ಆ ದಿನಗಳು ಖ್ಯಾತಿಯ ಕೆ.ಎಂ.ಚೈತನ್ಯ ನಿರ್ದೇಶನದ ‘ಬಲರಾಮನ ದಿನಗಳು’ ಚಿತ್ರದ ಚಿತ್ರೀಕರಣ ಬಿರುಸಿನಿಂದ ಸಾಗುತ್ತಿದ್ದು, ಬಹುಭಾಷಾ ನಟ ಆಶಿಶ್ ವಿದ್ಯಾರ್ಥಿ ಚಿತ್ರ ತಂಡಕ್ಕೆ ಸೇರ್ಪಡೆಗೊಂಡಿರುವುದು ವಿಶೇಷ.
ಆರಂಭದಿಂದಲೂ ಸಾಕಷ್ಟು ಸದ್ದು ಮಾಡುತ್ತಿರುವ ಮರಿ ಟೈಗರ್ ವಿನೋದ್ ಪ್ರಭಾಕರ್ ಮುಖ್ಯ ಪಾತ್ರದಲ್ಲಿರುವ ‘ಬಲರಾಮನ ದಿನಗಳು’ ಚಿತ್ರದ ಪ್ರಮುಖ ಪಾತ್ರದಲ್ಲಿ ಬಹುಭಾಷಾ ನಟ ಆಶಿಶ್ ವಿದ್ಯಾರ್ಥಿ ಅಭಿನಯಿಸುತ್ತಿದ್ದಾರೆ.
ಕನ್ನಡ, ಹಿಂದಿ, ತಮಿಳು, ತೆಲುಗು ಸೇರಿದಂತೆ ಹನ್ನೊಂದು ಭಾಷೆಗಳ ಚಿತ್ರಗಳಲ್ಲಿ ನಟಿಸಿರುವ ಆಶಿಶ್ ವಿದ್ಯಾರ್ಥಿ ಅವರು ತಮ್ಮ ಅಮೋಘ ಅಭಿನಯದ ಮೂಲಕ ಗಮನ ಸೆಳೆದಿರುವುದೇ ವಿಶೇಷ.
ಸದ್ಯ ಚಿತ್ರದ ಚಿತ್ರೀಕರಣ ಮೈಸೂರಿನಲ್ಲಿ ನಡೆಯುತ್ತಿದ್ದು ಆಶಿಶ್ ವಿದ್ಯಾರ್ಥಿ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ. ವಿಭಿನ್ನ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಚಿತ್ರತಂಡ ಆಶಿಶ್ ವಿದ್ಯಾರ್ಥಿ ಅವರಿಗೆ ಸ್ವಾಗತ ಕೋರಿದೆ.
ಪದ್ಮಾವತಿ ಫಿಲಂಸ್ ಲಾಂಛನದಲ್ಲಿ ಪದ್ಮಾವತಿ ಜಯರಾಂ ಹಾಗೂ ಶ್ರೇಯಸ್ ಅವರ ಚೊಚ್ಚಲ ನಿರ್ಮಾಣದಲ್ಲಿ ಅದ್ದೂರಿಯಾಗಿ ಮೂಡಿಬರುತ್ತಿರುವ ಈ ಚಿತ್ರವನ್ನು ‘ಆ ದಿನಗಳು’ ಖ್ಯಾತಿಯ ಕೆ.ಎಂ.ಚೈತನ್ಯ ನಿರ್ದೇಶಿಸುತ್ತಿದ್ದಾರೆ.
ವಿನೋದ್ ಪ್ರಭಾಕರ್ ಜೋಡಿಯಾಗಿ ಪ್ರಿಯಾ ಆನಂದ್ ನಟಿಸುತ್ತಿದ್ದು, ಈಗಾಗಲೇ ನಟ ಅತುಲ್ ಕುಲಕರ್ಣಿ ಚಿತ್ರದ ಭಾಗವಾಗಿರುವುದು ವಿಶೇಷ.
80ರ ದಶಕದ ಕಾಲಘಟ್ಟದಲ್ಲಿ ನಡೆಯುವ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ಭಾರತದ ಹೆಸರಾಂತ ಸಂಗೀತ ನಿರ್ದೇಶಕ ಸಂತೋಷ್ ನಾರಾಯಣನ್ ಸಂಗೀತ ನೀಡುತ್ತಿದ್ದಾರೆ. ಇದು ಸಂತೋಷ್ ನಾರಾಯಣನ್ ಸಂಗೀತ ನೀಡುತ್ತಿರುವ ಕನ್ನಡದ ಮೊದಲ ಚಿತ್ರವಾಗಿದೆ.