ಸೈಕೋ ಮನಸ್ಥಿತಿಯ ದುಷ್ಟನೊಬ್ಬನ ಕೊಟಲೆಗಳನ್ನು ಪೊಲೀಸ್ ಅಧಿಕಾರಿ ಸಮರ್ಥವಾಗಿ ಎದುರಿಸುವ ಕಥೆಯೇ ಉಸಿರು..
ಆರ್.ಎಸ್.ಪಿ. ಪ್ರೊಡಕ್ಷನ್ಸ್ ಮೂಲಕ ಲಕ್ಷ್ಮಿ ಹರೀಶ್ ನಿರ್ಮಿಸುತ್ತಿರುವ ಈ ಚಿತ್ರದ ಶೀರ್ಷಿಕೆ ಅನಾವರಣ ಸಮಾರಂಭದಲ್ಲಿ ಚಿತ್ರತಂಡ ವಿವರಗಳನ್ನು ನೀಡಿತು.
ನಟ ತಿಲಕ್ ಹಾಗೂ ಪ್ರಿಯಾ ಹೆಗ್ಡೆ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಈ ಚಿತ್ರಕ್ಕೆ ಪ್ರಭಾಕರ್ ನಿರ್ದೇಶಕರು.
ಆರ್‌ಎಸ್‌ಪಿ ಗ್ರೂಪ್ ಆಫ್ ಕಂಪನೀಸ್ ನಡೆಸುತ್ತಿರುವ, ಲಕ್ಷ್ಮಿ ಹರೀಶ್ ಅವರು ನೂತನ ಪ್ರೊಡಕ್ಷನ್ ಹೌಸ್ ಆರಂಭಿಸಿ ಆ ಮೂಲಕ ಉಸಿರು ಚಿತ್ರವನ್ನು ನಿರ್ಮಿಸುತ್ತಿದ್ದಾರೆ.
ಒಬ್ಬ ಪೊಲೀಸ್ ಅಧಿಕಾರಿ, ತನ್ನ ಹೆಂಡತಿಗೆ ಅನಾಮಿಕ ವ್ಯಕ್ತಿಯಿಂದ ಪ್ರಾಣಕ್ಕೆ ಆಪತ್ತು ಬಂದಾಗ ಆತ ಪತ್ನಿಯನ್ನು ಹೇಗೆ ಕಾಪಾಡಿಕೊಳ್ಳುತ್ತಾನೆ ಮತ್ತು ತಾಯಿಯನ್ನು ಕೊಂದವರ ಮೇಲೆ ಹೇಗೆ ಪ್ರತೀಕಾರ ತೀರಿಸಿಕೊಳ್ಳುತ್ತಾನೆ ಎಂಬುದನ್ನು ಚಿತ್ರದ ಸಾರಾಂಶ.
ಸುಮಾರು 6 ತಿಂಗಳವರೆಗೆ ವರ್ಕ್ ಷಾಪ್ ನಡೆಸಿ ತಯಾರಾಗಿರುವ ಚಿತ್ರತಂಡ ಇದೇ ತಿಂಗಳ 17ರಿಂದ ಮಡಿಕೇರಿಯಲ್ಲಿ ಚಿತ್ರದ ಮುಹೂರ್ತ ನಡೆಸಿ ಚಿತ್ರೀಕರಣ ಆರಂಭಿಸಲಿದೆ.
ತಿಲಕ್ ಮುಖ್ಯ ಪಾತ್ರದಲ್ಲಿದ್ದು, ಅವರು ಪೊಲೀಸ್ ಅಧಿಕಾರಿಯ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ ಎಂಬ ಮಾಹಿತಿ ನೀಡಿತು ಚಿತ್ರತಂಡ.
ಉಳಿದಂತೆ ರಘು ರಾಮನಕೊಪ್ಪ, ರಂಗಾಯಣ ರಘು ನಟಿಸುತ್ತಿದ್ದಾರೆ, ಮುಖ್ಯವಾಗಿ 9 ಪಾತ್ರಗಳ ಮೇಲೆ ಚಿತ್ರದ ಕಥೆ ಸಾಗುತ್ತದೆ. ಮೊದಲ ಹಂತದಲ್ಲಿ ಮಡಿಕೇರಿ ಸುತ್ತಮುತ್ತ 15 ದಿನಗಳ ಚಿತ್ರೀಕರಣ ನಡೆಸಿ, ನಂತರ ಬೆಂಗಳೂರಲ್ಲಿ ಮುಂದುವರೆಸಲಾಗುವುದು ಎಂಬ ಉತ್ತರ ಕೊಟ್ಟರು ನಿರ್ದೇಶಕ ಪ್ರಭಾಕರ್.
ಸಂಗೀತ ನಿರ್ದೇಶಕ ಆರ್‌ಎಸ್‌ಜಿ ನಾರಾಯಣ, ಸಂತೋಷ್, ಅಪೂರ್ವ, ಅರುಣ್, ಸಂಭಾಷಣೆ ಬರೆದಿರುವ ಭೈರವರಾಮ(ಅಭಿ), ಸಂಕಲನಕಾರ ಹರೀಶ್ ಕೊಮ್ಮೆ ಉಪಸ್ಥಿತರಿದ್ದರು.