ನವರಸ ನಾಯಕ ಜಗ್ಗೇಶ್ ಹಾಗೂ ನಿರ್ದೇಶಕ ವಿಜಯಪ್ರಸಾದ್ ಕಾಂಬಿನೇಷನ್ ಈಗಾಗಲೇ ‘ನೀರ್ ದೋಸೆ’ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಗಮನ ಸೆಳೆದಿದೆ.. ಇದೇ ಜೋಡಿ ಈಗ ‘ತೋತಾಪುರಿ’ ಮಾಡಿ ಮುಗಿಸಿದೆ.
ಚಿತ್ರದ ಕೆಲವು ಬೆಚ್ಚಿ ಬೀಳಿಸುವ ಸಂಗತಿಗಳಿಗಾಗಿ ಇದೇ ಜನವರಿ 24ರಂದು ಆಡಿಯೋ ಟೀಸರ್ ಬಿಡುಗಡೆ ಮಾಡುವ ಮೂಲಕ ಅಭಿಮಾನಿಗಳನ್ನು ಎದುರುಗೊಳ್ಳಲು ಚಿತ್ರತಂಡ ಸಜ್ಜಾಗಿದೆ.
ಆರಂಭದಿಂದಲೇ ಸಾಕಷ್ಟು ಕುತೂಹಲ ಕೆರಳಿಸಿರುವ ‘ತೋತಾಪುರಿ’ ಬಗ್ಗೆ ಚಿತ್ರರಂಗದಲ್ಲೂ ಬಹಳಷ್ಟು ನಿರೀಕ್ಷೆ ಮೂಡಿದೆ.. ಏಕೆಂದರೆ ಇದೇ ಮೊದಲ ಬಾರಿಗೆ ಕನ್ನಡದ ಕಾಮಿಡಿ ಸಿನಿಮಾವೊಂದು ಐದು ಭಾಷೆಗಳಲ್ಲಿ ಬಿಡುಗಡೆಯಾಗುವ ಮೂಲಕ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಲು ಸಜ್ಜಾಗಿದೆ.
ತಾರಾಗಣದ ವಿಷಯದಲ್ಲೂ ‘ತೋತಾಪುರಿ’ ಕಡಿಮೆಯೇನಿಲ್ಲ. ನವರಸ ನಾಯಕ ಜಗ್ಗೇಶ್ ಆದಿಯಾಗಿ ‘ಡಾಲಿ’ ಧನಂಜಯ್, ಸುಮನ್ ರಂಗನಾಥ್, ಅದಿತಿ ಪ್ರಭುದೇವ, ದತ್ತಣ್ಣ, ವೀಣಾ ಸುಂದರ್, ಹೇಮಾ ದತ್, ರೋಹಿತ್ ಪದಕಿ ಸೇರಿದಂತೆ ನೂರಾರು ಕಲಾವಿದರು ಈ ಸಿನಿಮಾದಲ್ಲಿದ್ದಾರೆ. ಈ ಹಿಂದೆ ಎರಡನೇ ಮದುವೆ, ಗೋವಿಂದಾಯ ನಮಃ, ಆರ್ ಎಕ್ಸ್ ಸೂರಿ, ಶಿವಲಿಂಗ ಮೊದಲಾದ ಸಿನಿಮಾಗಳನ್ನು ನಿರ್ಮಿಸಿರುವ ಕೆ.ಎ.ಸುರೇಶ್ ‘ಮೋನಿಫ್ಲಿಕ್ಸ್ ಸ್ಟುಡಿಯೋಸ್’ ಬ್ಯಾನರ್ ಅಡಿಯಲ್ಲಿ ‘ತೋತಾಪುರಿ’ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.
ಅಂದಹಾಗೆ ‘ತೋತಾಪುರಿ’ ಭಾಗ 1 ಹಾಗೂ ಭಾಗ 2 ರೂಪದಲ್ಲಿ ಬಿಡುಗಡೆಯಾಗಲಿದೆ ಎಂಬುದು ಮತ್ತೊಂದು ವಿಶೇಷ. ಈ ಚಿತ್ರದಲ್ಲಿ ರಾಜ್ಯ ಹಾಗೂ ರಾಷ್ಟ್ರ ಪ್ರಶಸ್ತಿ ಪಡೆದ ತಂತ್ರಜ್ಞರು ಕಾರ್ಯ ನಿರ್ವಹಿಸಿರುವುದು ಹೆಚ್ಚುಗಾರಿಕೆ. ರಾಗನಿಧಿ ಅನೂಪ್ ಸೀಳಿನ್ ಸಂಗೀತ ಸಂಯೋಜಿಸಿರುವ ಹಾಡುಗಳಿಗೆ ವಿಜಯಪ್ರಸಾದ್ ಸಾಹಿತ್ಯವಿದೆ. ನಿರಂಜನ್ ಬಾಬು ಛಾಯಾಗ್ರಹಣ ಹಾಗೂ ಸುರೇಶ್ ಅರಸ್ ಸಂಕಲನ ಈ ಚಿತ್ರಕ್ಕಿದೆ.