ಸಿನಿಮಾದ ಸಲುವಾಗಿ ಕಲಾವಿದರು ಅನೇಕ ಬಗೆಯಲ್ಲಿ ತಯಾರಿ ನಡೆಸಿ ಪಾತ್ರ ಪೋಷಣೆ ಮಾಡುವುದು ಅಚ್ಚರಿ ಅಲ್ಲ; ಆದರೆ ಇರುವ ಸ್ಥಿತಿಯಲ್ಲಿ ಸಿನಿಮಾ ಮಾಡುವುದು ಮತ್ತು ನೈಜತೆಗೆ ಒತ್ತು ನೀಡುವುದು ಶ್ರಮದಾಯಕ.
ಇಲ್ಲಿ ನಟಿ ಮಮತಾ ರಾಹುತ್ ನೈಜ ನಟನೆ ಮಾಡಿರುವುದು ಹೆಗ್ಗಳಿಕೆ. ಅದರಲ್ಲಿ ಗರ್ಭಿಣಿ ಆಗಿರುವಾಗ ಅದೇ ರೀತಿಯ ಪಾತ್ರವನ್ನು ನಿರ್ವಹಿಸಿದ್ದಾರೆ. ಚಿತ್ರದ ಹೆಸರು ತಾರಿಣಿ.
ಹೆಣ್ಣು ಭ್ರೂಣ ಹತ್ಯೆ ಪರಿಣಾಮಗಳ ಕುರಿತ ಬೆಳಕು ಚೆಲ್ಲುವ ಈ ಚಿತ್ರವನ್ನು ಮಮತಾ ರಾಹುತ್ ಅವರ ಪತಿ ಸುರೇಶ್ ಕೋಟ್ಯಾನ್ ಚಿತ್ರಾಪು ನಿರ್ಮಿಸುತ್ತಿದ್ದು, ಪೂರ್ಣಚಂದ್ರ ಇದರ ನಿರ್ದೇಶಕರು.
ಈಚೆಗೆ ನಡೆದ ಚಿತ್ರದ ಪೋಸ್ಟರ್ ಬಿಡುಗಡೆ ಸಮಾರಂಭದಲ್ಲಿ ಸಾಹಿತಿ, ಹೋರಾಟಗಾರ್ತಿ ಬಿ.ಟಿ.ಲಲಿತ ನಾಯಕ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.
ಚಿತ್ರದ ಮುಖ್ಯ ಪಾತ್ರದಲ್ಲಿರುವ ಮಮತಾ ರಾಹುತ್ ಈ ಹಿಂದೆ ಸಿಕ್ಸ್ ಪ್ಯಾಕ್ ಮಾಡಿ ದೇಹವನ್ನು ಹುರಿಗೊಳಿಸಿ ಗಮನ ಸೆಳೆದಿದ್ದರು. ಸಾಹಸದ ಕೆಲಸಗಳಿಗೆ ಆಗಾಗ ಒಡ್ಡಿಕೊಳ್ಳುವ ಮಮತಾ ಇಲ್ಲಿಯೂ ಸಾಹಸ ಮೆರೆದಿದ್ದಾರೆ.
ಗರ್ಭಿಣಿಯಾದಾಗ ಮತ್ತು ಆನಂತರ ಮಗುವಾದ ಎರಡೂ ಸಂದರ್ಭದ ನಟನೆಯಲ್ಲಿ ಮಮತಾ ಭಾಗವಹಿಸಿ ಗಮನ ಸೆಳೆದಿದ್ದಾರೆ. ಅವರ ಪತಿ ಸುರೇಶ್ ಕೋಟ್ಯಾನ್ ನಿರ್ಮಾಣ ಮಾಡುವುದರ ಜೊತೆಗೆ ನಟನೆಯನ್ನು ಮಾಡಿದ್ದಾರೆ.
ತೆರೆಗೆ ಬರಲು ಸಿದ್ದವಿರುವ ಈ ಚಿತ್ರದ ಪ್ರಮುಖ ಪಾತ್ರದಲ್ಲಿ ರೋಹಿತ್ ಕಾಣಿಸಿಕೊಂಡಿದ್ದು, ಉಳಿದ ತಾರಾಗಣದಲ್ಲಿ ಭವಾನಿ ಪ್ರಕಾಶ್, ಸುಧಾ ಪ್ರಸನ್ನ, ಪ್ರಮಿಳಾ ಸುಬ್ರಹ್ಮಣ್ಯಂ, ವಿಜಯಲಕ್ಷ್ಮಿ, ದೀಪಿಕಾಗೌಡ, ಸನ್ನಿ, ತೇಜಸ್ವಿನಿ, ಕವಿತ ಕಂಬಾರ್, ಬೇಬಿ ನಿಶಿತಾ, ಬೇಬಿ ರಿಧಿ, ಪ್ರಿನ್ಸ್ ಜಿತಿನ್ ಕೋಟ್ಯಾನ್, ಮಟಿಲ್ಡಾ ಡಿಸೋಜ, ಅರ್ಚನ ಗಾಯಕ್ವಾಡ್, ಶೀಬಾ ಮೂರ್ತಿ, ಶ್ವೇತಾ, ಚೈತ್ರ, ಮಂಜು ನಂಜನಗೂಡು, ರಘು ಸಮರ್ಥ್ ಇದ್ದಾರೆ.