ಅಪ್ಪನಿಗೆ ಒಂದು ಆಸೆಯಿತ್ತು; ನಾನು ಬರೆದಿರುವ ಈ ವಿಷಯ ಸಿನಿಮಾವಾಗಬೇಕು.. ಆದರೆ ವಿಧಿ ವಿಪರ್ಯಾಸ ಆ ಕಲ್ಪನೆ ರೂಪುಗೊಳಿಸುವುದಕ್ಕೆ ಮುನ್ನವೇ ಅಪ್ಪ ಕಾಲನ ಕರೆಗೆ ಓಗೊಟ್ಟು ಮಗನನ್ನು ಬಿಟ್ಟು ನಡೆದು ಬಿಟ್ಟರು…
ಆದರೆ ಮಗ ಸುಮ್ಮನಿರಲಿಲ್ಲ; ಅಪ್ಪನ ಸ್ಕ್ರಿಪ್ಟ್ ತೆಗೆದು ಸಿನಿಮಾ ಮಾಡಿಯೇ ಬಿಟ್ಟ.. ಅದುವೆ ಸಿಂಧೂರ.! ಈಗ ಸಿದ್ದವಾಗಿ ಪ್ರೇಕ್ಷಕನ ಮುಂದೆ ಬರುವ ಹವಣಿಕೆಯಲ್ಲಿದೆ..
ಅಂದ ಹಾಗೆ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಗುರುತಿಸಿಕೊಂಡಿದ್ದ ದಿವಂಗತ ರಾಮ್ ಪುರೋಹಿತ್ ಅವರು ಎಂಟು ವರ್ಷಗಳ ಹಿಂದೆ ಬರೆದಿಟ್ಟಿದ್ದ ಕೃತಿ ಸಿನಿಮಾವಾಗಿದೆ. ಇದನ್ನು ಸಾಧ್ಯವಾಗಿಸಿದ್ದು ಅವರ ಪುತ್ರ ಸಚ್ಚಿನ್ ಪುರೋಹಿತ್.
ಸಚ್ಚಿನ್ ನಟ, ನಿರ್ದೇಶಕ, ನಿರ್ಮಾಪಕ, ಛಾಯಾಗ್ರಾಹಕ ಎಲ್ಲವೂ ಆಗಿ ದುಡಿದಿರುವ ಸಿಂಧೂರ ತೆರೆಗೆ ಬರಲು ಸಜ್ಜಾಗಿದೆ. ಚಿತ್ರದ ಹಾಡುಗಳು ಹಾಗೂ ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ವಾಣಿಜ್ಯ ಮಂಡಳಿ ಉಪಾಧ್ಯಕ್ಷ ಉಮೇಶ್ ಬಣಕಾರ್, ಸ್ವಸ್ತಿಕ್ ಶಂಕರ್ ಹಾಗೂ ಇತರರು ಉಪಸ್ಥಿತರಿದ್ದರು.
ನಟಿಯರಾದ ನಿವೀಕ್ಷಾ, ಸುರಕ್ಷಾ ಶೆಟ್ಟಿ ಹಾಗೂ ಚಿತ್ರತಂಡದ ಸದಸ್ಯರು ತಮ್ಮ ಅನುಭವ ಹೇಳಿಕೊಂಡರು. ಆರನ್ ಕಾರ್ತಿಕ್ ವೆಂಕಟೇಶ್ ಸಂಗೀತ ಸಂಯೋಜಿಸಿದ್ದು, ಹಾಡುಗಳ ಪರಿಚಯ ಮಾಡಿಕೊಡಲಾಯಿತು.
ಖ್ಯಾತ ಸಂಗೀತ ನಿರ್ದೇಶಕ ಅಭಿಮಾನ್ ರಾಯ್, ನಿರ್ದೇಶಕ, ಸಂಕಲನಕಾರ ನಾಗೇಂದ್ರ ಅರಸ್ ಮತ್ತಿತರರು ಚಿತ್ರಕ್ಕೆ ಶುಭ ಹಾರೈಸಲು ಬಂದಿದ್ದರು.
ಅಪ್ಪನ ಸ್ಫೂರ್ತಿ ನಮಗೆ ದಾರಿದೀಪವಾಯಿತು ಎಂದು ತಂದೆಯನ್ನು ನೆನೆಯುತ್ತ ಚಿತ್ರದ ಬಗ್ಗೆ ಹೇಳಿಕೊಂಡರು ಸಚ್ಚಿನ್ ಪುರೋಹಿತ್.