Snehapriya.com

April 14, 2025

ವಿಷ್ಣು ಪ್ರಿಯಾ ಚಿತ್ರವಿಮರ್ಶೆ

Social Share :

ರೇಟಿಂಗ್ : 3.5/5

ನಿರ್ಮಾಣ : ಕೆ.ಮಂಜು

ನಿರ್ದೇಶನ : ವಿ.ಕೆ.ಪ್ರಕಾಶ್

ಅದಮ್ಯ ಪ್ರೇಮಿಯ ಅಸಹಾಯಕ ಸಾಹಸಗಳು..

ಅನಾಥ ಪ್ರಜ್ಞೆಯಲ್ಲಿ ನರಳುತ್ತಿದ್ದ ಅಪ್ರತಿಮ ಸಾಹಸ ಮನೋಭಾವದ ಹುಡುಗನಿಗೆ ಏಕಾ ಏಕಿ ಪ್ರೇಮದ ಆಸರೆ ದೊರೆತಾಗ, ಆತ ಅದಮ್ಯ ಪ್ರೇಮಿಯಾಗಿ ಕಂಗೊಳಿಸಿ ಬಿಡುತ್ತಾನೆ..

ಸದಾ ಹಸಿರು ಹೊದ್ದ ಬೆಟ್ಟ ಗುಡ್ಡಗಳ ಮತ್ತು ಜಲಧಾರೆಯಿಂದ ಕಂಗೊಳಿಸುವ ಪ್ರದೇಶ ಮತ್ತು ಮುತ್ತು ಪೋಣಿಸಿದಂತೆ ಬೀಳುವ ಆಹ್ಲಾದದ ವಾತಾವರಣದ ಮಲೆನಾಡಿನ ಸಹೃದಯಿ ಯುವಕ ವಿಷ್ಣುಗೆ ಆಕಸ್ಮಿಕವಾಗಿ ಸಿಕ್ಕ ಪ್ರಿಯಾ ಜೀವನದ ಎಲ್ಲವೂ ಆಗಿ ಹೋಗುತ್ತಾಳೆ..

ವಿಷ್ಣು ಮತ್ತು ಪ್ರಿಯಾ ಇಬ್ಬರೂ ಅಸಾಧಾರಣ ಪ್ರೇಮಿಗಳಾಗಿ ಪ್ರಕೃತಿ ಮಡಿಲಲ್ಲಿ ನಲಿಯುತ್ತಾರೆ. ಗಿರಿ ಶೃಂಗಗಳ ಮೋಹಕ ತಪ್ಪಲಲ್ಲಿ ಓಡಾಡುತ್ತಾರೆ. ನದಿಯ ನೀರು ಮತ್ತು ಅದರ ಅಲೆಗಳ ಮೋಹಕತೆ ಅವರಿಬ್ಬರ ಪ್ರೇಮಗಳಲ್ಲಿ ಬೆರೆತು ಹೋಗುತ್ತದೆ.

ಅದು 90ರ ದಶಕದಲ್ಲಿ ನಡೆಯುವ ಪ್ರೇಮ. ಹಾಗಾಗಿ ಸಾಮಾಜಿಕ ಜಾಲತಾಣಗಳು ಕಾಣುವುದೇ ಇಲ್ಲ. ಇಬ್ಬರು ಮೋಹದ ಪರವಶವಾದ ಇಬ್ಬರು ಪ್ರೇಮಿಗಳು ಉಲ್ಲಾಸದ ಸ್ಥಿತಿಯಲ್ಲಿ ಒಬ್ಬರನ್ನೊಬ್ಬರು ಭೇಟಿ ಮಾಡುತ್ತಾ ಇನ್ನೇನು ಪ್ರೇಮವೇ ಎಲ್ಲಾ ಎಂದು ಬೀಗುವಾಗ ಅನಿರೀಕ್ಷಿತವಾದ ಆ ಘಟನೆ ನಡೆದು ಹೋಗುತ್ತದೆ..

ಅದರಿಂದ ಪ್ರಿಯಾ ಮನೆಯವರು ವಿಚಲಿತಗೊಳ್ಳುತ್ತಾರೆ. ಮರ್ಯಾದೆ ಮೂರು ಪಾಲಾಯಿತು ಎಂದು ನಲುಗುತ್ತಾರೆ. ಇದರಿಂದ ಅದಮ್ಯ ಪ್ರೇಮಿ ವಿಷ್ಣು ಮನಸ್ಸೂ ಅಲ್ಲೋಲ ಕಲ್ಲೋಲವಾಗುತ್ತದೆ. ಆತನ ವರ್ತನೆಯಲ್ಲಿ ಬದಲಾವಣೆ ಕಾಣುತ್ತದೆ. ಅದು ಆತ ಉನ್ಮತ್ತ ಪ್ರೇಮಿ ಅಥವಾ ಹುಚ್ಚ ಎಂಬ ಭಾವನೆ ಇತರರಲ್ಲಿ ಮೂಡಲು ಕಾಣವಾಗುತ್ತದೆ.

ಪ್ರೇಮದ ಅಗ್ನಿ ಕುಂಡದಲ್ಲಿ ವಿಷ್ಣು ಬೇಯುವಾಗಲೇ ಅಪ್ಪನ ವರ್ಗಾವಣೆ ಕಾರಣದಿಂದ ಪ್ರಿಯಾ ಅವನಿಂದ ದೂರವಾಗಿ ಬಿಡುತ್ತಾಳೆ. ಆಗಿನ ಪರಿಸ್ಥಿತಿಯನ್ನು ಆತನನ್ನು ದ್ವೇಷಿಸುತ್ತಿದ್ದ ಗೆಳೆಯ ದುರುಪಯೋಗ ಪಡಿಸಿಕೊಳ್ಳುವುದು. ಅಮ್ಮನೇ ಸಹಕಾರ ನೀಡದೇ ಹೋಗುವುದು ಇಂತಹ ನಿಲುವುಗಳಿಂದ ವಿಷ್ಣು ದಹಿಸಿ ಹೋಗುತ್ತಾನೆ.

ಇತ್ತ ಪ್ರಿಯಾ ಮನೆಯ ಕಡೆಯ ಬೇರೆಯದರ ಪರಿಸ್ಥಿತಿ ಹಿನ್ನೆಲೆಯಲ್ಲಿ ಆಕೆಯೂ ಬದಲಾದಂತೆ ವರ್ತಿಸುತ್ತಾಳೆ. ಮತ್ತೆ ಪ್ರಿಯಾಳನ್ನು ಹುಡುಕುವ ವಿಷ್ಣುಗೆ ಎದೆ ಬಿರಿಯುವ ಘಟನೆಗಳಿಂದ ಮನಸ್ಥಿತಿ ಹುಚ್ಚು ಕೋಡಿಯಾಗುತ್ತದೆ. ಮುಂದೆ ಆತ ತೆಗೆದುಕೊಳ್ಳುವ ನಿರ್ಧಾರ ಅತ್ಯಂತ ಕಠಿಣ.

ವಿಷ್ಣು ಪಾತ್ರದಲ್ಲಿ ಶ್ರೇಯಸ್ ಕೆ.ಮಂಜು ಪರಕಾಯ ಪ್ರವೇಶ ಮಾಡಿರುವುದು ಎದ್ದು ಕಾಣುತ್ತದೆ. ಭಾವನಾತ್ಮಕ ಸನ್ನಿವೇಶಗಳು ಹಾಗೂ ಹೊಡೆದಾಟಗಳಲ್ಲಿ ಕಾಣುವ ಅವರ ಕಿಚ್ಚು ಅದಮ್ಯ ಪ್ರೇಮಿಯನ್ನೂ ಮೀರಿದ್ದು..

ಮೊದಲಿಗೆ ಮುದ್ದು ಮುದ್ದಾಗಿ ಕಾಣುವ ಪ್ರಿಯಾ ವಾರಿಯರ್ ಗೆ ಪರಿಸ್ಥಿಯ ಕೈಗೊಂಬೆಯಾದಾಗ ನಟಿಸುವುದು ಅತ್ಯಂತ ಸವಾಲಾದಂತೆ ಕಾಣುತ್ತದೆ.

ಸಾಕು ಅಪ್ಪನಾಗಿ ಅಚ್ಯುತ್ ಕುಮಾರ್ ಅವರ ನಟನೆ ಪ್ರೇಕ್ಷಕನ ಕಣ್ಣಂಚು ಒದ್ದೆ ಮಾಡುತ್ತದೆ. ಕೋಪಿಷ್ಠ ಅಪ್ಪನಾಗಿ ಸುಚ್ಚೇಂದ್ರ ಪ್ರಸಾದ್ ಅವರ ನಟನೆ ಗಮನಾರ್ಹ.

ಗೋಪಿ ಸುಂದರ್ ಅವರ ಹಿನ್ನೆಲೆ ಸಂಗೀತ ಚಿತ್ರದ ಆತ್ಮದಂತೆ ಕೆಲಸ ಮಾಡಿದೆ. ಭಾವನಾತ್ಮಕ ಸನ್ನಿವೇಶಗಳ ಅದ್ಭುತ ನಿರ್ವಹಣೆಯಲ್ಲಿ ಸಂಗೀತವೇ ಪ್ರಧಾನ ಪಾತ್ರ ವಹಿಸಿದೆ ಎಂದರೆ ತಪ್ಪಲ್ಲ. ಅಲ್ಲದೆ ಡಾ.ವಿ.ನಾಗೇಂದ್ರ ಪ್ರಸಾದ್ ಅವರು ಬರೆದಿರುವ ‘ಏಳು ಗಿರಿಗಳ..’ ಹಾಡು ಚಿತ್ರ ಮುಗಿದ ನಂತರವೂ ಗುನುಗಿಸಿಕೊಳ್ಳುತ್ತದೆ.

ನಿರ್ದೇಶಕ ವಿ.ಕೆ.ಪ್ರಕಾಶ್ ಜಾಹಿರಾತು ಚಿತ್ರಗಳ ನಿರ್ವಹಣೆ ಮಾಡಿರುವುದರಿಂದ ನೀರಿನ ಪ್ರತಿ ಚಿಮ್ಮುವಿಕೆ ಕಲಾತ್ಮಕವಾಗಿ ಕಾಣುತ್ತದೆ. ವಿನೋದ್ ಭಾರತಿ ಛಾಯಾಗ್ರಹಣ ಕಾನನದ ಸೌಂದರ್ಯವನ್ನು ಬಗೆದು ಕೊಟ್ಟಿದೆ‌.

ಒಂದು ಪರಿಶುದ್ಧ ಪ್ರೇಮದ ತೀವ್ರತೆ ಇರುವ ಹುಡುಗನನ್ನು ಈ ಕಾಲದಲ್ಲಿ ಹುಡುಕುವ ಆಸೆ ನಿಮಗಿದ್ದರೆ ‘ವಿಷ್ಣು ಪ್ರಿಯಾ’ ಅದಕ್ಕೆ ಆಸರೆಯಾಗಬಹುದು..

ಸಿನಿಮಾ-ಗಾಸಿಪ್
Social Share :

Leave a Comment

Your email address will not be published. Required fields are marked *