*ಸೆಟ್ಟಾಗಲ್ಲಾ ಕಣೆ ನಂಗೂ ನಿಂಗು..*
ಹಾಡುಗಳನ್ನು ಸೂಪರ್ ಡೂಪರ್ ಹಿಟ್ ಮಾಡುವ ಜೋಗಿ ಪ್ರೇಮ್, ತಮ್ಮ ಎಂದಿನ ವರಸೆಯನ್ನು ಮುಂದುವರೆಸಿರುವ ಪರಿಣಾಮ ‘ಕೆಡಿ’ ಚಿತ್ರದ ಮತ್ತೊಂದು ಹಾಡು ಈಗ ಗಮನ ಸೆಳೆಯುತ್ತಿದೆ.
‘ಸೆಟ್ಟಾಗಲ್ಲಾ ಕಣೆ ನಂಗೂ ನಿಂಗು..’ ಎಂಬ ಹಾಡು ಈಚೆಗೆ ನಡೆದ ಸಮಾರಂಭದಲ್ಲಿ ಬಿಡುಗಡೆಗೊಂಡಿತು. ಚಿತ್ರತಂಡದ ಸದಸ್ಯರು ಈ ಸಂದರ್ಭದಲ್ಲಿ ಸಂಭ್ರಮಿಸಿದ್ದು ಗಮನ ಸೆಳೆಯಿತು.
ಈ ವರ್ಷದ ಎರಡು ಬಹುನಿರೀಕ್ಷಿತ ಚಿತ್ರಗಳಲ್ಲಿ ‘ಕೆಡಿ’ ಕೂಡ ಒಂದು. ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟು ಹಾಕಿರುವ ಈ ಚಿತ್ರಕ್ಕೆ ಪ್ರೇಮ್ ಸಾಕಷ್ಟು ಪರಿಶ್ರಮ ಹಾಕುತ್ತಿದ್ದಾರೆ.
ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಈ ಪ್ಯಾನ್ ಇಂಡಿಯಾ ಚಿತ್ರವನ್ನು ಕೆ.ವಿ.ಎನ್. ಪ್ರೊಡಕ್ಷನ್ಸ್ ಅತಿ ದೊಡ್ಡ ಬಂಡವಾಳದಲ್ಲಿ ನಿರ್ಮಾಣ ಮಾಡುತ್ತಿದೆ.
ಕೆಡಿ ಚಿತ್ರದ ವಿಶೇಷವೆಂದರೆ ಚಿತ್ರದ ಆಡಿಯೋ ಹಕ್ಕುಗಳು ಆನಂದ್ ಆಡಿಯೋ ಸಂಸ್ಥೆಗೆ ದಾಖಲೆ ಬೆಲೆಗೆ (ಸುಮಾರು 18 ಕೋಟಿ) ಮಾರಾಟವಾಗಿರುವುದು.
ಈಗಾಗಲೇ ಈ ಚಿತ್ರದ ಮೊದಲ ಹಾಡು, ‘ಶಿವ ಶಿವ..’ ಹಾಡು ಅತಿ ದೊಡ್ಡ ಹಿಟ್ ಆಗಿರುವುದಲ್ಲದೆ ವಿಶೇಷ ಟ್ರೆಂಡ್ ಸೃಷ್ಟಿ ಮಾಡಿರುವುದು ಗಮನಾರ್ಹ.
ಮತ್ತೊಂದು ಹಾಡು ‘ಸೆಟ್ಟಾಗಲ್ಲಾ ಕಣೆ ನಂಗೂ ನಿಂಗೂ..’ ದೊಡ್ಡ ದಾಖಲೆ ಬರೆಯುವ ದಾರಿಯಲ್ಲಿದೆ. ನಿರ್ದೇಶಕ ಪ್ರೇಮ್ ಅವರೇ ರಚಿಸಿರುವ ಈ ಹಾಡಿಗೆ ಬಾಲಿವುಡ್ ಹೆಸರಾಂತ ಗಾಯಕ ಮಿಖಾ ಸಿಂಗ್ ದನಿಯಾಗಿದ್ದಾರೆ.
ವಿಶೇಷವೆಂದರೆ ಈ ಹಾಡಿನ ಚಿತ್ರೀಕರಣ ಇನ್ನೂ ನಡೆದಿಲ್ಲ; ಹಾಡಿಗೆ ಹುಕ್ ಸ್ಟೆಪ್ ಕಲ್ಪನೆಯನ್ನು ಪ್ರೇಕ್ಷಕರಿಗೇ ಬಿಡಲಾಗಿದೆ. ಸಾಮಾಜಿಕ ಜಾಲದಲ್ಲಿ ಜನಪ್ರಿಯವಾಗುವ ಹುಕ್ ಸ್ಟೆಪ್ ನ್ನು ಚಿತ್ರತಂಡ ಬಳಸಿಕೊಳ್ಳಲಿದೆ. ಹಾಗೆಯೇ ಆಯ್ಕೆಯಾದ ಸ್ಟೆಪ್ ಗೆ ಬಹುಮಾನ ನೀಡಲಿದೆ ಎಂಬ ವಿವರ ನೀಡಿದರು ನಿರ್ದೇಶಕ ಪ್ರೇಮ್.
ಈ ಚಿತ್ರಕ್ಕೆ ತಪ್ಪಸ್ಸಿನಂತೆ ಕೆಲಸ ಮಾಡಲಾಗಿದೆ. ಹಾಗಾಗಿ ಈ ಹಾಡು ಕೂಡ ನಮಗೆ ವರವಾಗಿದೆ ಎಂದವರು ಸಂಗೀತ ನಿರ್ದೇಶಕ ಅರ್ಜುನ್ ಜನ್ಯ.
ಮಿಕಾ ಸಿಂಗ್ ದುಬಾರಿ ಗಾಯಕ. ಅವರಿಂದ ಹಾಡು ಹಾಡಿಸಿರುವುದು ಹೆಮ್ಮೆಯ ವಿಷಯ. ಅವರು ಕನ್ನಡ ಮತ್ತು ಹಿಂದಿ ಭಾಷೆಗೆ ಹಾಡಿದ್ದಾರೆ. ಉಳಿದ ಭಾಷೆಗಳಿಗೆ ಅಲ್ಲಿನ ಸ್ಥಳೀಯ ಗಾಯಕರು ಹಾಡಿದ್ದಾರೆ ಎಂಬ ವಿವರ ಕೊಟ್ಟರು.
ಧ್ರುವ ಸರ್ಜಾ ಹಾಗೂ ರೀಷ್ಮಾ ನಾಣಯ್ಯ ಜೋಡಿ ವೇದಿಕೆ ಮೇಲೆ ಹಾಡಿ ಕುಣಿದಿದ್ದು ವಿಶೇಷ. ಕೆವಿಎನ್ ಸಂಸ್ಥೆಯ ಬ್ಯುಸಿನೆಸ್ ಹೆಡ್ ಸುಪ್ರೀತ್, ಚಿತ್ರಕ್ಕಾಗಿ ಪ್ರತಿಯೊಬ್ಬರೂ ತುಂಬಾ ಶ್ರಮ ಹಾಕಿದ್ದಾರೆ, ಚಿತ್ರವು ಆಗಸ್ಟ್ ನಲ್ಲಿ ಪ್ರೇಕ್ಷಕರ ಮುಂದೆ ಬರಲಿದೆ ಎಂಬ ವಿವರ ಕೊಟ್ಟರು.
ಆನಂದ್ ಆಡಿಯೋ ಸಂಸ್ಥೆಯ ಶ್ಯಾಮ್, ಛಾಯಾಗ್ರಾಹಕ ವಿಲಿಯಂ ಡೇವಿಡ್ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
70ರ ದಶಕದಲ್ಲಿ ನಡೆಯುವ ಕಾಲ್ಪನಿಕ ಕಥೆಯಲ್ಲಿ ಕಾಳಿದಾಸ ಎಂಬ ಭೂಗತ ಜಗತ್ತಿನ ವ್ಯಕ್ತಿಯ ಸುತ್ತ ಹೆಣೆಲಾಗಿರುವ ಕಥೆ ಮತ್ತು ಅದೇ ಕಾಲ ಘಟ್ಟದಲ್ಲಿ ಚಿತ್ರೀಕರಣಗೊಳಿಸುವ ಸಾಹಸ ಕಾರಣದಿಂದ ಚಿತ್ರವು ಹೊಸತನದ ಹೆಜ್ಜೆಗಳನ್ನು ಬಿಟ್ಟು ಕೊಡಲಿದೆ.
ಸಂಜಯ್ ದತ್, ಶಿಲ್ಪಾ ಶೆಟ್ಟಿ ಅಲ್ಲದೆ ನೋರಾ ಫತೇಹಿ ಸೇರಿದಂತೆ ಬಾಲಿವುಡ್‌ನ ಅನೇಕ ಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ. ಜೊತೆಗೆ ಕ್ರೇಜಿಸ್ಟಾರ್ ರವಿಚಂದ್ರನ್, ನಟ ರಮೇಶ್ ಅರವಿಂದ್ ಮೊದಲಾದ ಹೆಸರಾಂತ ಕಲಾವಿದರ ದಂಡೇ ಈ ಚಿತ್ರದಲ್ಲಿದೆ.
ಕನ್ನಡ, ತೆಲುಗು ತಮಿಳು ಹಿಂದಿ ಹಾಗೂ ಮಲಯಾಳಂ ಸೇರಿದಂತೆ ಬಹುಭಾಷೆಗಳಲ್ಲಿ ‘ಕೆಡಿ’ ಚಿತ್ರವು ಆಗಸ್ಟ್ ತಿಂಗಳಲ್ಲಿ ತೆರೆಕಾಣಲಿದೆ.