* ಶ್ರೀ ರವಿಶಂಕರ್ ಗುರೂಜಿ ಆಶ್ರಮದಲ್ಲಿ ಮೋಹನ್ ಬಾಬು ನಿರ್ಮಾಣದ, ವಿಷ್ಣು ಮಂಚು ಅಭಿನಯದ ‘ಕಣ್ಣಪ್ಪ’ ಚಿತ್ರದ ‘ಶಿವ ಶಿವ ಶಂಕರ’ ಹಾಡಿನ ಬಿಡುಗಡೆ*
* ಭಾರತಿ ವಿಷ್ಣುವರ್ಧನ್, ಸುಮಲತ ಅಂಬರೀಶ್ ಹಾಗೂ ರಾಕ್ ಲೈನ್ ವೆಂಕಟೇಶ್ ಸಮಾರಂಭದಲ್ಲಿ ಉಪಸ್ಥಿತಿ *
ತೆಲುಗು ಚಿತ್ರರಂಗದ ಹೆಸರಾಂತ ನಟ ಮೋಹನ್ ಬಾಬು ನಿರ್ಮಾಣದ ಮತ್ತು ಅವರ ಪುತ್ರ ವಿಷ್ಣು ಮಂಚ್ ಮುಖ್ಯ ಪಾತ್ರದಲ್ಲಿ ನಟಿಸಿರುವ ‘ಕಣ್ಣಪ್ಪ’ ಚಿತ್ರದ ಹಾಡು ಬಿಡುಗಡೆಗೊಂಡಿದೆ.
ಈಚೆಗೆ ಬೆಂಗಳೂರಿನ ಶ್ರೀ ರವಿಶಂಕರ್ ಗುರೂಜಿ ಆಶ್ರಮದಲ್ಲಿ ನಡೆದ ಸಮಾರಂಭದಲ್ಲಿ ‘ಶಿವ ಶಿವ ಶಂಕರ’ ಎಂಬ ಭಕ್ತಿ ಪ್ರಧಾನ ಹಾಡು ಬಿಡುಗಡೆಗೊಂಡಿದೆ.
ಎರಡನೇ ‘ಮಹಾ ಭಾರತ’ ಧಾರಾವಾಹಿ ಖ್ಯಾತಿಯ ಮುಖೇಶ್ ಕುಮಾರ್ ಸಿಂಗ್ ನಿರ್ದೇಶನವಿರುವ ‘ಕಣ್ಣಪ್ಪ’ ಚಿತ್ರದ ಹಾಡನ್ನು ಆರ್ಟ್ ಆಫ್ ಲಿವಿಂಗ್ ನ ಶ್ರೀ ರವಿಶಂಕರ್ ಗುರೂಜಿ ಬಿಡುಗಡೆ ಮಾಡಿ ಚಿತ್ರ ತಂಡಕ್ಕೆ ಶುಭ ಹಾರೈಸಿದರು.
ನಟ ಮೋಹನ್ ಬಾಬು, ವಿಷ್ಣು ಮಂಚು, ನಿರ್ದೇಶಕ ಮುಖೇಶ್ ಕುಮಾರ್ ಸಿಂಗ್ ಜೊತೆಗೆ ಡಾ.ಭಾರತಿ ವಿಷ್ಣುವರ್ಧನ್, ಸುಮಲತಾ ಅಂಬರೀಶ್ ಹಾಗೂ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಸಮಾರಂಭದಲ್ಲಿ ಭಾಗವಹಿಸಿದ್ದರು.
ಕಣ್ಣಪ್ಪ ಅಂದ ಕೂಡಲೆ ನೆನಪಿಗೆ ಬರುವುದು ಕನ್ನಡದ ವರನಟ ಡಾ.ರಾಜಕುಮಾರ್ ಮತ್ತು ಅವರ ಅಮೋಘ ನಟನೆಯ ‘ಬೇಡರ ಕಣ್ಣಪ್ಪ’ ಕಣ್ಣ ಮುಂದೆ ಬರುತ್ತದೆ ಎಂದರು ನಟ, ನಿರ್ಮಾಪಕ ಮೋಹನ್ ಬಾಬು.
ಇನ್ನು ಆತ್ಮೀಯ ಗೆಳೆಯರಾಗಿದ್ದ ವಿಷ್ಣುವರ್ಧನ್ ಹಾಗು ಅಂಬರೀಶ್ ಅವರ ಪತ್ನಿಯರಾದ ಭಾರತಿ ವಿಷ್ಣುವರ್ಧನ್ ಹಾಗೂ ಸುಮಲತಾ ಅಂಬರೀಶ್ ಅವರ ಹಾಜರಾತಿ ಅತ್ಯಂತ ಖುಷಿ ಕೊಟ್ಟಿದೆ ಎಂದರು ಮೋಹನ್ ಬಾಬು.
ರಾಕ್ ಲೈನ್ ವೆಂಕಟೇಶ್ ಅವರು ಕರ್ನಾಟಕದಲ್ಲಿ ‘ಕಣ್ಣಪ್ಪ’ ಚಿತ್ರದ ವಿತರಣೆ ಹಕ್ಕನ್ನು ಪಡೆದುಕೊಂಡಿದ್ದಾರೆ. ಭಾರತೀಯ ಚಿತ್ರರಂಗದ ಪ್ರಸಿದ್ಧ ಕಲಾವಿದರು ಅಭಿನಯಿಸಿರುವುದು ಚಿತ್ರದ ಹೆಚ್ಚುಗಾರಿಕೆಯಾಗಿದೆ ಎಂದರು ಮೋಹನ್ ಬಾಬು.
ವಿಷ್ಣು ಮಂಚ್ ಕೂಡ ರವಿಶಂಕರ್ ಗುರೂಜಿ ಹಾಗೂ ಇತರ ಗಣ್ಯರಿಗೆ ಧನ್ಯವಾದ ಅರ್ಪಿಸಿದರು. ಮೋಹನ್ ಬಾಬು ಹಾಗೂ ನಮ್ಮ ಯಜಮಾನರ ಒಡನಾಟ ಉತ್ತಮವಾಗಿತ್ತು. ಆದ್ದರಿಂದಲೇ ಮಗನಿಗೆ ವಿಷ್ಣು ಎಂಬ ಹೆಸರನ್ನು ಇಟ್ಟಿದ್ದಾರೆ. ಅವರ ಚಿತ್ರಕ್ಕೆ ಒಳಿತಾಗಲಿ ಎಂದರು ಭಾರತಿ ವಿಷ್ಣುವರ್ಧನ್.
ತೆಲುಗಿನಲ್ಲಿ ಮೋಹನ್ ಬಾಬು ಅವರ ಜೊತೆ ಸಾಕಷ್ಟು ಚಿತ್ರಗಳಲ್ಲಿ ಅಭಿನಯಿಸಿರುವೆ. ಅಲ್ಲದೆ ಅಂಬರೀಶ್ ಅವರಿಗೆ ಮೋಹನ್ ಬಾಬು ಅತ್ಯಂತ ಆಪ್ತರಾಗಿದ್ದರು. ಈಗ ಚಿತ್ರದ ಹಾಡು ಮತ್ತು ಚಿತ್ರವೂ ಯಶಸ್ವಿಯಾಗಲಿ ಎಂದರು ಸುಮಲತಾ.
ಚಿತ್ರವನ್ನು ಈಗಾಗಲೇ ನೋಡಿರುವೆ; ಈ ಚಿತ್ರವನ್ನು ಕರ್ನಾಟಕದಲ್ಲಿ ಬಿಡುಗಡೆ ಮಾಡಲು ಸಂತೋಷವಾಗುತ್ತಿದೆ ಎಂದು ಕರ್ನಾಟಕದ ವಿತರಣೆ ಹಕ್ಕು ಪಡೆದುಕೊಂಡಿರುವ ರಾಕ್ ಲೈನ್ ವೆಂಕಟೇಶ್ ತಿಳಿಸಿದರು.
ನಿರ್ದೇಶಕ ಮುಖೇಶ್ ಕುಮಾರ್ ಸಿಂಗ್, ನಟ ಅರ್ಪಿತ್ ರಂಕ,
ಹಾಡು ಬರೆದಿರುವ ರಾಮಜೋಗಿ ಶಾಸ್ತ್ರಿ ಹಾಗೂ ಸಂಗೀತ ನಿರ್ದೇಶಕ ಸ್ಟೀಫನ್ ದೇವಸ್ಸಿ ಚಿತ್ರದ ಕುರಿತು ಮಾತನಾಡಿದರು. ಹೆಸಾರಾಂತ ಗಾಯಕ ವಿಜಯ್ ಪ್ರಕಾಶ್ ಈ ಹಾಡನ್ನು ಹಾಡಿರುವುದು ವಿಶೇಷ.