* ರಮೇಶ್ ರೆಡ್ಡಿ ಬಂಡವಾಳ; ಅರ್ಜುನ್ ಜನ್ಯ ಕ್ರಿಯಾಶೀಲತೆ *
* ಹಾಲಿವುಡ್ ತಂತ್ರಜ್ಞರ ಕೆಲಸ *
ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಇದೇ ಮೊದಲ ಬಾರಿಗೆ ನಿರ್ದೇಶನ ಮಾಡಿರುವ ದುಬಾರಿ ಬಜೆಟ್ ನ ಚಿತ್ರ ’45’ ಟೀಸರ್ ಯುಗಾದಿ ಹಬ್ಬದ ದಿನ ಬಿಡುಗಡೆಗೊಂಡು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ.
ನಿರ್ಮಾಪಕ ರಮೇಶ್ ರೆಡ್ಡಿ ಅದ್ದೂರಿ ನಿರ್ಮಾಣದ ಈ ಚಿತ್ರದಲ್ಲಿ ಕನ್ನಡದ ಮುಂಚೂಣಿಯ ಸ್ಟಾರ್ ಗಳಾದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ರಿಯಲ್ ಸ್ಟಾರ್ ಉಪೇಂದ್ರ ಹಾಗೂ ರಾಜ್ ಬಿ.ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿರುವುದು ವಿಶೇಷ.
ಆರಂಭದಿಂದಲೂ ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿರುವ ಚಿತ್ರದ ಟೀಸರ್ ನ್ನು ಹಬ್ಬದ ದಿನದಂದು ಕರುನಾಡ ಚಕ್ರವರ್ತಿ ಡಾ.ಶಿವರಾಜಕುಮಾರ್ ಬಿಡುಗಡೆ ಮಾಡಿದರು.
ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿರುವ ಈ ಟೀಸರ್ ಸಾಕಷ್ಟು ಕುತೂಹಲ ಮೂಡಿಸಿದೆ. ಜೊತೆಗೆ ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದ್ದು, ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ.
ಅರ್ಜುನ್ ಜನ್ಯ ಅವರಲ್ಲಿನ ವಿಶೇಷ ಪ್ರತಿಭೆ ಈ ಚಿತ್ರದ ಮೂಲಕ ಹೊರಬರಲಿದೆ. ಅವರ ಕಲ್ಪನೆಗೆ ರಮೇಶ್ ರೆಡ್ಡಿ ಅವರು ಬಂಡವಾಳ ಹೂಡಿರುವುದು ಹೆಚ್ಚುಗಾರಿಕೆ ವಿಷಯವಾಗಿದೆ ಎಂದರು ಶಿವಣ್ಣ.
ಶಿವಣ್ಣ ಅವರ ಜೊತೆ ನಟಿಸುತ್ತಿರುವ ಸಂಗತಿಯೇ ಹೆಮ್ಮೆಯ ವಿಷಯವಾಗಲಿದೆ. ಓಂ ಚಿತ್ರದ ಕ್ಷಣಗಳು ಮರುಕಳಿಸಲಿವೆ ಎಂದರು ಉಪೇಂದ್ರ.
ಇಬ್ಬರು ದಿಗ್ಗಜರ ಜೊತೆ ನಾನು ನಟಿಸುತ್ತಿರುವುದೇ ಪುಣ್ಯದ ವಿಷಯ ಎಂದವರು ರಾಜ್.ಬಿ ಶೆಟ್ಟಿ. ಟೀಸರ್ ನಲ್ಲೇ ಕಥೆ ಹೇಳುವ ಪ್ರಯತ್ನ ಮಾಡಲಾಗಿದೆ ಎಂದರು ನಿರ್ದೇಶಕ ಅರ್ಜುನ್ ಜನ್ಯ.
ಕೆನಡಾದ ಪರಿಣಿತರಿಂದ ಗ್ರಾಫಿಕ್ಸ್ ಕೆಲಸ ನಡೆಯುತ್ತಿರುವುದು ಕನ್ನಡದ ಮಟ್ಟಿಗೆ ವಿಶೇಷವಾಗಿದೆ. ಆಗಸ್ಟ್ 15 ರಂದು ಚಿತ್ರವು ಬಿಡುಗಡೆ ಕಾಣುತ್ತಿದೆ ಎಂದರು.
ಇಡೀ ಭಾರತೀಯ ಚಿತ್ರರಂಗವನ್ನು ತನ್ನತ್ತ ತಿರುಗಿ ನೋಡುವಂತೆ ಮಾಡುವ ಚಿತ್ರವಾಗಲಿದ್ದು, ಇದು ನಮ್ಮ ಚಿತ್ರ ಎಂಬುದು ಹೆಮ್ಮೆಯ ವಿಷಯವಾಗಲಿದೆ ಎಂದವರು ನಿರ್ಮಾಪಕ ರಮೇಶ್ ರೆಡ್ಡಿ.
ಛಾಯಾಗ್ರಾಹಕ ಸತ್ಯ ಹೆಗಡೆ, ನಿರ್ಮಾಪಕ ಕೆ.ಮಂಜು, ಸಂಜಯ್ ಗೌಡ, ಇಂದ್ರಜಿತ್ ಲಂಕೇಶ್, ಕೆ.ವಿ.ಎನ್ ಸುಪ್ರೀತ್, ಆನಂದ್ ಆಡಿಯೋ ಶ್ಯಾಮ್ , ಶ್ರೇಯಸ್ ಮಂಜು ಹಾಗೂ ಇತರರು ಟೀಸರ್ ಬಿಡುಗಡೆ ಸಮಾರಂಭದಲ್ಲಿ ಉಪಸ್ಥಿತರಿದ್ದರು.