* ಸ್ಪಂದನಾ ಪಂಚಭೂತಗಳಲ್ಲಿ ಲೀನ
* ತಾರೆಯರ ಭಾವುಕ ಕ್ಷಣಗಳು
* ಶೋಕ ಸಾಗರದಲ್ಲಿ ಚಿತ್ರರಂಗ
ಆಕಾಶದ ಭಾರವನ್ನೆಲ್ಲಾ ತಲೆಯ ಮೇಲೆ ಹೊದ್ದು ಮಲಗಿದಂತೆ ಪ್ರಕ್ಷುಬ್ಧ ವಾಗಿದ್ದ ಮನಸ್ಥಿತಿಯನ್ನು ಹತೋಟಿಗೆ ತಂದು ಪ್ರತಿಯೊಬ್ಬರ ಸಾಂತ್ವನದ ಅಪ್ಪುಗೆ ಸ್ವೀಕರಿಸುತ್ತಿದ್ದರೂ ವಿಜಯ ರಾಘವೇಂದ್ರ ಅವರನ್ನಾವರಿಸಿದ್ದ ಶೂನ್ಯ ಭಾವ ಯಾರಿಂದಲೂ ತುಂಬುವುದು ಬಹುಶಃ ಸಾಧ್ಯವಿರಲಿಲ್ಲ..
ಮಲ್ಲೇಶ್ವರದಲ್ಲಿರುವ ನಿವೃತ್ತ ಪೊಲೀಸ್ ಹಿರಿಯ ಅಧಿಕಾರಿ ಬಿ.ಕೆ.ಶಿವರಾಮ್ ಅವರ ನಿವಾಸದ ಆವರದಲ್ಲಿ ಜನ ಸಾಗರದ ನಡುವೆ ಯಾವ ಸ್ಪಂದನೆಯೂ ಇಲ್ಲದಂತೆ ತಣ್ಣಗೆ ಮಲಗಿದ್ದರು ಸ್ಪಂದನಾ..
ಹೇಳಿ ಕೇಳಿ ರಾಜ್ (ದೊಡ್ಮನೆ) ಕುಟುಂಬ; ಜೊತೆಗೆ ರಾಜಕೀಯದಲ್ಲಿ ದೊಡ್ಡ ಪ್ರಭಾವವಿರುವ ಕುಟುಂಬ ಹಾಗಾಗಿ ಚಿತ್ರರಂಗ, ರಾಜಕೀಯ ಹಾಗೂ ಬಂಧು ಬಾಂಧವರಿಗೆ ಕೊರತೆಯೇ ಇರಲಿಲ್ಲ..
ಸಭ್ಯ ನಟ ಎಂದೇ ಹೆಸರಾದ ವಿಜಯ ರಾಘವೇಂದ್ರ ಗಳಿಕೆ ಮಾಡಿರುವ ಸ್ನೇಹ ಬಳಗ ದೊಡ್ಡದು ಜೊತೆಗೆ ಸಿನಿಮಾ ಮನೆತನ. ತಮ್ಮ ಶ್ರೀಮುರಳಿ ಸ್ಟಾರ್ ನಟ ಹೀಗೆ ದೊಡ್ಡತನದ ಸಾಕಷ್ಟು ಕೊಂಡಿಗಳನ್ನು ಹೊಂದಿರುವ ಕಾರಣ ಬುಧವಾರ ಸ್ಪಂದನಾ ಸಾವಿನ ಶೋಕ ಸಾಗರದ ಹೊರತಾಗಿ ಮಾಧ್ಯಮಗಳಲ್ಲಿ ಬೇರೇನೂ ಕಾಣಲೇ ಇಲ್ಲ.
ರಾತ್ರಿ ಸುಮಾರು ಒಂದು ಗಂಟೆಗೆ ಸ್ಪಂದನಾ ಪಾರ್ಥಿವ ಶರೀರ ಥೈಲ್ಯಾಂಡ್ ನಿಂದ ಮನೆಯ ಆವರಣಕ್ಕೆ ಆಗಮಿಸಿದ ಕ್ಷಣದಿಂದ ಆ ಮನೆಯನ್ನು ಸುತ್ತುವರೆದಿತ್ತು ಜನ ಸಾಗರ.
ಥೈ ಏರ್ ವೇಸ್ ಮೂಲಕವೇ ಬಂದ ವಿಜಯ ರಾಘವೇಂದ್ರ ಅವರನ್ನು ಸಹೋದರ ಶ್ರೀಮುರಳಿ ಹಾಗೂ ಚಿತ್ರರಂಗದ ಗೆಳೆಯರು ದುಃಖತಪ್ತರಾಗಿಯೇ ಬರ ಮಾಡಿಕೊಂಡರು.
ವಿಜಯ ರಾಘವೇಂದ್ರ ಮನೆಯ ಆವರಣ ಪ್ರವೇಶಿಸುವಾಗ ಪುತ್ರನ ಕೈ ಹಿಡಿದೇ ಬಂದರು. ಬಳಿಕ ಅವರ ಮಾವ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಗೀತಾ ಶಿವರಾಜ್ ಕುಮಾರ್ ಹಾಗೂ ಬಂಧು ಬಳಗದ ಆಗಮನವಾಯ್ತು.
ಬುಧವಾರ ಮುಂಜಾನೆ ಸ್ಪಂದನಾ ಪಾರ್ಥಿವ ಶರೀರವನ್ನು ತಂದು ಮನೆಯ ಆವರಣದಲ್ಲಿ ಇರಿಸಿದ ಅ ಕ್ಷಣದಿಂದ ಲೆಕ್ಕವಿಲ್ಲದಷ್ಟು ಅಭಿಮಾನಿಗಳು, ಗಣ್ಯರು ಸೇರಿ ಅಂತಿಮ ದರ್ಶನ ಪಡೆಯ ತೊಡಗಿದರು.
ವಿಧಾನಸಭಾಧ್ಯಕ್ಷ ಯು.ಟಿ.ಖಾದರ್, ಹಿರಿಯ ನಟ ಶ್ರೀನಾಥ್, ದೊಡ್ಡಣ್ಣ, ರಾಘವೇಂದ್ರ ರಾಜ್ ಕುಮಾರ್, ಅಶ್ವಿನಿ ಪುನೀತ್ ರಾಜ್ ಕುಮಾರ್ ಹಾಗೂ ರಾಘಣ್ಣ ಕುಟುಂಬದ ಸದಸ್ಯರು ಸೇರಿದಾಗ ಅಲ್ಲಿ ಕಣ್ಣೀರ ಕಡಲು ಉಕ್ಕಿ ಹರಿಯಿತು.
ನಟ ಯಶ್, ಜಗ್ಗೇಶ್, ಧ್ರುವಸರ್ಜಾ, ರಮೇಶ್ ಅರವಿಂದ್ ಸುಂದರ್ ರಾಜ್, ಭಾ.ಮ.ಹರೀಶ್, ಕೃಷ್ಣ ಅಜಯ್ ರಾವ್, ಕೆ.ಶಿವರಾಂ, ವಿನೋದ್ ರಾಜ್, ಅನುಶ್ರೀ, ಉಮಾಶ್ರೀ, ಜಯಮಾಲ ಹೀಗೆ ಬಂದವರೆಲ್ಲಾ ವಿಜಯ್ ಅಪ್ಪಿ ಸಾಂತ್ವಾನ ಹೇಳುತ್ತಿದ್ದರು.
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಗೃಹ ಸಚಿವ ಡಾ.ಜಿ.ಪರಮೇಶ್ವರ್, ಸಚಿವರಾದ ರಾಮಲಿಂಗಾರೆಡ್ಡಿ, ಪ್ರಿಯಾಂಕ್ ಖರ್ಗೆ ಹೀಗೆ ರಾಜಕೀಯ ಅಗ್ರಗಣ್ಯರ ದಂಡು ಆಗಮಿಸಿ ವಿಜಯ್ ಹಾಗೂ ಬಿ.ಕೆ.ಶಿವರಾಮ್ ಕುಟುಂಬಕ್ಕೆ ಸಾಂತ್ವಾನ ಹೇಳಿತು.
ಶಾಸಕ ಮುನಿರತ್ನ, ಬಿ.ಕೆ.ಹರಿಪ್ರಸಾದ್, ಎಸ್.ಎ.ಚಿನ್ನೇಗೌಡ ಹಾಗೂ ಕುಟುಂಬದ ಸದಸ್ಯರು ಗಣ್ಯರ ಓಡಾಟದ ಉಸ್ತುವಾರಿ ವಹಿಸಿದ್ದರು.
ಮಲ್ಲೇಶ್ವರ ದಿಂದ ಅಂತಿಮ ಯಾತ್ರೆ ಹೊರಟು ಹರಿಶ್ಚಂದ್ರ ಘಾಟ್ ನಲ್ಲಿ ಅದರ ವಿಧಿ ವಿಧಾನಗಳು ನಡೆದು ಸಂಜೆ 4.45ರ ಸುಮಾರಿಗೆ ಸ್ಪಂದನಾ ಅಗ್ನಿಯಲ್ಲಿ ಲೀನವಾದರು.
ಸ್ಪಂದನಾ ಮರಳಿ ಬಾರದೂರಿಗೆ ಹೊರಟು ಹೋಗಿದ್ದಾರೆ. ಇದು ಅನ್ಯಾಯದ ಸಾವು. ಅಕಾಲಿಕ ದುರ್ಮರಣ..
ಹೀಗೆ ಮರಗುತ್ತಲೇ ಯಾರು ಎಷ್ಟೇ ಅಪ್ಪುಗೆಯ ಸಾಂತ್ವಾನ ನೀಡಿದರೂ ವಿಜಯ ರಾಘವೇಂದ್ರ ಮನ ತುಂಬುತ್ತಿಲ್ಲ..
ಅದು ಖಾಲಿ.. ಖಾಲಿ..
ಶೂನ್ಯ ಭಾವ..