Snehapriya.com

November 22, 2024

ಸಿಂಗಾಪುರದಲ್ಲಿ ವಿಶ್ವ ಕನ್ನಡ ಹಬ್ಬ ಶಿವಣ್ಣ ಸೇರಿ ಗಣ್ಯರ ಶುಭ ಹಾರೈಕೆ

Social Share :

ದೂರದ ಸಿಂಗಾಪುರದಲ್ಲಿ ಕನ್ನಡದ ಕಹಳೆಯನ್ನು ಮೊಳಗಿಸಲಾಗಿದೆ.
ಕಳೆದ ನವೆಂಬರ್ 9ರಂದು ಸಿಂಗಾಪುರದ ಪೊಂಗಲ್ ನಗರದಲ್ಲಿ
ನಡೆದ ವಿಜೃಂಭಣೆಯ ಉತ್ಸವದಲ್ಲಿ ಕನ್ನಡದ ಸಹೃದಯ ಮನಸ್ಸುಗಳು ನಲಿದಾಡಿವೆ.

ಕರ್ನಾಟಕ ಪ್ರೆಸ್‍ ಕ್ಲಬ್‍ ಕೌನ್ಸಿಲ್‍ ಅಲ್ಲಿನ ಕನ್ನಡ ಸಂಘಗಳ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಈ ಎರಡನೇ ವಿಶ್ವಕನ್ನಡ ಹಬ್ಬ ಸಮಾರಂಭ ಅದ್ದೂರಿಯಾಗಿ ನೆರವೇರಿದೆ.

ಈ ಸಮಾರಂಭದಲ್ಲಿ ಹ್ಯಾಟ್ರಿಕ್ ಹೀರೋ ಡಾ.ಶಿವರಾಜ್ ಕುಮಾರ್ ಭಾಗವಹಿಸುವ ಆಶಯವಿತ್ತು. ಆದರೆ ಅನಿವಾರ್ಯ ಕಾರಣಗಳಿಂದ ಅವರು ಭಾಗವಹಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ವಿಡಿಯೋ ಮೂಲಕ ಸಿಂಗಾಪುರ ಕನ್ನಡಿಗರಿಗೆ ಶುಭ ಹಾರೈಸಿದರು.

ಕನ್ನಡ ಭಾಷೆಯ ಸೊಗಡು, ಸಂಸ್ಕೃತಿಯ ಘಮಲನ್ನು ವಿದೇಶದಲ್ಲೂ ಪಸರಿಸಬೇಕೆಂಬ ಆಶಯದಲ್ಲಿ ಕರ್ನಾಟಕ ಪ್ರೆಸ್‍ ಕ್ಲಬ್‍ ಕೌನ್ಸಿಲ್‍ ಸಂಸ್ಥೆ ಕಳೆದ ವರ್ಷ ದುಬೈನಲ್ಲಿ ವಿಶ್ವ ಕನ್ನಡ ಹಬ್ಬವನ್ನು ಯಶಸ್ವಿಯಾಗಿ ನಡೆಸಿತ್ತು. ಅದೇರೀತಿ ಈ ವರ್ಷ ಎರಡನೇ ವಿಶ್ವ ಕನ್ನಡ ಹಬ್ಬವನ್ನು ಸಿಂಗಾಪುರದಲ್ಲಿ ಯಶಸ್ವಿಯಾಗಿ ಮುಗಿಸಿಕೊಂಡು ಬಂದಿದೆ.

ಈಚೆಗೆ ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದ ಕರ್ನಾಟಕ ಪ್ರೆಸ್‍ ಕ್ಲಬ್‍ ಕೌನ್ಸಿಲ್‍ ಅಧ್ಯಕ್ಷ ಡಾ. ಶಿವಕುಮಾರ್‍ ನಾಗರ ನವಿಲೆ, 2ನೇ ವಿಶ್ವ ಕನ್ನಡ ಹಬ್ಬದ ಸರ್ವಾಧ್ಯಕ್ಷರಾದ ಡಾ.ಸಿ. ಸೋಮಶೇಖರ್‍, ಸಾಂಸ್ಕೃತಿಕ ಅಧ್ಯಕ್ಷರಾದ ನಟಿ ರೂಪಿಕಾ,ಪ್ರತಿಭಾ ಪಟುವರ್ಧನ್, ಸೈ ರಮೇಶ್, ಕಾರ್ಯದರ್ಶಿ ರಂಜಿತಾ, ಸಿಂಚನ ದೀಕ್ಷಿತ್ ಹಾಗೂ ಇತರರು ವರ್ಣರಂಜಿತ ಹಬ್ಬದ ವಿವರಗಳನ್ನು ಮುಂದಿಟ್ಟರು.

ಕನ್ನಡ ಸಾಂಸ್ಕೃತಿಕ ನೆಲೆಯ ಕಾರ್ಯಕ್ರಮಗಳ ಜೊತೆಗೆ ಇಸ್ರೋ ವಿಜ್ಞಾನಿ ಎಸ್‍. ಕಿರಣ್ ಕುಮಾರ್ ಅವರಿಗೆ ‘2024ನೇ ಸಾಲಿನ ವಿಶ್ವಮಾನವ ಪ್ರಶಸ್ತಿ’ ಹಾಗೂ ಮೀನಾರಾಜ್ ಅವರಿಗೆ ‘ವಿಶ್ವಕನ್ನಡತಿ’ ಕಿರೀಟವನ್ನು ನೀಡಿ ಗೌರವಿಸಲಾಯಿತು.

ವಿಶೇಷವಾಗಿ ಸಿದ್ದಿ ಜನಾಂಗದ 10 ಪ್ರತಿಭೆಗಳನ್ನು ಕರೆದೊಯ್ದು ಅವರಿಗೂ ವೇದಿಕೆ ಕಲ್ಪಿಸಿದ್ದೆವು. ಇಲ್ಲಿಂದ ಒಟ್ಟು 120 ಕ್ಕೂ ಹೆಚ್ಚು ಜನ ಸಿಂಗಪುರಕ್ಕೆ ಪ್ರಯಾಣ ಬೆಳೆಸಿದ್ದೆವು ಎಂಬ ವಿವರಗಳನ್ನು ನೀಡಿದರು ಡಾ.ಶಿವಕುಮಾರ್.

ಆನಂದ ಗುರೂಜಿ, ಜಾನಪದ ಗಾಯಕ ಕಿಕ್ಕೇರಿ ಕೃಷ್ಣಮೂರ್ತಿ ಅಲ್ಲದೆ ಸಿಂಗಪುರ ಕನ್ನಡ ಸಂಘದ ಅಧ್ಯಕ್ಷ ವೆಂಕಟರತ್ನಯ್ಯ ಸೇರಿದಂತೆ ಹಲವಾರು ಗಣ್ಯರು ಈ ವಿಶ್ವ ಕನ್ನಡ ಹಬ್ಬದ ಸಮಾರಂಭದಲ್ಲಿ ಭಾಗವಹಿಸಿದ್ದರು‌.

ಪಸಂದಾಗವ್ನೆ ಖ್ಯಾತಿಯ ಗಾಯಕಿ ಮಂಗ್ಲಿ ಅವರ ಗಾಯನ ಗಮನ ಸೆಳೆಯಿತು. ಕಾರ್ಯಕ್ರಮದ ರಾಯಭಾರಿ ನಟ ವಸಿಷ್ಠ ಸಿಂಹ, ನಟಿ ಹರಿಪ್ರಿಯ ಅವರ ಅದ್ಭುತ ಡ್ಯಾನ್ಸ್ ಮುಖ್ಯ ಆಕರ್ಷಣೆಯಾಗಿತ್ತು.

ವಿದೇಶಗಳಲ್ಲಿ ಕನ್ನಡ ಭಾಷೆ, ಕನ್ನಡ ಸಂಸ್ಕೃತಿಯನ್ನು ಉಳಿಸಿ, ಬೆಳೆಸುವ ಜತೆಗೆ ಸಾಧನೆಗೈದ ಕನ್ನಡಿಗರಿಗೆ ಗೌರವ ಸಲ್ಲಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂಬ ವಿವರಗಳು ಬಂದವು.

ಸಿನಿಮಾ-ಗಾಸಿಪ್
Social Share :

Leave a Comment

Your email address will not be published. Required fields are marked *