ಬಿಪಿಎಲ್ ಕಾರ್ಡ್ ಮಹತ್ವ ಪಡೆದುಕೊಂಡಿರುವ ಈ ದಿನಗಳಲ್ಲಿ ಸರ್ಕಾರಿ ಸವಲತ್ತು ಪಡೆಯುವ ಹಂಬಲವೂ ಹೆಚ್ಚಾಗಿದೆ. ಆದರೆ ಯಾವುದೂ ಸುಲಭವಲ್ಲ ಮತ್ತು ಯಾವುದೂ ನ್ಯಾಯವೂ ಅಲ್ಲ..
ಹಾಗಾಗಿ ಜನರ ಸಂಕಷ್ಟವನ್ನು ಬಿಂಬಿಸುವ ಚಿತ್ರವೊಂದು ಈಗ ತಯಾರಾಗುವ ಹಾದಿಯಲ್ಲಿದ್ದು, ಅದೇ ಕಾರಣಕ್ಕೆ ಗಮನ ಸೆಳೆದಿದೆ.
ಅಂದ ಹಾಗೆ ಚಿತ್ರದ ಹೆಸರು ‘ಸರ್ಕಾರಿ ನ್ಯಾಯ ಬೆಲೆ ಅಂಗಡಿ’..! ಅಚ್ಚರಿ ಎಂದರೆ ಈ ಚಿತ್ರದ ಮುಖ್ಯ ಪಾತ್ರದಲ್ಲಿರುವುದು ಗ್ಲಾಮರ್ ಬೆಡಗಿ ರಾಗಿಣಿ ದ್ವಿವೇದಿ.
ಗ್ರಾಮೀಣ ಭಾಗದ ಕಷ್ಟ ನಷ್ಟಗಳ ಜೊತೆಗೆ ಹೊಟ್ಟೆ ಪಾಡಿನ ವಿಷಯವೂ ಈ ಚಿತ್ರದ ಮೂಲಕ ಅನಾವರಣಗೊಳ್ಳುತ್ತಿದ್ದು, ಇದೇ ಮೊದಲ ಬಾರಿಗೆ ರಾಗಿಣಿ ಗ್ರಾಮೀಣ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಹಾಗಾಗಿ ಚಿತ್ರದಲ್ಲಿ ಪಕ್ಕಾ ಹಳ್ಳಿ ಹುಡುಗಿಯ ಪಾತ್ರದಲ್ಲಿ ಪ್ರೇಕ್ಷಕರ ಮುಂದೆ ಬರುವ ತಯಾರಿಯಲ್ಲಿದ್ದಾರೆ. ಈಗಾಗಲೇ ಚಿತ್ರದ ಸ್ಕ್ರಿಪ್ಟ್ ಕಾರ್ಯಗಳು ಪೂರ್ಣಗೊಂಡಿದ್ದು, ಇತ್ತೀಚೆಗಷ್ಟೇ ಚಿತ್ರತಂಡ ಸಿನಿಮಾದ ಶೀರ್ಷಿಕೆಯನ್ನು ಬಿಡುಗಡೆಗೊಳಿಸಿದೆ.
ಇದೀಗ ಚಿತ್ರತಂಡ, ಹಾಡುಗಳ ಧ್ವನಿಮುದ್ರಣ ಆರಂಭಿಸುವ ಮೂಲಕ ‘ಸರ್ಕಾರಿ ನ್ಯಾಯಬೆಲೆ ಅಂಗಡಿʼ ಚಿತ್ರದ ನಿರ್ಮಾಣ ಕಾರ್ಯಗಳಿಗೆ ಚಾಲನೆ ನೀಡಿದೆ.
ಬೆಂಗಳೂರಿನ ವಿಜಯನಗರದಲ್ಲಿರುವ ಆದಿಚುಂಚನಗಿರಿ ಶಾಖಾ ಮಠದಲ್ಲಿ ಈಚೆಗೆ ನಡೆದ ಸಮಾರಂಭದಲ್ಲಿ, ಸಂಗೀತ ನಿರ್ದೇಶಕ ಅನಂತ್ ಆರ್ಯನ್ ಸಂಗೀತ ಸಂಯೋಜನೆಯಲ್ಲಿ ಚಿತ್ರದ ಹಾಡುಗಳ ಮುದ್ರಣ ಕಾರ್ಯವನ್ನು ಅರಂಭಿಸಲಾಗಿದೆ.
ಈ ವೇಳೆ ರಾಗಿಣಿ ದ್ವಿವೇದಿ, ಕರ್ನಾಟಕ ರಾಜ್ಯ ಸರ್ಕಾರಿ ಪಡಿತರ ವಿತರಕರ ಸಂಘದ ಅಧ್ಯಕ್ಷ ಟಿ. ಕೃಷ್ಣಪ್ಪ, ನಟಿ ಗೀತಪ್ರಿಯ, ನಿರ್ಮಾಪಕಿಯರಾದ ತೇಜು ಮೂರ್ತಿ, ಎಸ್. ಪದ್ಮಾವತಿ ಚಂದ್ರಶೇಖರ್, ಹಿರಿಯ ನಿರ್ಮಾಪಕರಾದ ಭಾ. ಮ. ಹರೀಶ್, ಭಾ. ಮ. ಗಿರೀಶ್, ಹಿರಿಯ ನಿರ್ದೇಶಕ ಬಿ. ರಾಮಮೂರ್ತಿ, ಚಿತ್ರದ ನಿರ್ದೇಶಕ ಸಾತ್ವಿಕ್ ಪವನ್ ಕುಮಾರ್ ಸೇರಿದಂತೆ ಚಿತ್ರರಂಗದ ಅನೇಕ ಗಣ್ಯರು ಹಾಜರಿದ್ದರು.
ಇಲ್ಲಿಯವರೆಗೂ ಮಾಡಿರದ ವಿಭಿನ್ನ ಪಾತ್ರ ನನ್ನದು ಎಂದರು ರಾಗಿಣಿ.
‘ಜಯಶಂಕರ ಟಾಕೀಸ್ʼ ಬ್ಯಾನರಿನಡಿ ಚಿತ್ರವನ್ನು ತೇಜು ಮೂರ್ತಿ ಮತ್ತು ಎಸ್. ಪದ್ಮಾವತಿ ಚಂದ್ರಶೇಖರ್ ಜಂಟಿಯಾಗಿ ನಿರ್ಮಾಣ ಮಾಡುತ್ತಿದ್ದು, ಹಿರಿಯ ನಿರ್ದೇಶಕ ಬಿ. ರಾಮಮೂರ್ತಿ ಚಿತ್ರಕ್ಕೆ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆಯುತ್ತಿದ್ದಾರೆ.
ಇತ್ತೀಚೆಗಷ್ಟೇ ʼತಾಯವ್ವʼ ಎಂಬ ಚಿತ್ರವನ್ನು ನಿರ್ದೇಶಿಸಿದ್ದ ಸಾತ್ವಿಕ್ ಪವನ ಕುಮಾರ್ ʼಸರ್ಕಾರಿ ನ್ಯಾಯಬೆಲೆ ಅಂಗಡಿʼ ಚಿತ್ರಕ್ಕೆ ಛಾಯಾಗ್ರಹಣ ಮತ್ತು ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರದ ಮೂರು ಹಾಡುಗಳಿಗೆ ಅನಂತ್ ಆರ್ಯನ್ ಸಂಗೀತ ಸಂಯೋಜಿಸುತ್ತಿದ್ದಾರೆ.
ಇದೇ ಮಾರ್ಚ್ ತಿಂಗಳಿನಲ್ಲಿ ಚಿತ್ರೀಕರಣ ಆರಂಭಿಸುವ ಕುರಿತು ಮಾಹಿತಿಗಳನ್ನು ನೀಡಿತು ಚಿತ್ರತಂಡ.