* ಫೆಬ್ರವರಿ 9 ಕ್ಕೆ ಬಿಡುಗಡೆ
* ಸ್ಟಾರ್ ಸಿನಿಮಾಗಳು ಬೇಕು
* ಚಿತ್ರಮಂದಿರಗಳನ್ನು ಕಾಪಾಡಿ
ಕಲಾ ಸಾಮ್ರಾಟ್ ಡಾ.ಎಸ್.ನಾರಾಯಣ್ ಅವರ 50ನೇ ಸಿನಿಮಾ 5 ಡಿ ಈಗ ಬಿಡುಗಡೆಯ ಹಂತದಲ್ಲಿದೆ.
ಆದಿತ್ಯ ಅವರಿಗೆ 25 ನೇ ಸಿನಿಮಾವಾಗಿರುವ 5ಡಿ ಫೆಬ್ರವರಿ 9ರಂದು ತೆರೆ ಕಾಣುತ್ತಿದ್ದು, ಹೊಸ ಟೀಸರ್ ಜೊತೆ ಚಿತ್ರತಂಡ ಮಾಧ್ಯಮಗಳ ಮುಂದೆ ಬಂದಿತ್ತು.
ಸುಮಾರು ಎಂಟು ತಿಂಗಳ ಹಿಂದಿಯೇ ಬಿಡುಗಡೆ ಕಾಣಬೇಕಿದ್ದ ಚಿತ್ರವು ಇಲ್ಲಿಯವರೆಗೆ ಬಂದಿದ್ದು ಹೇಗೆ ಎಂಬುದನ್ನು ಎಳೆ ಎಳೆಯಾಗಿ ಬಿಡಿಸಿಟ್ಟರು ಎಸ್.ನಾರಾಯಣ್.
ಚಿತ್ರ ನಿರ್ಮಾಣ ಈಗ ಸುಲಭವಲ್ಲ; ಅದರ ಜೊತೆಗೆ ಒಂದು ಚಿತ್ರದ ಬಿಡುಗಡೆ ಸಾಮಾನ್ಯ ವಿಷಯವಲ್ಲ; ಪರಭಾಷಾ ಚಿತ್ರಗಳ ಹಾವಳಿ ಒಂದು ಕಡೆಗೆ ತಡೆದುಕೊಂಡರೂ ಒಳಗಿನ ವಿಷಯಗಳು ಅತ್ಯಂತ ಕಠಿಣವಾಗಿವೆ ಎಂದರು.
ಕನ್ನಡದ ನೆಲದಲ್ಲಿ ಸ್ಟಾರ್ ಗಳ ಚಿತ್ರಗಳು ಹೆಚ್ಚು ಹೆಚ್ಚು ಬರುತ್ತಿಲ್ಲ ಮತ್ತು ಹೊಸಬರ ಚಿತ್ರಗಳು ಓಡುತ್ತಿಲ್ಲ. ಹಾಗಾಗಿ ಚಿತ್ರಮಂದಿರಗಳು ಮುಚ್ಚಿಕೊಂಡು ಹೋಗುತ್ತಿವೆ. ಪ್ರೇಕ್ಷಕ ಬರದೆ ನಿರ್ಮಾಪಕ ಅಸಹಾಯಕ. ಇಂತಹ ವಾತಾವರಣ ನಮ್ಮ ಚಿತ್ರದ ಬಿಡುಗಡೆ ವಿಷಯದಲ್ಲಿ ಪ್ರಭಾವ ಬೀರಿದೆ ಎಂದರು.
ಚಿತ್ರಮಂದಿರಗಳು ಉಳಿಯಬೇಕು ಎಂದರೆ ಸ್ಟಾರ್ ಗಳು ಬೆಳೆಯಬೇಕು. ಅಂದರೆ ಹೊಸಬರು ಸ್ಟಾರ್ ಪಟ್ಟ ಅಲಂಕರಿಸಬೇಕು. ಆಗ ಮಾತ್ರ ಮನರಂಜನಾ ಕ್ಷೇತ್ರವಾಗಿರುವ ಸಿನಿಮಾ ರಂಗ ಉಳಿಯುತ್ತದೆ ಎಂದು ಹೇಳುತ್ತಾ ಹೋದರು ಕಲಾ ಸಾಮ್ರಾಟ್.
5ಡಿ ಎಂಬುದು ಆಧುನಿಕ ಜಮಾನದ ಕಥೆ. ಊಹಿಸಲಾಗದ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರವಿದು. ಈ ಚಿತ್ರದ ಮೂಲಕ ಹೊಸ ನಾರಾಯಣ್ ನಿಮಗೆ ಸಿಗಬಹುದು ಎಂದು ಹಿಂದೆಯೇ ಹೇಳಿಕೊಂಡಿದ್ದ ಎಸ್.ನಾರಾಯಣ್, ಖಂಡಿತವಾಗಿಯೂ ಕಾದು ನೋಡಿ ಎಂದು ನಗೆ ಚೆಲ್ಲಿದರು.
ನಟ ಆದಿತ್ಯ ಆಡಳಿತ ಚುಕ್ಕಾಣಿ ಹಿಡಿದವರ ಶಿಷ್ಟಾಚಾರ ಪಾಲಿಸುವಾಗ ಆಗುವ ಅನಾಹುತಗಳ ಬಗ್ಗೆ ಬೆಳಕು ಚೆಲ್ಲಿದರು. ವಿಶೇಷವಾಗಿ ಮುಖ್ಯಮಂತ್ರಿ ಹಾಗೂ ಇತರ ಗಣ್ಯತಿ ಗಣ್ಯರು ಸಂಚರಿಸುವಾಗ ವಾಹನಗಳನ್ನು ತಡೆ ಹಿಡಿದು ನಿಲ್ಲಿಸುವ ಸಂದರ್ಭದಲ್ಲಿ ಆಂಬುಲೆನ್ಸ್ ತುರ್ತುಸೇವೆಗೆ ಒದಗುವ ಆತಂಕವನ್ನು ವಿವರಿಸಿದರು.
ಚಿತ್ರದ ಹಿಂದಿ ಹಕ್ಕುಗಳು ಮಾತ್ರ ಮಾರಾಟವಾಗಿವೆ ಎಂದರು ನಿರ್ಮಾಪಕ ಸ್ವಾತಿ ಕುಮಾರ್. ಇದು ನಮ್ಮ ಮೊದಲ ಸಿನಿಮಾ ಎಂಬುದೇ ಹೆಮ್ಮೆಯ ವಿಷಯ ಎಂದರು.
ನಟ ಯೋಗಿಶ್, ಡಿಸೈನರ್ ಅಚ್ಚು ರಾಮಚಂದ್ರ, ಸಂಕಲನಕಾರ
ಶಿವಪ್ರಸಾದ್, ಝೇಕಾರ್ ಆಡಿಯೋ ಸಂಸ್ಥೆಯ ಭರತ್ ಜೈನ್ ಮೊದಲಾದವರು ಈ ಸಂದರ್ಭದಲ್ಲಿ ಹಾಜರಿದ್ದರು.