ಬಾಪೂಜಿ ನಗರದಲ್ಲಿರುವ ಸಹೋದರಿಯ ಮನೆ ಮುಂದೆ ತಮ್ಮ ನ್ಯಾನೋ ಕಾರ್ ಮುಂದೆಯೇ ಪ್ರತ್ಯಕ್ಷ ವಾಗುತ್ತಿದ್ದರು ಮನ್ ದೀಪ್ ರಾಯ್..
ಅವರ ಸರಳ ನಡೆಗೆ ಸದಾ ಮಾರು ಹೋಗಿದ್ದ ನನಗೆ ಅವರನ್ನು ಕಂಡರೆ ಅಷ್ಟೇ ಅಕ್ಕರೇ.. ಹಾಗಾಗಿ ನಿಂತಲ್ಲೇ ಗಂಟೆಗಟ್ಟಲೆ ಮಾತಾಡುತ್ತಿದ್ದೆವು..
ಸುದ್ದಿಗೋಷ್ಠಿಗಳಲ್ಲಿ ಸಿಕ್ಕಾಗ ಅದೇ ಕೈ ನೀಡಿ ಆತ್ಮೀಯ ಸ್ಪರ್ಶದ ಅನುಭವ ನೀಡುತ್ತಿದ್ದರು.. ಹೇಗಿದೆ.. ಜೀವನ ಅಂದ್ರೆ ತಣ್ಣನೆಯ ನಗೆಯನ್ನು ಮುಖದಲ್ಲಿ ತಂದುಕೊಂಡು ‘ಏನೋ.. ನಡೀತಾ ಇದೆ..’ ಎನ್ನುತ್ತಿದ್ದರು.
ಒಂದಾನೊಂದು ಕಾಲದಲ್ಲಿ ಶಂಕರ್ ನಾಗ್ ನಮ್ಮನ್ನು ಬೆಳೆಸಿದರು.. ಕಲಾವಿದನಾಗಿ ಕಷ್ಟಗಳನ್ನು ದಾಟುತ್ತಲೇ ಇರುವೇ.. ಕಲಾವಿದರ ಜೀವನ ಹೀಗೆ ಅಲ್ಲವೆ ಎಂದು ವಿಷಾದದ ಭಾವಗಳನ್ನು ಹೊರಹಾಕುತ್ತಿದ್ದರು.
‘ಪುಷ್ಪಕ ವಿಮಾನ’ ನೋಡಿದ ಯಾರೂ ಕೂಡ ಮನ್ ದೀಪ್ ರಾಯ್ (73) ಅವರನ್ನು ಮರೆಯುವುದು ಸಾಧ್ಯವೇ ಇಲ್ಲ.. ಶಂಕರ್ ನಾಗ್ ಅವರ ಎಲ್ಲಾ ಚಿತ್ರಗಳಲ್ಲಿ ನಟಿಸಿದ್ದ ನಂತರದಲ್ಲಿ ಕೊಟ್ಟ ಪಾತ್ರ ಸಿಕ್ಕಿದ ಪಾತ್ರ ಹೀಗೆ ಮಾಡುತ್ತಲೇ 500 ಚಿತ್ರ ಹಾಗೂ ಧಾರಾವಾಹಿಗಳಲ್ಲಿ ಕಾಣಿಸಿಕೊಂಡ ಖ್ಯಾತಿ ಅವರದು..
ಆರ್.ಪಿ.ಸಿ ಬಡಾವಣೆಯಲ್ಲಿ ಬಾಡಿಗೆ ಮನೆಯಲ್ಲಿದ್ದರು. ಬಳಿಕ ಅಲ್ಲಿಯೇ ಲೀಜ್ ಗೆ ಹಾಕಿಕೊಂಡಿದ್ದೇನೆ ಎಂದು ಹೇಳಿದ್ದರು..
ನನಗೆ ಹೆಚ್ಚು ಆಕರ್ಷಣೀಯವಾಗಿ ಕಂಡಿದ್ದು ಅವರ ನ್ಯಾನೋ ಕಾರು..
ಇದು ಬಡವರ ಕಾರು ಅಲ್ಲವಾ ಎಂದು ನಗುತ್ತಿದ್ದರು. ಅದರ ಪಕ್ಕದಲ್ಲಿ ನಿಂತು ಮಾತಾಡುವುದೂ ಅವರಿಗೆ ಖುಷಿ ಎನಿಸುತ್ತಿತ್ತು..
ಯಾವುದೇ ಹಮ್ಮು ಬಿಮ್ಮು ಇಲ್ಲದೆ ಸರಳವಾಗಿ ಬೆರೆಯುತ್ತಿದ್ದ ಮನ್ ದೀಪ್ ರಾಯ್ ಅಪ್ರತಿಮ ಕಲಾವಿದ ಎಂಬುದಕ್ಕೆ ಬೇಕಾದಷ್ಟು ನಿದರ್ಶನಗಳಿವೆ. ಅವರ ಅಗಲಿಕೆ ಚಿತ್ರರಂಗ ಮಾತ್ರವಲ್ಲ; ಅವರನ್ನು ಬಲ್ಲ ಎಲ್ಲರಿಗೂ ನೋವು ತಂದಿದೆ.