ಇದು ಹೊಸಬರ ಚಿತ್ರ. ಹಾಗೆಂದ ಮಾತ್ರಕ್ಕೆ ಇದು ಮಾಮೂಲಿ ಚಿತ್ರವಲ್ಲ; ಬದಲಿಗೆ ಹೊಸಬರ ವಿಭಿನ್ನ ಪ್ರಯತ್ನದ ಚಿತ್ರ.
ಮಲೆನಾಡ ತವರು ಶಿವಮೊಗ್ಗೆಯ ಕ್ರಿಯಾಶೀಲ ಗುಂಪು ಈ ಚಿತ್ರ ನಿರ್ಮಾಣ ಮಾಡಿದೆ ಮತ್ತು ನಿರ್ದೇಶಕರು ಸಹ ಅವರ ಸಹಪಾಠಿ..
ಅಂದ ಹಾಗೆ ಚಿತ್ರದ ಹೆಸರು ‘ಯೆಲ್ಲೋ ಗ್ಯಾಂಗ್ಸ್’. ಶಿವಮೊಗ್ಗೆಯವರೇ ಆದ ರವೀಂದ್ರ ಪರಮೇಶ್ವರಪ್ಪ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಚಿತ್ರದ ಟ್ರೈಲರ್ ಬಿಡುಗಡೆಯ ಸಮಾರಂಭದಲ್ಲಿ ಮನ ಬಿಚ್ಚಿ ಮಾತನಾಡಿತು ಚಿತ್ರತಂಡ.
ನಾಲ್ಕೈದು ಖಳರ ಗುಂಪುಗಳು ನಡೆಸುವ ಪರಸ್ಪರ ಕಾದಾಟ ಹಾಗೂ ಹುಡುಕಾಟಗಳನ್ನು ಮುಖ್ಯವಾಗಿ ಹೊಂದಿರುವ ಚಿತ್ರದ ಉದ್ದಕ್ಕೂ ಕ್ಷಣ ಕ್ಷಣದ ಕುತೂಹಲ ಕಾಯ್ದುಕೊಂಡು ಹೋಗುತ್ತದೆ.
ಚಿತ್ರದ ಆಶಯಗಳು ಬೇರೆ ಇವೆ. ಇದಕ್ಕಾಗಿ ಹೊಸ ತಂತ್ರಗಳನ್ನು ಹುಡುಕಿದ ಬಗೆಯನ್ನು ತಾಂತ್ರಿಕ ಅಂಶಗಳ ಜೊತೆಯೇ ವಿವರಿಸಿದರು ನಿರ್ದೇಶಕರು.
‘ಜೊತೆ ಜೊತೆಯಲಿ’ ಖ್ಯಾತಿಯ ಕೊಡಗು ಮೂಲದ ದೇವ್ ದೇವಯ್ಯ ಹಾಗೂ ಅರ್ಚನಾ ಕೊಟ್ಟಿಗೆ ಮುಖ್ಯ ಪಾತ್ರದಲ್ಲಿರುವ ಚಿತ್ರದಲ್ಲಿ ಗ್ಯಾಂಗ್ಸ್ ಗುಂಪಿನ ದೊಡ್ಡ ನಟರ ಪಡೆಯೇ ಇದೆ.
ಪೊಲೀಸ್ ಅಧಿಕಾರಿ ಪಾತ್ರದಲ್ಲಿರುವ ದೇವ್ ದೇವಯ್ಯ ಹೆಚ್ಚಿನ ಸಂದರ್ಭದಲ್ಲಿ ಮಾರುವೇಷದಲ್ಲಿ ಕಾಣಿಸಿಕೊಳ್ಳುವುದರಿಂದ ಪೊಲೀಸ್ ವಸ್ತ್ರ ಧರಿಸುವುದಿಲ್ಲ. ಅರ್ಚನಾ ಅವರಿಗೆ ಹುಡುಕಾಟದ ಪಾತ್ರ.
ದಿಲೀಪ್ ಕಟ್ಟಿ, ಸತ್ಯ, ಅರುಣ್, ಹರ್ಷ, ನಾಟ್ಯರಂಗ, ಪ್ರದೀಪ್ ಪೂಜಾರಿ ತಮ್ಮ ಪಾತ್ರಗಳ ಬಗ್ಗೆ ಹೇಳಿಕೊಂಡರು.
ಹಣಕಾಸು ನಿರ್ವಹಣೆ ಮಾಡಿರುವ ನಿರಂಜನ್, ಸಂಗೀತ ನೀಡಿರುವ
ರೋಹಿತ್ ಸೌರವ್, ಸಂಭಾಷಣೆ ಬರೆದಿರುವ ಪ್ರವೀಣ್ ಹಾಗೂ ನಿರ್ಮಾಪಕ ಮನು ಮಾತನಾಡಿದರು.
ಶಿವಮೊಗ್ಗದ ಹಳೆ ವಿದ್ಯಾರ್ಥಿಗಳ ಗುಂಪು ಗ್ರೂಪ್ ಫಂಡ್ ಮೂಲಕವೇ ಚಿತ್ರ ನಿರ್ಮಾಣ ಮಾಡಿದೆ. ಕೋವಿಡ್ ಗೆ ಮುಂಚೆ ಸೆಟ್ಟೇರಿದ ಚಿತ್ರ ಅದೇ ಕಾರಣದಿಂದ ಬಿಡುಗಡೆಗೆ ತಡ ಮಾಡಿಕೊಂಡಿದೆ.
ಮುಂದಿನ ತಿಂಗಳು ಅಂದರೆ ನವೆಂಬರ್ 11ರಂದು ಚಿತ್ರವು ಬಿಡುಗಡೆ ಕಾಣುತ್ತಿದ್ದು, ಅದಕ್ಕಾಗಿ ಎಲ್ಲಾ ಸಿದ್ದತೆ ನಡೆಸಿದೆ ಚಿತ್ರತಂಡ.