ರೇಟಿಂಗ್ : 4.5/5
ನಿರ್ಮಾಣ : ಲಹರಿ ಫಿಲಮ್ಸ್, ವೀನಸ್ ಎಂಟರ್ ಪ್ರೈಸಸ್ ಮೂಲಕ ಜಿ.ಮನೋಹರ ನಾಯ್ಡು ಮತ್ತು ಕೆ.ಪಿ.ಶ್ರೀಕಾಂತ್
ನಿರ್ದೇಶನ : ಉಪೇಂದ್ರ
ಉಪ್ಪಿಗಿಂತ ರುಚಿ ಬೇರೆ ಇಲ್ಲ
ಒಪ್ಪಿಕೊಂಡೋರು ದಡ್ಡರಲ್ಲ..
ಜಗತ್ತಿನ ಕೆಲವೇ ಕೆಲವು ಚಿತ್ರ ನಿರ್ದೇಶಕರು ಮಾತ್ರ ತಾವು ಮಾಡುವ ಚಿತ್ರಗಳಿಗೆ ಬ್ರಾಂಡ್ ಆಗುತ್ತಾರೆ; ಎಲ್ಲವೂ ವಿಶೇಷತೆಯ ಅಚ್ಚೊತ್ತಿದ ಹಾಗೆ ಸೃಷ್ಟಿ ಕಾರ್ಯದಲ್ಲಿ ತೊಡಗುವುದು ಸಾಮಾನ್ಯ ವಿಷಯವೇ ಅಲ್ಲ.
ವ್ಯವಸ್ಥೆ ಮತ್ತು ಅಸಮಾನತೆ ವಿರುದ್ಧ ಸರಳ ಧಾಟಿ ಮತ್ತು ಮಿಥ್ ಗಳ ಮೂಲಕ ತಮ್ಮ ಚಿತ್ರಗಳಲ್ಲಿ ಹೇಳುತ್ತಾ ಬಂದ ರಿಯಲ್ ಸ್ಟಾರ್ ಉಪೇಂದ್ರ, ಈಗ ಒಂದು ಹೆಜ್ಜೆ ಮುಂದೆ ಹೋಗಿ ‘ಸತ್ ಪ್ರಜೆ’ಗಳ ವಿವೇಚನಾ ಶಕ್ತಿಯನ್ನೇ ಕೆಣಕಿದ್ದಾರೆ.
ಚಿತ್ರದೊಳಗೊಂದು ಚಿತ್ರ ಅಲ್ಲಿ ಬರುವ ತಿಕ್ಕಲು ನಿರ್ದೇಶಕ (ಜೀನಿಯಸ್). ಮೂಲೆಗೆ ಬಿದ್ದ ಸ್ಕ್ರಿಪ್ಟ್. ಅದು ರೂಪುಗೊಂಡು ಮಜಾ ನೀಡುವ ಪರಿ ಎಲ್ಲವೂ ಉಪ್ಪಿಯ ಮಾಮೂಲಿ ವರಸೆಗಳೇ.
ಆದರೆ ಆ ಕಥೆಯಲ್ಲಿನ ಪದರಗಳು. ಅವು ಬಿಚ್ಚಿಕೊಳ್ಳುವ ರೀತಿ ತಂತ್ರಜ್ಞಾನದ ಮೈ ಸಿರಿ ಎಲ್ಲವೂ ಹೊಸದೊಂದು ರಮ್ಯ ಲೋಕವನ್ನೇ ಅನಾವರಣಗೊಳಿಸುವುದು ನಿಜವಾದರೂ ಅದರೊಳಗಿನ ತತ್ವ ಮತ್ತು ಪ್ರಶ್ನಾರ್ಥಕ ಒಳನೋಟ ಮೆದುಳನ್ನು ವಿಚಲಿತಗೊಳಿಸದೇ ಬಿಡಲಾರದು..
ಹಾಗಾಗಿ ಮೆದುಳು ಇಲ್ಲಿ ಸಾಂಕೇತಿಕ ರೂಪ ಪಡೆದಿದೆ ಮಾತ್ರವಲ್ಲ; (ಈ ಚಿತ್ರವನ್ನು ಹೃದಯದಿಂದ ನೋಡಿದರೆ ಅರ್ಥವೇ ಆಗುವುದಿಲ್ಲ) ಚಿತ್ರವನ್ನು ಅರ್ಥ ಮಾಡಿಕೊಳ್ಳಲು ಮೆದುಳು ಬಳಕೆ (ಬುದ್ಧಿಶಕ್ತಿ) ಅನಿವಾರ್ಯ..
ಹಾಗಾಗಿ ಸತ್ಯ ಪಾತ್ರಧಾರಿ ಉಪೇಂದ್ರ ಪದೇ ಪದೇ ಹೇಳುವ ‘ಕಾಂ ಡೌನ್; ಕೂಲ್; ಕಾನ್ಸನ್ ಟ್ರೇಟ್’ ಎಂಬುದನ್ನು ಮೊದಲು ಪ್ರೇಕ್ಷಕ ಅಳವಡಿಸಿಕೊಳ್ಳಬೇಕು. ಎಲ್ಲದಕ್ಕೂ ಪರಿಹಾರ ಇದ್ದೇ ಇರುತ್ತದೆ. ಆದರೆ ಎದುರಾದ ಸಂದರ್ಭ ಮತ್ತು ಅದರ ಕಾಠಿಣ್ಯತೆ ಅರಿಯುವ ತಾಳ್ಮೆ ಮತ್ತು ವಿವೇಚನೆ ಬಹಳ ಮುಖ್ಯ ಎಂಬ ‘ಸತ್ಯ’ನ ನಡೆಯೂ ಅರ್ಥವಾಗಬೇಕು.
ಸಾಮಾಜಿಕ ಬದುಕಿನಲ್ಲಿ ಬರೀ ವಿಷ ವರ್ತುಲಗಳೇ ತುಂಬಿವೆ. ಎಷ್ಟೋ ವಿಷಯಗಳು ನಮ್ಮನ್ನು ಕತ್ತಲೆನಲ್ಲಿಯೇ ಇಟ್ಟಿವೆ. ಅವುಗಳೆಡೆ ವ್ಯವಧಾನದಿಂದ ಜ್ಞಾನವೆಂಬ ಬೆಳಕನ್ನು ಅರಸಿ ನುಗ್ಗಬೇಕು. ಆಗ ಅತ್ಯಂತ ಕಠಿಣ ದಾರಿಯೂ ಸುಲಭವಾಗಿ ಗೋಚರಿಸುತ್ತದೆ ಎಂಬುದು ಸತ್ಯನ ಪ್ರತಿ ನಡೆಯ ಅರ್ಥ.
ಆದರೆ ಕಲ್ಕಿಯದು ಉಗ್ರಾವತಾರ. ವ್ಯವಸ್ಥೆ ಸಾಮಾನ್ಯರ ಬದುಕನ್ನು ನುಂಗಿದ ಪರಿಯನ್ನು ವಾಸ್ತವದ ನೆರಳಿನೊಂದಿಗೆ ಪರಿಚಯಿಸುವ ಅತ್ಯಾವಸರ. ಏಕೆಂದರೆ ಕಲ್ಕಿ ವಾಸ್ತವ ಪ್ರಜ್ಞೆಯ ಜೊತೆಗೆ ಭವಿಷ್ಯದ ಕೈಗನ್ನಡಿ ನೋಡುಗ.
ಪ್ರಕೃತಿ ಮಾತೆಯ ಮೇಲೆ ನಿರಂತರ ಅತ್ಯಾಚಾರ ನಡೆಯುತ್ತಿದೆ. ಆ ಮಾತೆ ಕಲ್ಕಿಯ ಅವ್ವ. ಆಕೆಯ ನಿಷ್ಕ್ರಿಯ ಮೆದುಳನ್ನು ಸರಿಪಡಿಸಲು ಆತ ಮಾಡುವ ಡಬ್ಬಾಳಿಕೆಗಳು ತಿಕ್ಕಲು ವರಸೆಗಳಂತೆ ಕಂಡರೂ ಅದು ಪ್ರಜೆಗಳನ್ನು ಎಚ್ಚರಿಸಲು ಮಾಡುವ ಶಾಕ್ ಟ್ರೀಟ್ ಮೆಂಟ್.
ಆಳುವವರು ವ್ಯವಸ್ಥೆಯನ್ನು ಹೇಗಿಟ್ಟಿದ್ದಾರೆ.. ಜಾತಿ; ಧರ್ಮಗಳನ್ನು ತಲೆಗೇರಿಸಿಕೊಂಡವರ ವಿವೇಚನೆ ಏನಾಗಿದೆ. ಪ್ರಜ್ಞಾಹೀನ ಸ್ಥಿತಿಯಲ್ಲಿ ‘ಸತ್ ಪ್ರಜೆ’ ಬಳಲುತ್ತಿರುವುದು ಹೇಗೆ..
ಹೌದು ದೇವರು, ಧರ್ಮಗಳ; ಜಾತಿ ಜಾತಿಗಳ ಹೊಡೆದಾಟ ಬಡಿದಾಟ ಸಾಮಾಜಿಕ ನೆಲೆಯಲ್ಲಿ ವಿವೇಚನೆ ಬಳಸಬೇಕಾದ ಸಂದರ್ಭದಲ್ಲಿ ಪ್ರಜೆಯ ಗಮನವೆಲ್ಲಾ ಮನರಂಜನೆಯ (ಸಂಪರ್ಕ ಸಾಧನಗಳ) ಮೇಲಿದೆ ಹಾಗಾಗಿ ಮೊಬೈಲ್ ಮತ್ತು ಟಿವಿಗಳು ಆಹಾರಕ್ಕಿಂತಲೂ ಪಾರುಪಥ್ಯ ಪಡೆದಿವೆ.
ಹೀಗೆ ರಂಜನೆ ಮತ್ತು ವಿಷಯ ಲೋಲುಪ್ತತೆಯಲ್ಲಿ ಮುಳುಗಿರುವ ಇಂತಹ ಜನರನ್ನು ಎಚ್ಚರಿಸಲು ಯಾರಿಂದ ಸಾಧ್ಯ..?
ಅಲ್ಲದೆ ‘ಅರ್ಥ’ವಾಗದ ವ್ಯವಸ್ಥೆಗೆ ಕೈಗನ್ನಡಿ ಹಿಡಿಯುವವರು ಯಾರು..!? ಈ ದೇಶದಲ್ಲಿ ಯಾರಾದರೂ ಸಾಲ ಮಾಡಿ ಕೊಳ್ಳೆ ಹೊಡೆದು ಪರಾರಿಯಾದರೂ ಆತನ ಸಾಲವನ್ನು ಪ್ರಜೆಗಳ ಮೇಲೆ ತೆರಿಗೆ ರೂಪದಲ್ಲಿ ಹಾಕಲಾಗುತ್ತದೆ. ಆದರೆ ಯಾರೂ ಪ್ರಶ್ನಿಸುವುದಿಲ್ಲ. ಏಕೆಂದರೆ ಯಾರಿಗೂ ಅರ್ಥ ವ್ಯವಸ್ಥೆಯ ಅರಿವಿರುವುದಿಲ್ಲ.
ಎಲ್ಲಿಯಾದರೂ ಪೋಲಾಗುತ್ತಿದ್ದರೆ; ರಾಜಕಾರಣಿ ಮಜಾ ಉಡಾಯಿಸುತ್ತಿದ್ದರೆ, ಅದು ನನ್ನದೇ ತೆರಿಗೆಯ ಹಣ ಎಂಬುದು ಪ್ರಜೆಗಳಿಗೆ ಅರ್ಥ ಮಾಡಿಸಲು ಕಟ್ಟಿದ ‘ಕೀಯ’ ವರಸೆ ಇಲ್ಲಿಯೂ ಕಾಣುತ್ತದೆ.
ತಪ್ಪು ವರಸೆಗಳನ್ನು ವಿರೋಧಿಸುವ ಧೋರಣೆಗಳಿಂದ ಉಪೇಂದ್ರ ಹೆಚ್ಚು ಆಪ್ತವಾಗುತ್ತಾರೆ. ಅವರ ಬುದ್ಧಿವಂತಿಕೆ, ಸವಾಲು ಎಲ್ಲದರಲ್ಲಿಯೂ ಪ್ರಜೆಗಳ ನಿರಾಸಕ್ತಿಯ ಮೆರವಣಿಗೆ ಕಾಣುತ್ತದೆ.
ಇದು ಕೇವಲ ಚಿತ್ರವಲ್ಲ; ಎರಡೂವರೆ ಸಾವಿರ ವರ್ಷಗಳ ಹಿಂದೆ ‘ಆಸೆಯೇ ದುಃಖಕ್ಕೆ ಮೂಲ’ ಎಂದು ಬಣ್ಣಿಸಿದ ಬುದ್ಧನ ವಿಚಾರ; ಜನರಿಂದಲೇ ಕೊಲ್ಲಲ್ಪಟ್ಟ ಬಸವಣ್ಣ, ಏಸುಕ್ರಿಸ್ತನ ವಿಚಾರಗಳ ಸಮ್ಮಿಲನ. ಭೂತ, ಭವಿಷ್ಯ ಹಾಗೂ ವರ್ತಮಾನದ ಅಣಕ.
ಇಡೀ ಚಿತ್ರವನ್ನು ಸತ್ಯ ಮತ್ತು ಕಲ್ಕಿಯಾಗಿ ಉಪೇಂದ್ರ ಆವರಿಸಿಕೊಂಡಿದ್ದಾರೆ. ಹಾಗಾಗಿ ರವಿಶಂಕರ್ ಹೊರತು ಪಡಿಸಿ ಯಾವ ಪಾತ್ರಗಳು ಎದ್ದು ಕಾಣುವುದಿಲ್ಲ. ಸಾಧು ಕೋಕಿಲ, ರೀಷ್ಮಾ ನಾಣಯ್ಯ, ಅಚ್ಯುತ್ ಕುಮಾರ್, ವಿ.ಮನೋಹರ್ ಹಾಗೂ ದಿವಂಗತ ಗುರು ಪ್ರಸಾದ್ ಮಾತ್ರ ಅಲ್ಲಲ್ಲಿ ಕಾಣುತ್ತಾರೆ.
ಕನ್ನಡ ಚಿತ್ರವೊಂದರ ಶ್ರೀಮಂತ ತಾಂತ್ರಿಕ ಕೌಶಲ್ಯಗಳ ಮೆರವಣಿಗೆ ನೋಡುವ ಸಲುವಾಗಿಯಾಗಿಯಾದರೂ ಚಿತ್ರವನ್ನು ನೋಡಲೇ ಬೇಕು. ಎಚ್.ಸಿ.ವೇಣು ಕ್ಯಾಮೆರಾ ಮತ್ತು ಸಿಜಿ ಮತ್ತು ವಿಎಫ್ ಎಕ್ಸ್ ನ ಸಮರ್ಪಕ ಬಳಕೆ. ಅಜನೀಶ್ ಲೋಕನಾಥ್ ಸಂಗೀತದ ವೈವಿಧ್ಯ ಮತ್ತು ವ್ಯವಧಾನ ಅದ್ದೂರಿತನವನ್ನು ಹೆಚ್ಚಿಸಿವೆ.
ತಮಿಳು ನಿರ್ದೇಶಕ ಎ.ಆರ್.ಮುರಗದಾಸ್ ‘ಏಳಂ ಅರಿವು’ ಮಾಡಿದಾಗ ಜನರಿಗೆ ‘ಅತೀಂದ್ರಿಯ’ ಶಕ್ತಿಯ ಅರಿವೆಯೇ ಆಗದೆ ಅದು ಹೆಚ್ಚು ತಲುಪಲಿಲ್ಲ. ಆದರೆ ‘ಯುಐ’ ನಲ್ಲಿ ಪದರಗಳು ಹೆಚ್ಚಾಗಿದ್ದರೂ ಮೆದುಳು ಸಾಣೆ ಹಿಡಿಯುವ ರೂಪಕಗಳ ಮೂಲಕ ಉಪ್ಪಿ ಗೆಲ್ಲುತ್ತಾರೆ..
ಏಕೆಂದರೆ ಉಪ್ಪಿಗಿಂತ ರುಚಿ ಬೇರೆ ಇಲ್ಲ; ಒಪ್ಪಿಕೊಂಡವರು ದಡ್ಡರೂ ಅಲ್ಲ..