ವಿನೋದ್ ಪ್ರಭಾಕರ್ ಅಭಿನಯದ ಫೈಟರ್ ಚಿತ್ರಕ್ಕೆ ಪ್ರೇಕ್ಷಕ ಪ್ರಭುವಿನಿಂದ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ.
ಬಿಡುಗಡೆಯ ದಿನವಾದ ಅಕ್ಟೋಬರ್ 6 ರಿಂದ ಇಲ್ಲಿಯವರೆಗೆ ಪ್ರೇಕ್ಷಕನ ಅಪೂರ್ವ ಬೆಂಬಲ ಸಿಕ್ಕಿದೆ ಎಂದು ಚಿತ್ರದ ನಿರ್ಮಾಪಕ ಕೆ.ಸೋಮಶೇಖರ್ ಮಾಧ್ಯಮಗಳಿಗೆ ವಿವರಿಸಿದರು.
ಅದು ಚಿತ್ರದ ಯಶಸ್ಸಿನ ಸುದ್ದಿಗೋಷ್ಠಿ. ವಿನೋದ್ ಪ್ರಭಾಕರ್, ನಟಿ ಲೇಖಾಚಂದ್ರ, ನಿರ್ದೇಶಕ ನೂತನ್ ಉಮೇಶ್, ನಿರ್ಮಾಪಕ ಸೋಮಶೇಖರ್ ಕಟ್ಟಿಗೇನಹಳ್ಳಿ ಹಾಗೂ ಕಾರ್ಯಕಾರಿ ನಿರ್ಮಾಪಕ ಮುನೇಂದ್ರ ಹಾಜರಿದ್ದರು.
ಚಿತ್ರತಂಡ ಜಿಲ್ಲೆ ಹಾಗೂ ತಾಲ್ಲೂಕು ಕೇಂದ್ರಗಳಿಗೆ ಪ್ರವಾಸ ಕೈಗೊಂಡು ಅಲ್ಲಿನ ಪ್ರತಿಕ್ರಿಯೆಗಳನ್ನು ಗಮನಿಸಿದೆ. ಮಂಡ್ಯ, ಮದ್ದೂರು, ಮಳವಳ್ಳಿ, ಮೈಸೂರು ಮೊದಲಾದ ನಗರಗಳಲ್ಲಿ ಚಿತ್ರಕ್ಕೆ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದರು ನಿರ್ದೇಶಕ ನೂತನ್ ಉಮೇಶ್.
ಈ ಸಿನಿಮಾ ತಡವಾಗಿ ಬಿಡುಗಡೆಯಾದರೂ ರೈತ ಸ್ನೇಹಿಯಾಗಿದೆ ಮತ್ತು ಉತ್ತಮ ಸಂದೇಶವಿದೆ ಎಂದರು ಸೋಮಶೇಖರ್. ಚಿತ್ರದ ನಿರ್ಮಾಣ ದಲ್ಲಿ ಸಹಕಾರಿಯಾದ ಎಲ್ಲರನ್ನೂ ನೆನೆದು ಧನ್ಯವಾದ ಹೇಳಿದರು.
ಪ್ರೇಕ್ಷಕ ಪ್ರಭುವಿನ ಆಶೀರ್ವಾದ ನೋಡಿ ಮನಸ್ಸು ತುಂಬಿ ಬಂದಿದೆ. ಕಷ್ಟ ಪಟ್ಟಿರುವುದಕ್ಕೂ ಸಾರ್ಥಕತೆ ಉಂಟಾಗಿದೆ ಎಂದರು ವಿನೋದ್ ಪ್ರಭಾಕರ್.
ಪ್ರೇಕ್ಷಕ ಪ್ರಭುವಿಗೆ ಧನ್ಯವಾದ ಹೇಳುವೆ ಎಂದರು ಲೇಖಾಚಂದ್ರ.