ಮರ್ಡರ್ ಮಿಸ್ಟ್ರಿ ಜೊತೆಗೆ ಇನ್ ವೆಸ್ಟಿಗೇಷನ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಚಿತ್ರ ‘4 ಎನ್ 6’ ಚಿತ್ರದ ಚಿತ್ರೀಕರಣ ಮುಕ್ತಾಯಗೊಂಡಿದ್ದು, ಟೀಸರ್ ಸದ್ಯದಲ್ಲೇ ಬಿಡುಗಡೆ ಕಾಣಲಿದೆ.
ಫೊರೆನ್ಸಿಕ್ ಇಲ್ಲಿ 4 ಎನ್ 6 ಆಗಿದೆ.
ಪರ್ಪಲ್ ಪ್ಯಾಚ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಸಾಯಿಪ್ರೀತಿ ನಿರ್ಮಾಣ ಮಾಡುತ್ತಿರುವ ಈ ಚಿತ್ರಕ್ಕೆ ಬೆಂಗಳೂರು ಸುತ್ತಮುತ್ತ 30 ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ.
ಹಾಗೆಯೇ ಬಾಕಿ ಉಳಿದಿದ್ದ ವಿಶಿಷ್ಟ ಶೈಲಿಯ, ಆಂಗ್ಲ ಸಾಹಿತ್ಯವಿರುವ ಹಾಡನ್ನು ಚಿತ್ರೀಕರಿಸುವುದರೊಂದಿಗೆ ಕುಂಬಳಕಾಯಿ ಒಡೆಯಲಾಗಿದೆ ಎಂಬುದು ಚಿತ್ರತಂಡದ ವಿವರ.
‘ಲವ್ ಮಾಕ್ಟೇಲ್’ ಹಾಗೂ ‘ಲವ್ 360’ ಚಿತ್ರಗಳ ಖ್ಯಾತಿಯ ರಚನಾ ಇಂದರ್ ಹಾಗೂ ನವೀನ್ ಕುಮಾರ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿ ಕೊಂಡಿರುವ ‘4 ಎನ್ 6’ಚಿತ್ರಕ್ಕೆ ದರ್ಶನ್ ಶ್ರೀನಿವಾಸ್ ಅವರು ಆಕ್ಷನ್ ಕಟ್ ಹೇಳಿದ್ದಾರೆ.
ಕೊಲೆಯೊಂದರ ತನಿಖೆಯ ಸುತ್ತ ನಡೆಯುವ ಕಥಾಹಂದರ ಒಳಗೊಂಡ ಚಿತ್ರ ಇದಾಗಿದ್ದು, ನಟಿ ರಚನಾ ಇಂದರ್ ಅವರು ಮೊದಲ ಬಾರಿಗೆ ಫೊರೆನ್ಸಿಕ್ ಡಿಟೆಕ್ಟಿವ್ ಪಾತ್ರದಲ್ಲಿ ನಟಿಸಿದ್ದಾರೆ.
ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ಬ್ಯುಸಿಯಾಗಿರುವ ಚಿತ್ರತಂಡ ಮುಂದಿನ ತಿಂಗಳು ಚಿತ್ರದ ಟೀಸರ್ ಬಿಡುಗಡೆ ಮಾಡುವ ಮೂಲಕ ಪ್ರೊಮೋಷನ್ ಕಾರ್ಯಗಳಿಗೆ ಚಾಲನೆ ನೀಡಲಿದೆ.
ವಿಶೇಷವೆಂದರೆ, ಈ ಚಿತ್ರಕ್ಕೆ ನಿರ್ದೇಶಕರೇ ಸಂಕಲನಕಾರರಾಗಿದ್ದು ಅವರಿಗೆ ಮುತ್ತುರಾಜ್ ಬೆಂಬಲವಾಗಿ ಸಹಕರಿಸಿದ್ದಾರೆ. ಚರಣ್ ತೇಜ್ ಛಾಯಾಗ್ರಹಣ, ಸತ್ಯಕಹಿ ಸಂಭಾಷಣೆ ಹಾಗೂ ಸಾಯಿ ಸೋಮೇಶ್ ಸಂಗೀತ ಚಿತ್ರಕ್ಕಿದೆ.
ಭವಾನಿಪ್ರಕಾಶ್, ಮೇಘನಾ, ಸಂಜಯ್ ನಾಯಕ್, ಸೌರವ್, ಸತ್ಯ ಇತರ ಪಾತ್ರಗಳಲ್ಲಿದ್ದಾರೆ.