18 ಟು 25 ಚಿತ್ರವಿಮರ್ಶೆ
ಆಧುನಿಕ ಯುಗದಲ್ಲಿ ಯುವ ಮನಸ್ಸುಗಳು ಹೇಗೆಲ್ಲಾ ತುಡಿಯುತ್ತವೆ ಎಂಬುದನ್ನು ನಾಟಕೀಯ ಸನ್ನಿವೇಶಗಳ ಜೊತೆಗೆ ಕಟ್ಟಿ ಕೊಡಲಾಗಿದೆ.
ಅದು ಹದಿ ಹರೆಯದವರ ಕಥೆ. 18 ರಿಂದ 25 ವಯಸ್ಸಿನೊಳಗಿನ ಯುವ ಸಮೂಹ ಪ್ರೇಮದ ವಿಷಯದಲ್ಲಿ ಹೇಗೆ ನಡೆದುಕೊಳ್ಳುತ್ತದೆ ಎಂಬುದು ಇಲ್ಲಿನ ಕಥಾ ವಸ್ತು.
‘ಬಳ್ಳಾರಿ ದರ್ಬಾರ್’ ಮೂಲಕ ಹೆಸರು ಮಾಡಿದ ನಿರ್ದೇಶಕ ಸ್ಮೈಲ್ ಶ್ರೀನು, ಈ ಚಿತ್ರವನ್ನು ಕೇವಲ ಮನರಂಜನೆಗೆ ಮೀಸಲಿಟ್ಟಿರುವುದರಿಂದ ಡಬ್ಬಲ್ ಮೀನಿಂಗ್, ಸಿಂಗಲ್ ಮೀನಿಂಗ್ ಡೈಲಾಗ್ ಗಳು ಎಗ್ಗಿಲ್ಲದೇ ಹರಿದಾಡುತ್ತವೆ.
ಪ್ರೇಮದಲ್ಲಿ ಸ್ವಾರ್ಥವಿರುತ್ತದೆ. ಪೊಸೆಸಿವ್ ಅತಿಯಾದರೆ ಏನಾಗುತ್ತದೆ. ನಿರ್ದೇಶನದ ಕನಸಿರುವ ವ್ಯಕ್ತಿ ಹೇಗೆಲ್ಲಾ ವರ್ತಿಸಬಲ್ಲ, ವಯಸ್ಸಾದ ವ್ಯಕ್ತಿ ಹರೆಯದ ಹೆಂಡತಿ ಜೊತೆ ಇದ್ದರೆ ಏನಾಗುತ್ತದೆ. ಹೀಗೆ ಬಹಳಷ್ಟು ವಿಷಯಗಳ ಸುತ್ತ ಎಡತಾಕಿದರೂ ನಿರೂಪಣೆ ವಿಷಯದಲ್ಲಿ ಪ್ರಬುದ್ಧತೆ ಸಾಧಿಸಿಲ್ಲ ಎಂಬುದು ಕೊರತೆ.
ಹದಿ ಹರೆಯದವರ ಭಾಷೆಯನ್ನು ಅವರದೇ ಧಾಟಿಯಲ್ಲಿ ಹೇಳಿಸುವುದನ್ನು ಪ್ರೇಕ್ಷಕ ಹೇಗೆ ಸಹಿಸಿಕೊಳ್ಳಬಲ್ಲ ಎಂಬುದರತ್ತ ನಿರ್ದೇಶಕರು ಗಮನ ಹರಿಸಿಲ್ಲ.
ಅಭಿ ಮತ್ತು ಸಮೀರ, ಪೂರ್ಮಿ ಹಾಗೂ ವಿಕ್ರಂ ಇಲ್ಲಿನ ಪ್ರಮುಖ ಪಾತ್ರಗಳು. ಹಾಗೆಯೇ ರಿಷಿ, ಗೋಪಿ ಸಹಾಯಕ ಪಾತ್ರಗಳು ಇವುಗಳ ಸುತ್ತ ಇರುವ ಈ ಚಿತ್ರದಲ್ಲಿ ಕಾಣುವುದು ಹದಿ ಹರೆಯದ ತುಡಿತ. ಹುಚ್ಚು ಪ್ರೇಮದ ಕುದಿತ..
ಅಭಿ ರಾಮ್, ಋಷಿ ತೇಜ, ಅಖಿಲ, ವಿದ್ಯಾಶ್ರೀ, ದಿವಂಗತ ರಾಕ್‍ಲೈನ್ ಸುಧಾಕರ್, ಫಾರೂಖ್ ಖಾನ್, ನಾಗೇಶ್ವರರಾವ್, ಉದಯ ಭಾಸ್ಕರ್, ರವಿರಾಮ್ , ಪೊಲ ಶ್ರೀನಿವಾಸಬಾಬು, ಭಾಗ್ಯಶ್ರೀ ತಾರಾಗಣದಲ್ಲಿ ಇದ್ದಾರೆ.
ಚರಣ್ ಅರ್ಜುನ್ ಸಂಗೀತ, ಶಿವ ಕೆ.ನಾಯ್ಡು ಅವರ ಛಾಯಾಗ್ರಹಣ ಚಿತ್ರಕ್ಕೆ ಪೂರಕವಾಗಿದೆ.