ಕನ್ನಡದ ಆದಿ ಕವಿ ಪಂಪ ಕನ್ನಡಿಗರೆಲ್ಲರ ಹೃದಯದಲ್ಲಿ ಹಾಸು ಹೊಕ್ಕಾಗಿದ್ದಾರೆ..
‘ಆರಂಕುಸ ಮಿಟ್ಟೊಡಂ
ನೆನೆವಿದೆನ್ನ ಮನಂ
ಬನವಾಸಿ ದೇಶಮಂ’
ಎಂದ ಪಂಪ ಕನ್ನಡಿಗರ ಹೃದಯ ಮತ್ತು ಉಸಿರು.. ಈ ಆದಿಕವಿ ನೆನಪಿಸುವ ಚಿತ್ರವೊಂದು ಕನ್ನಡದಲ್ಲಿ ತಯಾರಾಗಿದೆ. ಅದರ ಹೆಸರೂ ಪಂಪ..!
ಯಾರು ಇಂತಹ ಧೈರ್ಯ ಮಾಡಿದವರು ಎಂಬುದು ದೊಡ್ಡ ಪ್ರಶ್ನೆಯಾದರೆ; ಮಹಾಗುರು, ನಾದಬ್ರಹ್ಮ ಹಂಸಲೇಖ ರಿಂದ ಅದು ಆರಂಭವಾಗುತ್ತದೆ.
ಹಂಸಲೇಖ ಜೊತೆಗೆ ಸೂಕ್ಷ್ಮವಂತ ನಿರ್ದೇಶಕ ಎಂದು ಕರೆಸಿಕೊಳ್ಳುವ ಎಸ್.ಮಹೇಂದರ್ ಹಾಗೂ ಐಟಿ ಸಿಟಿಯಲ್ಲಿ ಕನ್ನಡದ ಕಂಪು ಹರಡಲು ಪ್ರಯತ್ನಿಸುತ್ತಿರುವ ‘ಟೋಟಲ್ ಕನ್ನಡ’ದ ಮುಖ್ಯಸ್ಥ ವಿ.ಲಕ್ಷ್ಮಿಕಾಂತ್ ಎದುರು ನಿಲ್ಲುತ್ತಾರೆ.
ಒಂದು ನೈಜ ಕಥೆ ಹಿಡಿದು ಪಂಪನ ಹೆಸರಿಟ್ಟು ಸಿನಿಮಾ ಮಾಡುವ ಆಶಯ ಹೊಂದಿದ್ದ ಲಕ್ಷ್ಮಿಕಾಂತ್ ಅವರಿಗೆ ನೆರವಾಗಿದ್ದು ನಾದಬ್ರಹ್ಮ ಹಂಸಲೇಖ ಅವರೇ.. ಕೂಡಲೇ ನಾದಬ್ರಹ್ಮ ಎಲ್ಲಾ ಮಾತುಗಳಿಗೆ ‘ಎಸ್’ ಎನ್ನುವ ಪ್ರತಿಭಾವಂತ ನಿರ್ದೇಶಕ ಎಸ್.ಮಹೇಂದರ್ ಕೈಗೆ ಅದು ಬಿದ್ದ ನಂತರ ಒಂದು ಅಪರೂಪದ ಸಿನಿಮಾ ಕೃತಿಯಾಗಿದೆ.
ಇಲ್ಲಿ ಕನ್ನಡತನವಿದೆ. ಕನ್ನಡದ ಉಸಿರಿದೆ, ಹೆಸರಿದೆ. ಆದರೆ ವೈಭವೀಕರಣ ಇಲ್ಲ. ಆದ್ದರಿಂದ ಈ ಚಿತ್ರದ ಸ್ಯಾಟಲೈಟ್ ಹಕ್ಕುಗಳು ಮಾರಾಟವಾಗಿಲ್ಲ. ಟಿವಿಯವರು ಟಿ ಆರ್ ಪಿ ಕಂಟೆಂಟ್ ಕೇಳುತ್ತಿದ್ದಾರೆ. ಆದರೆ ನಮ್ಮ ಬಳಿ ಕನ್ನಡ ಮಾತ್ರವಿದೆ ಎಂದರು ನಿರ್ಮಾಪಕ ವಿ.ಲಕ್ಷ್ಮಿಕಾಂತ್.
ಆದಾಗ್ಯೂ ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ.. ಮಹೇಂದರ್ ಬೇರೆ ರೀತಿಯ ಸಿನಿಮಾ ಕೊಟ್ಟಿದ್ದಾರೆ. ಅದೇ ರೀತಿ ಮಹಾ ಗುರು ಹಂಸಲೇಖ ಕನ್ನಡದ್ದೇ ಸದ್ದು ಮಾಡಿದ ಸಂಗೀತ ಕೊಟ್ಟಿದ್ದಾರೆ ಎಂಬ ವಿವರಗಳು ಬಂದವು.
ಹಂಸಲೇಖ ಅವರು ಮಾತನಾಡುವಾಗಲೂ ನನ್ನ ಹೆಸರು, ಉಸಿರು, ಕೊಂದರೂ ಕನ್ನಡವೇ ಎಂದು ಹೇಳಿದರು. ತಮ್ಮದೇ ಕವಿತ್ವದ ಧಾಟಿಯ ಹಾಡುಗಳನ್ನು ಬರೆದಿರುವ ಬಗ್ಗೆ ವಿವರ ನೀಡಿದರು. ಪಂಪನ ಹೆಸರಿಟ್ಟು ಸಿನಿಮಾ ಮಾಡಲು ಗಟ್ಟಿ ಗುಂಡಿಗೆ ಬೇಕು ಎಂದರು. ಪಂಪನ ಕನ್ನಡತನವನ್ನು ಸಾರಿದರು.
ನಾಲ್ಕು ವರ್ಷಗಳಿಂದೀಚೆಗೆ ಕನ್ನಡಕ್ಕೆ ಅಪಾಯ ಕಾಣಿಸುತ್ತಿದೆ. ಹಾಗಾಗಿ ಕನ್ನಡದ ಸಿನಿಮಾಗಳ ಅನಿವಾರ್ಯತೆ ಈಗ ಹೆಚ್ಚಾಗಿದೆ. ಇಂತಹ ಸಂದರ್ಭದಲ್ಲಿ ‘ಪಂಪ’ ಬರುತ್ತಿರುವುದು ಸೂಕ್ತವಾಗಿದೆ ಎಂದರು ಡಾ.ಹಂಸಲೇಖ.
ಇಲ್ಲಿ ಪರಸ್ಪರ ವಿರುದ್ಧವಾದ ಎರಡು ಧೃವಗಳ ಕಥೆ ಇದೆ. ಜೊತೆಗೆ ಕನ್ನಡದ ಲೇಪನ ಇದೆ. ನೂರಾರು ಪ್ರಶ್ನೆ ಹಾಕುತ್ತೆ.. ಇಲ್ಲಿ ಕನ್ನಡದ ಬಳಕೆಯ ಸೂಕ್ಷ್ಮ ವಿಚಾರಗಳಿಗೆ ಬೆನ್ನೆಲುಬಾದವರು ಹಂಸಲೇಖ. ಅವರ ಬೆಂಬಲದಿಂದ ಕನ್ನಡತನ ಮೆರೆದಿದೆ ಎಂದರು ನಿರ್ದೇಶಕ ಎಸ್.ಮಹೇಂದರ್.
ರಂಗಭೂಮಿ ನಟ ಕೀರ್ತಿ ಭಾನು ಮುಖ್ಯಪಾತ್ರದಲ್ಲಿದ್ದು, ಜೊತೆಗೆ ರಾಘವ್ ನಾಯಕ್ ಹಾಗೂ ‘ಚಾರ್ಲಿ 777’ ಖ್ಯಾತಿಯ ಸಂಗೀತ ಶೃಗೇರಿ ಇದ್ದಾರೆ. ಇನ್ಸ್ ಪೆಕ್ಟರ್ ಪಾತ್ರ ಇಡೀ ಚಿತ್ರವನ್ನು ಆವರಿಸಿಕೊಂಡಿದ್ದು ಆ ಪಾತ್ರದಲ್ಲಿ ಅರವಿಂದ್ ನಟಿಸಿದ್ದಾರೆ. ಕಲಾವಿದ ರವಿಭಟ್, ಅವರ ಪುತ್ರಿ ಕೃಷ್ಣಾ ಭಟ್, ಆದಿತ್ಯ ಶೆಟ್ಟಿ ಪಾತ್ರವರ್ಗದಲ್ಲಿ ಕಾಣಿಸಿಕೊಂಡಿದ್ದಾರೆ.
ಕೋಟಿ ನಿರ್ಮಾಪಕ ದಿವಂಗತ ರಾಮು ಅವರ ಸೋದರ ಸಂಬಂಧಿ ಹನುಮಂತು ಈ ಚಿತ್ರವನ್ನು ವಿತರಣೆ ಮಾಡುತ್ತಿದ್ದು,ಆಗಸ್ಟ್ ಚಿತ್ರ ಬಿಡುಗಡೆ ಕಾಣುತ್ತಿದೆ ಎಂಬ ವಿವರಗಳು ಬಂದವು.