ಕಡಲ ತಡಿಯ ಜನ ಜೀವನ ಹಾಗೂ ಜಾನಪದ ಸೊಗಸುಗಾರಿಕೆಯನ್ನು ಅನಾವರಣಗೊಳಿಸುವ ವಿಭಿನ್ನ ಶೈಲಿಯ ಚಿತ್ರ ‘ಗುಮ್ಟಿ’ ತೆರೆಗೆ ಬರಲು ಸಜ್ಜಾಗಿದೆ.
ವಿಭಿನ್ನ ಶೀರ್ಷಿಕೆ ಹಾಗೂ ಕೌತುಕ ಹೊಂದಿರುವ ಕಥೆಯ ಹಿನ್ನೆಲೆಯಲ್ಲಿ ಈಗಾಗಲೇ ಕುತೂಹಲ ಹುಟ್ಟು ಹಾಕಿರುವ ಚಿತ್ರದ ಟ್ರೈಲರ್ ಈಚೆಗೆ ಬಿಡುಗಡೆ ಕಂಡಿತು.
ವಿಶೇಷವಾಗಿ ಕಡಲ ತಡಿಯಲ್ಲಿ ವಾಸ ಮಾಡುವ ಕುಡುಬಿ ಜನ ಜೀವನವನ್ನು ಅನಾವರಣ ಮಾಡುವ ಕಥೆಯಲ್ಲಿ ಜಾನಪದದ ವಿಶೇಷತೆಗಳು ಬೆಸೆದುಕೊಂಡಿವೆ.
ಈಗಾಗಲೇ ‘ಕತ್ತಲೆ ಕೋಣೆ’ ಮತ್ತು ‘ಇನಾಮ್ದಾರ್’ ಚಿತ್ರಗಳನ್ನು ನಿರ್ದೇಶಿಸಿ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಸಂದೇಶ್ ಶೆಟ್ಟಿ ಆಜ್ರಿ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುವುದರ ಜೊತೆಗೆ ಮುಖ್ಯ ಪಾತ್ರದಲ್ಲಿಯೂ ಕಾಣಿಸಿಕೊಂಡಿದ್ದಾರೆ.
ಇದೊಂದು ಕಲಾತ್ಮಕ ಆಶಯವಿರುವ ಚಿತ್ರವಾಗಿದ್ದು, ಕರ್ನಾಟಕದ ಕರಾವಳಿ ತೀರದ ಕುಡುಬಿ ಜನಾಂಗದ ಕಥೆಯನ್ನು ತೆರೆಮೇಲೆ ಹೇಳಲಾಗುತ್ತಿದೆ. ಗುಂಮ್ಟಿ ಎಂಬುದು ಕುಡುಬಿ ಸಮುದಾಯದ ಕಲಾ ಪ್ರಾಕಾರದ ಸಾಂಪ್ರದಾಯಿಕ ವಾದ್ಯವಾಗಿದ್ದು, ಅದನ್ನೇ ಚಿತ್ರದ ಶೀರ್ಷಿಕೆಯಾಗಿ ಇಡಲಾಗಿದೆ ಎಂದರು ನಿರ್ದೇಶಕ ಸಂದೇಶ್ ಶೆಟ್ಟಿ ಆಜ್ರಿ.
ಕುಡುಬಿ ಜನಾಂಗದ ಸಂಪ್ರದಾಯ, ಆಚಾರ-ವಿಚಾರ, ಬದುಕು ಮತ್ತು ಆಧುನಿಕತೆಯ ನಡುವಿನ ಸಂಘರ್ಷ ಚಿತ್ರದಲ್ಲಿ ಅನಾವರಣವಾಗಲಿದೆ ಎಂದರು.
ಬಾಲ್ಯದಲ್ಲಿ ಕಂಡಿದ್ದ ಜಾನಪದದ ವಿಚಾರವನ್ನು ಸಿನಿಮಾದಲ್ಲಿ ಅಳವಡಿಸುವ ಪ್ರಯತ್ನ ಮಾಡಲಾಗಿದೆ. ಈ ಚಿತ್ರ ನೈಜತೆಯಿಂದ ಕೂಡಿದ್ದು ಪ್ರೇಕ್ಷಕರಿಗೆ ಇಷ್ಟವಾಗಲಿದೆ ಎಂಬ ಆಶಯವನ್ನು ವ್ಯಕ್ತಪಡಿಸಿದವರು ನಿರ್ಮಾಪಕ ವಿಕಾಶ್ ಎಸ್.ಶೆಟ್ಟಿ.
ಈ ಚಿತ್ರವು ಬಿಡುಗಡೆಗೂ ಮುನ್ನವೇ ಜನರ ಮನಸ್ಸು ಗೆದ್ದಿದೆ. ಹಾಗಾಗಿ ಉಡುಪಿ ಜಿಲ್ಲೆಯ ಸುತ್ತಮುತ್ತ ಸುಮಾರು 24 ಕ್ಕೂ ಹೆಚ್ಚು ಪ್ರದರ್ಶನಗಳು ಮುಂಗಡವಾಗಿ ಬುಕ್ಕಿಂಗ್ ನೀಡಲಾಗಿದೆ ಎಂಬ ಮಾಹಿತಿಯನ್ನು ಚಿತ್ರತಂಡ ಇದೇ ವೇಳೆ ಹಂಚಿಕೊಂಡಿತು.
ಸಂದೇಶ್ ಶೆಟ್ಟಿ ಅವರ ಜೋಡಿಯಾಗಿ
ವೈಷ್ಣವಿ ನಾಡಿಗ್ ಕಾಣಿಸಿಕೊಂಡಿದ್ದು,
ಇನ್ನುಳಿದಂತೆ ರಂಜನ್ ಛತ್ರಪತಿ, ಕರಣ್ ಕುಂದರ್, ಯಶ್ ಆಚಾರ್ಯ, ಪ್ರಭಾಕರ ಕುಂದರ್, ರಘು ಪಾಂಡೇಶ್ವರ, ಚೇತನ ನೈಲಾಡಿ, ಚಿತ್ರಕಲಾ, ನೂರ್ ಅಹ್ಮದ್, ಸ್ವರಾಜ್ ಲಕ್ಷ್ಮಿ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ತಸ್ಮೈ ಪ್ರೊಡಕ್ಷನ್ಸ್ ಮತ್ತು ಜ್ಯೋತಿ ಪ್ರೊಡಕ್ಷನ್ಸ್ ಬ್ಯಾನರಿನಡಿ ಜಂಟಿಯಾಗಿ ವಿಕಾಸ್ ಎಸ್. ಶೆಟ್ಟಿ ನಿರ್ಮಾಣ ಮಾಡಿರುವ ಚಿತ್ರಕ್ಕೆ ಅನೀಶ್ ಡಿಸೋಜಾ ಛಾಯಾಗ್ರಹಣ, ಶಿವರಾಜ ಮೇಹು ಸಂಕಲನವಿದೆ. ಡೊಂಡಿ ಮೋಹನ್ ಸಾಹಿತ್ಯ ಹಾಗೂ ಸಂಗೀತ ನಿರ್ದೇಶನ ಮಾಡಿದ್ದಾರೆ.
ಚಿತ್ರವನ್ನು ಉಡುಪಿ, ಕುಂದಾಪುರ, ಕಾರವಾರ, ಶಿರಸಿ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಮಹಾರಾಷ್ಟ್ರದ ಸೋಲಾಪುರ ಹೀಗೆ ಕರಾವಳಿ-ಮಲೆನಾಡು ಮತ್ತು ಪಶ್ಚಿಮ ಘಟ್ಟದ ಸುತ್ತಮುತ್ತ ಸುಮಾರು 30ಕ್ಕೂ ಹೆಚ್ಚು ದಿನಗಳ ಕಾಲ ಚಿತ್ರೀಕರಣ ಮಾಡಲಾಗಿದೆ ಎಂಬ ವಿವರ ನೀಡಿತು ಚಿತ್ರತಂಡ.