ಭಾವೈಕ್ಯತೆಯ ಸಂದೇಶ ಸಾರುವುದರ ಜೊತೆಗೆ ಪ್ರೇಕ್ಷಕರ ಮನಸ್ಸಿಗೆ ಕಚಗುಳಿ ಇಡುವ ಸಂಭಾಷಣೆ ಆಧಾರಿತ ಚಿತ್ರವಾಗಿದ್ದ ‘ತೋತಾಪುರಿ’ಯ ಮುಂದುವರೆದ ಭಾಗ ಈಗ ಸಿದ್ಧಗೊಂಡಿದೆ.
‘ತೋತಾಪುರಿ-2’ ಅದೇ ಹೆಸರಿನ ಈ ಚಿತ್ರ ಸದ್ಯವೇ ಬಿಡುಗಡೆ ಕಾಣುತ್ತಿದೆ. ಮೊದಲ ಭಾಗದಲ್ಲಿ ಬರೀ ನೋಟದಲ್ಲಿ ಕಾಣಿಸಿಕೊಂಡಿದ್ದ ಡಾಲಿ ಧನಂಜಯ್ ಈ ಭಾಗದಲ್ಲಿ ಪೂರ್ಣ ಪ್ರಮಾಣದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಡಾಲಿ ಧನಂಜಯ್ ಅವರ ಪಾತ್ರ ವಿಶೇಷವಾಗಿ ಮೂಡಿ ಬಂದಿದೆ ಎಂಬುದು ಚಿತ್ರತಂಡದ ವಿವರ. ನವರಸ ನಾಯಕ ಜಗ್ಗೇಶ್ ಹಾಗೂ ಧನಂಜಯ್ ಅವರ ಹೊಸ ಲುಕ್ ಇರುವ ಪೋಸ್ಟರ್ ನ್ನು ಸಹ ಚಿತ್ರತಂಡ ಬಿಡುಗಡೆಗೊಳಿಸಿದೆ.
ಕಳೆದ ಸೋಮವಾರ ಗುರು ಪೂರ್ಣಿಮೆ ಸಂದರ್ಭದಲ್ಲಿ ‘ತೋತಾಪುರಿ-2’ ರ ಹೊಸ ಲುಕ್ ನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಸದ್ಯವೇ ಚಿತ್ರದ ಟೀಸರ್, ಟ್ರೈಲರ್ ಬಿಡುಗಡೆಯಾಗಲಿದ್ದು, ಸೆನ್ಸಾರ್ ಪ್ರಕ್ರಿಯೆ ಬಳಿಕ ಚಿತ್ರದ ಬಿಡುಗಡೆ ದಿನಾಂಕ ಪ್ರಕಟಿಸು ಆಶಯದಲ್ಲಿದೆ ಚಿತ್ರತಂಡ.
ಎರಡನೇ ಭಾಗವೂ ಅತ್ಯಂಕ ಮನರಂಜನಾತ್ಮಕ ಅಂಶಗಳನ್ನು ಹೊಂದಿದ್ದು, ಪ್ರೇಕ್ಷಕರ ಮನಸ್ಸಿಗೆ ಕಚಗುಳಿ ಇಡುತ್ತದೆ ಎಂಬುದು ನಿರ್ಮಾಪಕ ಕೆ.ಎ.ಸುರೇಶ್ ಅನಿಸಿಕೆ.
ನಿರ್ದೇಶಕ ವಿಜಯ ಪ್ರಸಾದ್ ಅವರ ಡೈಲಾಗ್ ಪಂಚ್ ಕೂಡ ಮುಂದುವರಿಯಲಿವೆ.
ಡಾಲಿ ಧನಂಜಯ ಅಲ್ಲದೆ ಜಗ್ಗೇಶ್, ದತ್ತಣ್ಣ, ಸುಮನ ರಂಗನಾಥ್, ಅದಿತಿ ಪ್ರಭುದೇವ, ವೀಣಾ ಸುಂದರ್, ಹೇಮಾದತ್ ಹೀಗೆ ಮೊದಲ ಭಾಗದಲ್ಲಿದ್ದ ಬಹುತೇಕ ಪಾತ್ರಗಳು ಇಲ್ಲಿಯೂ ಮುಂದುವರಿಯಲಿವೆ.
ಮೊದಲ ಭಾಗದಲ್ಲಿ ನವರಸ ನಾಯಕ ಜಗ್ಗೇಶ್, ಅದಿತಿ ಪ್ರಭುದೇವ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ವಿಜಯ ಪ್ರಸಾದ್ ನಿರ್ದೇಶನ ಹಾಗೂ ಕೆ.ಎ.ಸುರೇಶ್ ನಿರ್ಮಾಣವಿತ್ತು.