ಸಿನಿಮಾ ಪ್ರಚಾರಕರ್ತರಾಗಿದ್ದ ದಿವಂಗತ ಡಿ.ವಿ.ಸುಧೀಂದ್ರ ಅವರು ಸ್ಥಾಪಿಸಿದ ರಾಘವೇಂದ್ರ ಚಿತ್ರವಾಣಿಗೆ ಈಗ 47ನೇ ವರ್ಷ. ಸಂಸ್ಥೆಯ ವಾರ್ಷಿಕೋತ್ಸವದ ಈ ಶುಭ ಸಂದರ್ಭದಲ್ಲಿ 21ನೇ ಸಾಲಿನ ಮತ್ತು 22ನೇ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು, ಪ್ರಶಸ್ತಿಗಳನ್ನು ಈಗಾಗಲೇ ಘೋಷಣೆ ಮಾಡಲಾಗಿದೆ.
ನಿರ್ಮಾಪಕರು ಮತ್ತು ಪತ್ರಕರ್ತರಿಗೆ ಮಾತ್ರವಲ್ಲದೆ ಕನ್ನಡ ಚಿತ್ರರಂಗಕ್ಕೆ ತಮ್ಮದೇ ರೀತಿಯಲ್ಲಿ ಕೊಡುಗೆಯನ್ನು ನೀಡುತ್ತಿರುವ ಕಲಾವಿದರು ಮತ್ತು ತಂತ್ರಜ್ಞರಿಗೆ ಪ್ರಶಸ್ತಿಗಳನ್ನು ನೀಡುತ್ತಿರುವುದು ವಿಶೇಷವಾಗಿದೆ.
ನಿರ್ಮಾಪಕ ಪಿ.ಧನರಾಜ್, ಹಿರಿಯ ಪತ್ರಕರ್ತ ಈಶ್ವರ್ ದೈತೋಟ, ನಿರ್ಮಾಪಕ ಕುಮಾರ್ ಗೋವಿಂದ್ ಹಾಗೂ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಸದಾಶಿವ ಶೆಣೈ ಅವರಿಗೆ ಶ್ರೀ ರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ ನೀಡಲಾಗುತ್ತಿದೆ ಎಂದು ಸಂಸ್ಥೆಯ ಮುಖ್ಯಸ್ಥ ಸುಧೀಂದ್ರ ವೆಂಕಟೇಶ್ ತಿಳಿಸಿದ್ದಾರೆ.
ಹಿರಿಯ ನಿರ್ದೇಶಕ ಓಂ ಸಾಯಿಪ್ರಕಾಶ್ ಅವರಿಗೆ ಆರ್.ಶೇಷಾದ್ರಿ ಸ್ಮರಣಾರ್ಥ ಪ್ರಶಸ್ತಿ, ಹಿರಿಯ ನಟ ಜೆ.ಕೆ.ಶ್ರೀನಿವಾಸಮೂರ್ತಿ ಅವರಿಗೆ ಸಿ.ಸೀತಾರಾಮ್ ಸ್ಮರಣಾರ್ಥ ಪ್ರಶಸ್ತಿಯನ್ನು ನೀಡಲಾಗುತ್ತಿದೆ.
ಹಿನ್ನೆಲೆ ಗಾಯಕ ರಾಜೇಶ್ ಕೃಷ್ಣನ್
ಅವರಿಗೆ ಡಾ. ರಾಜಕುಮಾರ್ ಪ್ರಶಸ್ತಿ,
ಹಿರಿಯ ನಟಿ ತುಳಸಿ ಅವರಿಗೆ ಡಾ.ಜಯಮಾಲ ಎಚ್.ಎಂ.ರಾಮಚಂದ್ರ ಪ್ರಶಸ್ತಿ, ಚಾರ್ಲಿ ಸಂಗೀತ ನಿರ್ದೇಶಕ ನೋಬಿನ್ ಪಾಲ್ ಅವರಿಗೆ ಎಂ.ಎಸ್.ರಾಮಯ್ಯ ಸ್ಮಾರಕ ಪ್ರಶಸ್ತಿ,
ಕಥಾ ಲೇಖಕ ಮಧುಚಂದ್ರ ಅವರಿಗೆ ಕೆ.ವಿ.ಜಯರಾಂ ಪ್ರಶಸ್ತಿ, ಎಂ.ಜಿ.ಶ್ರೀನಿವಾಸ್ ಅವರಿಗೆ ಹುಣುಸೂರು ಕೃಷ್ಣಮೂರ್ತಿ ಸ್ಮರಣೆಯ ಪ್ರಶಸ್ತಿ, 777ಚಾರ್ಲಿ ನಿರ್ದೇಶಕ ಕಿರಣ್ ರಾಜ್ ಅವರಿಗೆ ಬಿ.ಸುರೇಶ್ ಪ್ರಶಸ್ತಿ, ಗೀತರಚನೆಕಾರ ಪ್ರಮೋದ್ ಮರವಂತೆ ಅವರಿಗೆ ಪಿ.ಜಿ.ಶ್ರೀನಿವಾಸ್ ಸ್ಮರಣೆಯ ಪ್ರಶಸ್ತಿ ಘೋಷಣೆ ಮಾಡಲಾಗಿದೆ.
ಡಾ.ಭಾರತಿ ವಿಷ್ಣುವರ್ಧನ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮ. ಹರೀಶ್, ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್, ನಟಿ ರಾಗಿಣಿ ಹಾಗೂ ಇತರರು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
ದಿವಂಗತ ಡಿ.ವಿ.ಸುಧೀಂದ್ರ ಅವರ ಹುಟ್ಟುಹಬ್ಬದ ದಿನವಾದ ಜನವರಿ 25ರಂದು ಸಂಜೆ ಐದು ಗಂಟೆಗೆ ಬೆಂಗಳೂರಿನ ಕಲಾವಿದರ ಸಂಘದ ಆವರಣದಲ್ಲಿ ಈ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದು ಸುಧೀಂದ್ರ ವೆಂಕಟೇಶ್ ಮಾಹಿತಿ ನೀಡಿದ್ದಾರೆ.