Snehapriya.com

April 11, 2025

ಗಂಧದ ಗುಡಿ ಚಿತ್ರಕ್ಕೆ ತೆರಿಗೆ ವಿನಾಯ್ತಿ ಮುಖ್ಯಮಂತ್ರಿ ಘೋಷಣೆ..

Social Share :

ಮುಂದಿನ ಪೀಳಿಗೆಗೆ ನಿಸರ್ಗದ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಅದರ ಸಂರಕ್ಷಣೆ ಮಾಡಲು ಪ್ರೇರಣೆ ನೀಡುವ ‘ಗಂಧದ ಗುಡಿ’ ಚಲನಚಿತ್ರಕ್ಕೆ ಸರ್ಕಾರ ತೆರಿಗೆ ವಿನಾಯ್ತಿಯನ್ನು ನೀಡಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ.

ಶುಕ್ರವಾರ ಅವರು ‘ಪುನೀತ್ ಪರ್ವ’ ಗಂಧದ ಗುಡಿ ಬಿಡುಗಡೆ ಪೂರ್ವ ಕಾರ್ಯಕ್ರಮದ ಸಂದರ್ಭದಲ್ಲಿ ಮಾಧ್ಯಮಗಳ ಜೊತೆ ಮಾತನಾಡುತ್ತಾ ಈ ವಿಷಯ ತಿಳಿಸಿದರು.

ಗಂಧದ ಗುಡಿ ಚಲನಚಿತ್ರ ನಿಸರ್ಗ ಮತ್ತು ಅದರ ರಕ್ಷಣೆ ಕುರಿತಾಗಿರುವ ಚಲನಚಿತ್ರವಾಗಿರುವುದರಿಂದ ಇಂದಿನ ಕಾಲದಲ್ಲಿ ನಿಸರ್ಗ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸುವುದು ಅತ್ಯಂತ ಅಗತ್ಯವಾಗಿದೆ ಎಂದರು.

ಅಪ್ಪು ಜನಮಾನಸದಲ್ಲಿ ಜೀವಂತವಾಗಿದ್ದಾರೆ; ಅಪ್ಪು ಅವರನ್ನು ಕಳೆದುಕೊಂಡು ಒಂದು ವರ್ಷವಾಗಿದೆ. ಅಪ್ಪು ನಮ್ಮ ಜೊತೆಗೆ ಇದ್ದಾರೆ ಎಂಬ ಭಾವನೆ ನಮ್ಮಲ್ಲಿದೆ; ಅವರು ದೇವತಾ ಮನುಷ್ಯ, ಅವರ ವ್ಯಕ್ತಿತ್ವಕ್ಕೆ ದೇವರ ಆಶೀರ್ವಾದವಿದೆ ಎಂದರು.

ನವೆಂಬರ್ 1 ರಂದು ಅಪ್ಪುರವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಇದೇ ಸಂದರ್ಭದಲ್ಲಿ ಮಾಹಿತಿ ನೀಡಿದರು.

ವಿಧಾನಸೌಧದ ಮುಖ್ಯದ್ವಾರ ಮೆಟ್ಟಿಲುಗಳ ಮೇಲೆ ಮರಣೋತ್ತರವಾಗಿ ಕರ್ನಾಟಕ ಪ್ರಶಸ್ತಿ ನೀಡಿ ಗೌರವ ಸಲ್ಲಿಸಲಾಗುತ್ತಿದೆ. ಇದು ಎಲ್ಲಾ ಯುವಕರಿಗೂ ಪ್ರೇರಣೆಯಾಗುವಂತಹ ಒಂದು ಗೌರವ ಎಂದು ಭಾವಿಸುತ್ತೇನೆ ಎಂದರು.

ಗಂಧದ ಗುಡಿ ಚಲನಚಿತ್ರ ಅತ್ಯಂತ ಯಶಸ್ವಿಯಾಗಲಿ; ಅದೇ ರೀತಿ ಪುನೀತ್ ಪರ್ವ ಕಾರ್ಯಕ್ರಮ ಕೂಡ ಯಶಸ್ವಿಯಾಗಲಿ. ಸುಮಾರು ಹತ್ತು ದಿನಗಳ ಕಾಲ ನಡೆಯುವ ಕರ್ನಾಟಕ ರತ್ನ ಸಮಾರಂಭದ ಸಂಭ್ರಮವೂ ಕೂಡ ಯಶಸ್ವಿಯಾಗಲಿ. ಈ ಕಾರ್ಯಕ್ರಮದ ಮೂಲಕ ಅಪ್ಪುವಿನ ಮೇಲಿನ ನಮ್ಮ ಪ್ರೀತಿ, ವಾತ್ಸಲ್ಯವನ್ನು ಸಮಸ್ತ ಕನ್ನಡ ನಾಡು ತೋರಿಸಿದಂತಾಗುತ್ತದೆ ಎನ್ನುವ ಆಶಾಭಾವನೆ ನನಗಿದೆ ಎಂದರು.

ಸಿನಿಮಾ-ಗಾಸಿಪ್
Social Share :

Leave a Comment

Your email address will not be published. Required fields are marked *