಲಿ ಹುಟ್ಟುಕೊಳ್ಳಲು ಕಾರಣವಿದೆ. ಅದು ಬೋರಿಂಗ್ ಎಂಬ ಕ್ಷಣಿಕ ತೃಪ್ತಿಯ ಆಯಾಮ. ಹೌದು ಪ್ರೇಮದಾಟದಲ್ಲಿ ಬಹುಬೇಗನೆ ಸುಸ್ತು ಹೊಡೆಯುವ ಸಂದರ್ಭಗಳು ಸೃಷ್ಟಿಯಾಗುತ್ತಿವೆ. ಪ್ರೇಮದ ಗಾಢ ಅನುಭವ ಮತ್ತು ಅದರ ರೋಚಕತೆ ತಲುಪುವ ಮುನ್ನವೇ ಸಂಬಂಧಗಳು ಮುರಿದು ಬೀಳುತ್ತಿವೆ. ಹೀಗೇಕೆ..??
ಇದಕ್ಕೆ ಉತ್ತರ ಸರಳ ಆದರೂ ಕ್ಲಿಷ್ಟ. ಏಕೆಂದರೆ ಪ್ರೀತಿ ಪ್ರೇಮ ಮತ್ತು ಸಂಬಂಧ ಏನೆಂಬುದು ಅರಿವಾಗುವಷ್ಟರಲ್ಲಿ ಬ್ರೇಕ್ ಅಪ್ ಎಂಬುದು ಮೇಲೆರಗಿರುತ್ತದೆ. ಕಾಲವೊಂದಿತ್ತು; ಪ್ರೇಮ ಅಜರಾಮರಾ, ಪ್ರೇಮ ಮಧುರಾಕ್ಷರ ಎಂಬ ಕಲ್ಪನೆಗಳಿದ್ದವು. ಒಮ್ಮೆ ಪ್ರೇಮಾಂಕುರವಾದರೆ, ಅದನ್ನು ಬೆಳೆಸಿ ಪೊಷಿಸಿ ಸುಧೀರ್ಘ ಕಾಲದವರೆಗೂ ಪ್ರೇಮಸಹಿತ ಮನಸ್ಥಿತಿ ಹೊಂದುವುದು ಸಾಧ್ಯವಿತ್ತು. ಅಲ್ಲಿ ನೈಜತೆ ಮತ್ತು ನೈತಿಕತೆ ಎಂಬುದು ನಿಜವಾಗಿಯೂ ಇತ್ತು.
ಒಬ್ಬ/ಒಬ್ಬಳು ಪ್ರೀತಿಯಲ್ಲಿ ತೊಡಗಿದರೆ ಅದು ಶಾಶ್ವತ ಎಂಬುದು ತಲೆಯಲ್ಲಿ ಗಟ್ಟಿಯಾಗಿ ನೆಲೆಯೂರಿ ಇಬ್ಬರೂ ಬಿಟ್ಟಿರಲಾರದ ಮನಸ್ಥಿತಿಯನ್ನು ತಲುಪುತ್ತಿದ್ದರು. ಮಾತ್ರವಲ್ಲ; ಇಬ್ಬರೊಳಗೂ ಪರಸ್ಪರ ಅಪರ್ಣಾ ಭಾವ ಇದ್ದೇ ಇರುತಿತ್ತು. ಮುಖ್ಯವಾಗಿ ಪೂಜ್ಯ ಭಾವನೆಗಳು ನೆಲೆಸಿರುತ್ತಿದ್ದವು.
ಆದರೆ ಕಾಲ ವೇಗದ ಗತಿಯನ್ನು ಪಡೆದುಕೊಳ್ಳತೊಡಗಿದಂತೆ ಪ್ರೇಮರಾಹಿತ್ಯ ಭಾವನೆಗಳು ಮನಸ್ಸಿನಲ್ಲಿ ನೆಲೆಸತೊಡಗಿತು. ನಾನು ಎಂಬ ಅಹಂಮಿಕೆ ಕೂಡ ಹೆಚ್ಚಾಯಿತು. ಇಂತಹ ದಿನಗಳಲ್ಲಿಯೇ ಆಕರ್ಷಣೆ ಎಂಬುದು ಕವಲು ದಾರಿಯಾಯಿತು. ಮನಸ್ಸು ಅತಿತ್ತ ಹರಿಯ ಬಿಡಲು ಹೇರಳ ಅವಕಾಶವೂ ದೊರೆಯಿತು. ಆಗ ಪ್ರೇಮಕ್ಕೆ ತಿಲಾಂಜಲಿ ಇಡುವುದು ಸಾಮಾನ್ಯವೇ ಆಯಿತು.
ಈಗಂತೂ ಪ್ರೇಮಕ್ಕಿಂತಲೂ ಮುಂಚೆಯೇ ಸ್ನೇಹದ ಹಂತದಲ್ಲಿಯೇ ಲಿವ್ ಇನ್ ಸಂಬಂಧಗಳು ಆರಂಭವಾಗಿ ಪ್ರೇಮ ಆವರಿಸುವ ಮುಂಚೆಯೇ ಇಬ್ಬರಿಗೂ ಪರಸ್ಪರ ಬೋರ್ ಎನಿಸುವ ಸಂದರ್ಭಗಳು ಎದುರಾಗುತ್ತವೆ. ಅಲ್ಲಿ ಅಹಂಗೂ ಯೆಥೇಚ್ಚ ಜಾಗವಿರುವುದರಿಂದ ಸಂಬಂಧ ಬಹುಬೇಗನೆ ಢಮಾರ್ ಆಗುವುದುಂಟು.
ಸೆಕ್ಸ್ ಲೈಪ್ ನಲ್ಲಿ ರೋಚಕತೆ ಇನ್ನಷ್ಟು ಮತ್ತಷ್ಟು ದೊರಕಲಿ ಎಂಬ ಹುಚ್ಚಾಟಕ್ಕೆ ಬೀಳುವುದು ಈಗ ಸಾಮಾನ್ಯವೆನಿಸಿದೆ. ಇಲ್ಲಿ ಪ್ರೇಮವೇ ಅಪಹಾಸ್ಯಕ್ಕೆ ಒಳಗಾಗುವುದೂ ಉಂಟು.
ಒಂದು ಕಾಲದಲ್ಲಿ ಪ್ರೇಮ ಎಂಬುದು ಪವಿತ್ರ ಎಂದೇ ಭಾವಿಸಲಾಗುತಿತ್ತು. ಆಗ ದೈಹಿಕ ಸಂಬಂಧ ಏನಿದ್ದರೂ ಮದುವೆಯ ನಂತರ ಎಂಬುದಾಗಿತ್ತು. ಆದರೆ ಪ್ರೇಮದ ಸ್ವಾರ್ಥ ಮತ್ತು ತನ್ನದೆನ್ನುವ ವಾಂಛೆ ಇದ್ದೇ ಇತ್ತು. ಹಾಗಾಗಿ ಪ್ರೇಮ ಬಹು ಕಾಲ ಬಾಳುತಿತ್ತು. ಈಗ ಅದರ ಆಯುಸ್ಸು ಕಡಿಮೆ. ಏಕೆಂದರೆ ಪ್ರೇಮವನ್ನು ಪೋಷಿಸುವ ಮನಸ್ಸುಗಳು ಆತುರಕ್ಕೆ ಬಿದ್ದು ಸೊರಗುತ್ತಿವೆ.
ವಾಸ್ತವಕ್ಕೆ ಹಿಡಿದ ಕನ್ನಡಿಯಂತಿದೆ ಲೇಖನ.