Snehapriya.com

June 8, 2025

ಚಿತ್ರವಿಮರ್ಶೆ ಗಾಳಿಪಟ2

Social Share :

ನಿರ್ಮಾಣ : ಸೂರಜ್ ಪ್ರೊಡಕ್ಷನ್ಸ್

ನಿರ್ಮಾಪಕರು : ಉಮಾ ಎಂ. ರಮೇಶ್ ರೆಡ್ಡಿ

ತ್ಯಾಗದ ಸುತ್ತ ಲೀಲಾ ವಿನೋದ..

ತ್ಯಾಗದ ಮೂಲ ಸೆಲೆ ಎಲ್ಲಿರುತ್ತದೆ ಎಂಬುದನ್ನು ಪತ್ತೆ ಹಚ್ಚುವುದು ಸಾಧ್ಯವಿಲ್ಲ; ಒಬ್ಬ ವ್ಯಕ್ತಿ ತನ್ನ ಪರಿಸರವನ್ನು ಆವರಿಸುವ ರೀತಿಯಲ್ಲೂ ಕೆಲವೊಮ್ಮೆ ಅದು ಕಾಣುತ್ತದೆ..

ಬೇಸರವನ್ನೇ ವ್ಯಕ್ತಪಡಿಸದ ಸದಾ ಲವಲವಿಕೆಯ ಚಿಲುಮೆಯಾಗಿರುವ ಯುವಕನೊಬ್ಬ ತನ್ನ ಇಡೀ ಪರಿಸರದ ನೆಮ್ಮದಿಗೆ ಕಾರಣವಾಗುತ್ತಾನೆ..

ಆತ ಗಾಳಿಪಟ2ರ ಗಣಿ ಅಲಿಯಾಸ್ ಗಣೇಶ್. ಶುದ್ಧ ತರಲೆಗಳಾದ ಇಬ್ಬರು ಗೆಳೆಯರು; ಬಾರದ ಹಳಗನ್ನಡ, ನೆರವಾಗುವ ಮೇಸ್ತ್ರು, ಅಸಹನೆ ವ್ಯಕ್ತಪಡಿಸುವ ಅಪ್ಪ ಅಮ್ಮ, ಪ್ರೇಮದಿಂದ ತುಡಿಯುವ ಹುಡುಗಿ ಹೀಗೆ ಸುತ್ತಲೂ ಕಟ್ಟಿಕೊಂಡ ಸಂಬಂಧದ ಸುತ್ತ ಸಹಾಯದ ಗೋಡೆ ಕಟ್ಟುವ ಗಣಿ ಒಳಗೆ ಕುದಿಯುತ್ತಿರುವ ಬೆಂಕಿ.

ಓದಿದ ಶಾಲೆ ನೆನೆಯುತ್ತಾ ಅಲ್ಲಿ ಶಾಲಾ ಛಾವಣಿ ಬಿದ್ದು ಗಾಯಗೊಂಡ ಮೇಷ್ಟ್ರುನ್ನು ನೆನೆಯುತ್ತಾ; ಸ್ನೇಹಿತನ ಪ್ರೇಮಕ್ಕೆ ಆಧಾರವಾಗಿ ಸಲಹೆ ಕೊಡುತ್ತಾ, ಮತ್ತೊಬ್ಬ ಗೆಳೆಯನ ವೈಫಲ್ಯದ ಪ್ರೇಮ ಸರಿಪಡಿಸುವ ಯತ್ನದಲ್ಲಿ ತನ್ನ ಖಾಸಗಿತನ ಮರೆಯುತ್ತಾನೆ. ಅಮ್ಮನ ಸಾವು ಬರಸಿಡಿಲು. ಆದರೂ ಗೆಳೆಯರಿಗಾಗಿ ಔದಾರ್ಯ ಮೆರೆಯುತ್ತಾ ಯುರೋಪ್ ನಲ್ಲಿ ಜಾಲಿಯಾಗಿ ದಿನಗಳನ್ನು ಕರೆಯುತ್ತಾನೆ.

ಈ ಅಸಮಾನ್ಯ ಗಣೇಶ ಎಲ್ಲೋ ಹಾರುವ ಗಾಳಿಪಟದ ಸೂತ್ರ ಹಿಡಿದಿರುವ ವಿಷಯ ಅರಿವಾಗುವಷ್ಟರಲ್ಲಿ ಬೇಕಾದಷ್ಟು ಯಡವಟ್ಟುಗಳು ನಡೆದಿರುತ್ತವೆ..

ನಿರ್ದೇಶಕ ಯೋಗರಾಜ್ ಭಟ್ ಅವರ ವಿಶಾಲ ನೆಲೆಯ ತ್ಯಾಗದ ಗುಟ್ಟುಗಳು ವ್ಯಕ್ತವಾಗುವುದು. ಚಿತ್ರದ ಕ್ಲೈಮ್ಯಾಕ್ಸ್ ನಲ್ಲಿ.. ಒಳಗಡೆ ಬೆಂಕಿಯಥ ಮನಸ್ಸಿದ್ದರೂ ಲೀಲಾ ವಿನೋದಗಳಿಂದ ನಕ್ಕು ನಗಿಸುವ ಪಾತ್ರಗಳನ್ನು ಸೃಷ್ಟಿಸುವುದರಲ್ಲಿ ಅವರು ಎತ್ತಿದ ಕೈ.

ಗಣೇಶ್, ದಿಗಂತ್, ಪವನ್ ಕುಮಾರ್ ಪಾತ್ರಗಳು ಇಂದಿನ ಯುವ ಸಮೂಹದ ಕೈಗನ್ನಡಿ. ಅನಂತ್ ನಾಗ್ ನೋವಿನಲ್ಲಿರುವ ಆದರ್ಶ ವ್ಯಕ್ತಿತ್ವದ ಜೀವಸೆಲೆ. ಯಾವುದೋ ದೇಶದ ಟಿವಿಯಲ್ಲಿ ಬರುವ ಕಳೆದು ಹೋಗಿರುವ ಮಗನ ಹುಡುಕಾಟದಲ್ಲಿ ಯಶಸ್ಸು ಕಾಣುವ ವ್ಯಕ್ತಿ. ಆ ಯಶಸ್ಸಿನ ಹಿಂದೆ ಕಾಣುವುದು ಗಣಿಯ ಅಸಾಮಾನ್ಯ ಧೈರ್ಯ ಮತ್ತು ನಿರ್ಧಾರ.

ಚಿತ್ರದ ಮೊದಲರ್ಧ ತೊಯ್ಯುವ ಮಳೆಗೆ ಪ್ರೇಕ್ಷಕ ತಂಪಾಗಿರುತ್ತಾನೆ. ಉತ್ತರಾರ್ಧ ಕಜಬೇಕಿಸ್ತಾನ್ ಐಶ್ ಗಡ್ಡೆಯ ವಿಹಂಗಮ ನೋಟ. ದಿಗಿ (ದಿಗಂತ್) ಬಾಯಲ್ಲಿ ಕೆಂಡ ಕಾಣುವಂತೆ ಪ್ರೇಕ್ಷಕನಲ್ಲಿ ನಿಗಿ ನಿಗಿ ಕುತೂಹಲ.

ಇಡೀ ಚಿತ್ರವನ್ನು ಆವರಿಸಿರುವ ಗೋಲ್ಡನ್ ಸ್ಟಾರ್ ಗಣೇಶ್ ಲಕಲಕ ಹೊಳೆಯುವಂತಹ ಮನಸ್ಥಿತಿಯಲ್ಲಿ ನಟಿಸಿದ್ದಾರೆ. ಅವರ ಉತ್ಸಾಹ , ನೋಟ, ಅಸಹಾಯಕತೆ ಎಲ್ಲವೂ ಅದ್ಭುತ. ಅದಕ್ಕೆ ಸರಿಸಾಟಿಯಾಗಿಯೇ ಕಾಣಿಸಿಕೊಂಡಿರುವ ದಿಗಂತ್ ಪ್ರೇಮ ರಾಹಿತ್ಯ ಗುಣಗಳಿಂದ ಇಷ್ಟವಾದರೆ; ಪವನ್ ಕುಮಾರ್ ಅಗಾಧ ಪ್ರೇಮಿಯ ಗುಣಗಳಿಂದ ಕಂಗೊಳಿಸಿಬಿಡುತ್ತಾರೆ.

ಗಣೇಶ್ ಪ್ರಣಯ ಪರಿಚಯಾತ್ಮಕ ಹಾಡು ಕಲಾತ್ಮಕ ನೆಯ್ಗೆಯನ್ನು ಹೊಂದಿದ್ದರೆ; ದೇವ್ಲೆ ದೇವ್ಲೇ ಹಾಡು ಸಂಘರ್ಷದ ಕೊನೆಗೆ ಸಿಕ್ಕಿದ ಆಯುಧದಂತೆ.. ಪವನ್ ಪ್ರೇಮದ ಕಲ್ಪನೆ ಕನಸಿನ ಲೋಕ ಸೃಷ್ಟಿಸಿಕೊಟ್ಟಂತೆ..

ಅವರಿಗೆ ಜೋಡಿಯಾಗಿರುವ ವೈಭವೀ ಶ್ಯಾಂಡಿಲ್ಯ, ಸಂಯುಕ್ತ ಮೆನನ್ ಹಾಗೂ ಟೀಚರ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ಶರ್ಮಿಳಾ ಮಾಂಡ್ರೆ ಅವರದು ಮೋಹಕ ನಟನೆ.

ಇನ್ನುಳಿದಂತೆ ಮೇಷ್ಟ್ರು ಪಾತ್ರದಲ್ಲಿ ಅನಂತ್ ನಾಗ್, ರಂಗಾಯಣ ರಘು, ಸುಧಾ ಬೆಳವಾಡಿ, ಪದ್ಮಜಾರಾವ್ ಮೊದಲಾದವರ ಪಾತ್ರಗಳು ಗಮನ ಸೆಳೆಯುತ್ತವೆ.

ಯೋಗರಾಜ್ ಭಟ್ ಅವರ ಕಲ್ಪನೆಗೆ ಪೂರಕವಾಗಿರುವ ಸಂತೋಷ್ ಕುಮಾರ್ ಪಾತಾಜೆ ಕ್ಯಾಮೆರಾ ಕಣ್ಣು ಮನಸ್ಸನ್ನು ಉಲ್ಲಾಸಗೊಳಿಸುವ ದೃಶ್ಯಗಳನ್ನು ಎಬ್ಬಿ ಕೊಡುತ್ತದೆ. ಅರ್ಜುನ್ ಜನ್ಯ ಸಂಗೀತ ಚಿತ್ರದ ಹೈಲೈಟ್.

ನಾವು ಬದುಕಿರಬಹುದಿದು ಪ್ರಾಯಶಃ .. ಇದು ಕನಸಿರಬಹುದು ಪ್ರಾಯಶಃ.. ಎಂಬ ಕನಸು ಭ್ರಮೆಯ ನಡುವೆ..(ಜಯಂತ್ ಕಾಯ್ಕಿಣಿ)

ಇಡೀ ಕುಟುಂಬ ಅರಾಮಾವಾಗಿ ಹೋಗಿ ಕುಳಿತು ನೋಡಿ ಎಂಜಾಯ್ ಮಾಡುವ ಚಿತ್ರವಾಗಿ ‘ಗಾಳಿಪಟ2’ ಖಂಡಿತವಾಗಿ ನಿಲ್ಲುತ್ತದೆ..

🖋ಸ್ನೇಹಪ್ರಿಯ ನಾಗರಾಜ್

ಸಿನಿಮಾ-ಗಾಸಿಪ್
Social Share :

1 thought on “ಚಿತ್ರವಿಮರ್ಶೆ ಗಾಳಿಪಟ2”

  1. Im the upcoming movie director in kannada film industry, I want to talk to you regarding my new movie sir.

Leave a Reply to Pavan kumar S Cancel Reply

Your email address will not be published. Required fields are marked *