ಸುಮಾರು ನಾಲ್ಕು ದಶಕಗಳ ಕಾಲ ಸುದ್ದಿ ಛಾಯಾಗ್ರಾಹಕರಾಗಿ ಸೇವೆ ಸಲ್ಲಿಸಿದ ಹಿರಿಯ ಛಾಯಾಗ್ರಾಹಕ ಡಿ.ಸಿ.ನಾಗೇಶ್ (66)ಇಹಲೋಕ ತ್ಯಜಿಸಿದ್ದಾರೆ.
ಕನ್ನಡ ಪ್ರಮುಖ ಪತ್ರಿಕೆಗಳಲ್ಲಿ ಛಾಯಾಗ್ರಾಹಕರಾಗಿ ನಾಗೇಶ್ ಅವರು ಸೇವೆ ಸಲ್ಲಿಸಿದ್ದರು. ವಿಶೇಷವಾಗಿ ಅವರು ಸಿನಿಮಾ ಛಾಯಾಗ್ರಾಹಕರಾಗಿ ಗುರುತಿಸಿಕೊಂಡಿದ್ದರು. ಇತ್ತೀಚೆಗೆ ಅನಾರೋಗ್ಯದಿಂದ ಬಳಲುತ್ತಿದ್ದರೂ ಅದನ್ನು ತೋರ್ಪಡಿಸದೇ ಕಾಯಕ ಯೋಗಿಯಂತೆ ದುಡಿಯುತ್ತಿದ್ದರು.
ಸದಾ ನಗುವಿನ ಮುಖದೊಂದಿಗೆ ಸಿನಿಮಾ ಕುರಿತ ಸಭೆ ಸಮಾರಂಭಗಳಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿದ್ದ ಡಿ.ಸಿ.ನಾಗೇಶ್ ಕೆಲಸದಲ್ಲಿ ಅಷ್ಟೇ ಕ್ರಿಯಾಶೀಲ ಮತ್ತು ಕಟ್ಟುನಿಟ್ಟಿನ ಛಾಯಾಗ್ರಾಹಕರಾಗಿದ್ದರು. ಸಿನಿಮಾ ರಂಗದಲ್ಲಿ ಕೆಲಸ ಮಾಡುವಾಗ ಗ್ಲಾಮರ್ ಪ್ರಪಂಚದ ಬೆಡಗಿಗೆ ಕೆಲವೊಮ್ಮೆ ಮಾರು ಹೋಗುವ ಅವಕಾಶವಿರುತ್ತದೆ. ಆದರೆ ನಾಗೇಶ್ ಸದಾ ನಿರ್ಲಿಪ್ತರಾಗಿ ಕೆಲಸ ನಿರ್ವಹಿಸುತ್ತಿದ್ದರು. ಹೊಸದಾಗಿ ಬರುವವರಿಗೆ ಗುರುಗಳಾಗಿ ಎಲ್ಲರ ಜೊತೆ ನಗು ನಗುತ್ತಲೇ ಇರುತ್ತಿದ್ದ ಅವರ ಚೇತೋಹಾರಿ ಗುಣ ಎಲ್ಲರಿಗೂ ಮೆಚ್ಚುಗೆಯಾಗುತಿತ್ತು.

ಅಪರೂಪದ ಫೋಟೋ ಬೇಕು ಎಂದು ಕೇಳಿದವರಿಗೆ ತಮ್ಮ ಸಂಗ್ರಹದಲ್ಲಿದ್ದ ಫೋಟೋ ಯಾವುದೇ ಪ್ರತಿಫಲವಿಲ್ಲದೆಯೂ ಕೊಟ್ಟುಬಿಡುವ ದೊಡ್ಡ ಗುಣ ಅವರಲ್ಲಿತ್ತು.
ಶನಿವಾರ ಬೆಳಗ್ಗೆ ನಾಗೇಶ್ ಇಹಲೋಕ ತ್ಯಜಿಸಿದರು ಎಂಬುದು ಸಿನಿಮಾ ಒಡನಾಡಿಗಳಿಗೆ ಅರಗಿಸಿಕೊಳ್ಳಲಾಗದ ಸಂಗತಿ.