Snehapriya.com

June 7, 2025

ನಿರ್ಮಾಪಕರ ಸಂಘದ ನೂತನ ಕಟ್ಟಡ : ಮುಖ್ಯಮಂತ್ರಿ ಉದ್ಘಾಟನೆ

Social Share :

ಬೆಂಗಳೂರಿನ ಶಿವಾನಂದ ವೃತ್ತದ ಸಮೀಪ ನಿರ್ಮಾಣಗೊಂಡಿರುವ ನಿರ್ಮಾಪಕರ ಸಂಘದ ಅದ್ದೂರಿ ನೂತನ ಕಟ್ಟಡವೀಗ ಉದ್ಘಾಟನೆಗೆ ಸಜ್ಜಾಗಿದೆ..

ಇದೇ ಜೂನ್ 30ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘದ ನೂತನ ಕಟ್ಟಡ ಉದ್ಘಾಟಿಸಲಿದ್ದಾರೆ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಈ ಸಂದರ್ಭದಲ್ಲಿ ಹಾಜರಿರಲಿದ್ದಾರೆ.

ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿ, ಉದ್ಯಮದ ಅನೇಕ ಗಣ್ಯರ ಶ್ರಮ ಹಾಗೂ ಸಹಕಾರದಿಂದ ಈ ಕಟ್ಟಡ ಉದ್ಘಾಟನೆಯ ಹಂತಕ್ಕೆ ಬಂದಿದೆ ಎಂದು ಹೇಳಿದರು.

ಹೊಂಬಾಳೆ ಫಿಲಂಸ್‍, ಆರ್‌.ಎಸ್‌. ಗೌಡ, ವಾಣಿಜ್ಯ ಮಂಡಳಿ ಸೇರಿದಂತೆ ಅನೇಕರು ಈ ನೂತನ ಕಟ್ಟಡ ನಿರ್ಮಾಣಕ್ಕೆ ಸಹಾಯ ಮಾಡಿದ್ದಾರೆ. ನಿರ್ಮಾಪಕ ರಮೇಶ್‌ ರೆಡ್ಡಿ ಅವರು ಕಟ್ಟಡ ನಿರ್ಮಾಣ ಜವಾಬ್ದಾರಿ ಹೊತ್ತು ನೆರವಾಗಿದ್ದಾರೆ ಎಂದರು.

ಈ ಸಂದರ್ಭದಲ್ಲಿ ದಕ್ಷಿಣ ಭಾರತದ ಚಲನಚಿತ್ರ ವಾಣಿಜ್ಯ ಮಂಡಳಿ ಸದಸ್ಯರು, ಫಿಲಂ ಫೆಡರೇಷನ್‌ ಆಫ್‌ ಇಂಡಿಯಾ ಪದಾಧಿಕಾರಿಗಳು, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸದಸ್ಯರು ಭಾಗವಹಿಸಲಿದ್ದಾರೆ ಎಂಬ ಮಾಹಿತಿಯನ್ನೂ ನೀಡಿದರು.

ದಕ್ಷಿಣ ಭಾರತದಲ್ಲಿ ನಿರ್ಮಾಪಕರಿಗೆ ಸ್ವಂತ ಕಟ್ಟಡ ಹೊಂದಿರುವುದು ಕರ್ನಾಟಕದಲ್ಲಿ ಮಾತ್ರ ಎಂದು ನಿರ್ಮಾಪಕರ ಸಂಘದ ಕಟ್ಟಡ ನಿರ್ಮಾಣದ ಸಮಿತಿಯ ಅಧ್ಯಕ್ಷ ಸಾರಾ ಗೋವಿಂದು ಇದೇ ಸಂದರ್ಭದಲ್ಲಿ ತಿಳಿಸಿದರು.

ನಿರ್ಮಾಪಕರ ಸಂಘದ ಕಾರ್ಯದರ್ಶಿ ಪ್ರವೀಣ್ ಕುಮಾರ್, ಎಂ.ಜಿ. ರಾಮಮೂರ್ತಿ, ರಮೇಶ್‍ ಯಾದವ್‍, ಆರ್.ಎಸ್. ಗೌಡ ಉಪಸ್ಥಿತರಿದ್ದರು.

ಸಿನಿಮಾ-ಗಾಸಿಪ್
Social Share :

Leave a Comment

Your email address will not be published. Required fields are marked *