ನಾವು ರಿಸ್ಕ್ ನಲ್ಲಿ ಇದ್ದೇವೆ ಎಂದರು ನಿರ್ದೇಶಕ ಬಿ.ರಾಜರತ್ನ..
ಹೌದು ಅಂತರ್ ಧರ್ಮೀಯ ಪ್ರೇಮವನ್ನು ತೆರೆಯ ಮೇಲೆ ತರುವಾಗ ಅದರದೇ ಆದ ಜವಾಬ್ದಾರಿಗಳಿರುತ್ತವೆ ಎಂಬುದು ಅವರ ವಾದದ ತಿರುಳಾಗಿತ್ತು.
ಅಂದ ಹಾಗೆ ರಿಸ್ಕ್ ಎದುರಿಗಿದೆ ಎಂಬ ಪ್ರಜ್ಞೆಯಲ್ಲಿ ಮಾಡಿ ಮುಗಿಸಿರುವ ಚಿತ್ರದ ಹೆಸರು ತಾಜ್..!
ವಾಹ್ ತಾಜ್ ಎಂಬ ಸ್ವಾದವನ್ನು ಇಟ್ಟುಕೊಂಡು ಮಾಡಿರುವ ಕಥೆ ಮತ್ತು ಅದರ ಸಾಹಸಗಳ ಬಗ್ಗೆ ಚಿತ್ರದ ಟ್ರೈಲರ್ ಬಿಡುಗಡೆಯಲ್ಲಿ ವಿವರಗಳನ್ನು ನೀಡಿತು ಚಿತ್ರತಂಡ.
ಇದು ಎರಡು ಧರ್ಮಗಳ ಯುವಕ ಯುವತಿ ನಡೆಯುವ ಪ್ರೇಮ ಕಥೆ. ಸಹಜವಾಗಿ ಸಮಾಜದ ವಿರೋಧ ಎದುರಾಗುತ್ತದೆ. ಅದನ್ನು ಮೀರಿದ ವರಸೆಯಲ್ಲಿ ಚಿತ್ರವು ಮನರಂಜನೆ ನೀಡುತ್ತದೆ ಎಂದರು ನಿರ್ದೇಶಕ ಬಿ.ರಾಜರತ್ನ.
ಇದು ನಿಜ ಜೀವನದ ಕಥೆ. ಸಂಘರ್ಷವೂ ಇದೆ. ಮುಖ್ಯ ಪಾತ್ರದಲ್ಲಿರುವ ಷಣ್ಮಖ ಜೈ ಅವರು ಹೊಡೆದಾಟದ ದೃಶ್ಯಗಳಲ್ಲಿ ಎದೆಗಾರಿಕೆ ಪ್ರದರ್ಶನ ಮಾಡಿದ್ದಾರೆ. ಅಲ್ಲದೆ ಅಣ್ಣಾವ್ರ ಪ್ರೇರಣೆಯ ಯೋಗವನ್ನೂ ಮಾಡಿದ್ದಾರೆ ಎಂಬ ವಿವರ ಕೊಟ್ಟರು.
ಷಣ್ಮಖ ಜೈ ತಮ್ಮ ಪತ್ನಿ ಲಕ್ಷ್ಮಿ ಅವರ ಹೆಸರಿನಲ್ಲಿ ಈ ಚಿತ್ರವನ್ನು ನಿರ್ಮಾಣ ಮಾಡಿರುವುದರ ಜೊತೆಗೆ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಯೋಗ ನನ್ನ ಹವ್ಯಾಸ ಹಾಗೆಯೇ ಸಾಹಸ ನಿಜವಾಗಿ ಮಾಡಬೇಕೆನಿಸಿ ಸಾಕಷ್ಟು ಹೊಡೆತ ತಿಂದಿರುವುದಾಗಿ ಹೇಳಿಕೊಂಡರು ಷಣ್ಮುಖ ಜೈ.
ಈ ಚಿತ್ರದಲ್ಲಿ ನಟಿಸಿರುವ ನಾಯಕ ನಟಿ ಅಪ್ಸರಾ ಅವರದೊಂದು ದುರಂತ ಕಥೆ..!
ಅಪ್ಸರಾ ಇಹಲೋಕ ತ್ಯಜಿಸಿದ್ದಾರೆ ಎಂಬುದು ನೋವಿನ ಸಂಗತಿ. ಆಕೆಯ ತಂದೆ ರಾಮಕೃಷ್ಣ ಅವರು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದು ವಿವರಗಳನ್ನು ನೀಡಿದರು.
ನಟ ವರ್ಧನ್ ತಮ್ಮ ಪಾತ್ರದ ಬಗ್ಗೆ ವಿವರ ನೀಡಿದರು. ಪ್ರೀತಿ ಯಾವಾಗಲೂ ಜಾತಿಯನ್ನು ಮೀರುತ್ತದೆ. ಆದರೆ ಸಮಾಜದಲ್ಲಿ ಆ ರೀತಿಯ ಪ್ರೇಮಿಗಳು ಒಂದಾಗುವುದು ಸುಲಭವಲ್ಲ; ಮುಸ್ಲಿಂ ಯುವಕನ ಪಾತ್ರ ಮಾಡಿರುವೆ ಎಂದರು.
ಛಾಯಾಗ್ರಾಹಕ ದೀಪಕ್ ಕುಮಾರ್ ಚಿತ್ರದ ಸಲುವಾಗಿ ಅನೇಕ ಪ್ರಯೋಗಗಳನ್ನು ಮಾಡಲಾಗಿದೆ ಎಂದು ಹೇಳಿಕೊಂಡರು.
ದಕ್ಷಿಣ ಆಫ್ರಿಕಾ ಮೂಲದ ನಟ ರೋಬೋ, ನಟ ಕಡ್ಡಿ ವಿಶ್ವ, ಕಾಶಿನಾಥ್ ನೆಲ ಮಂಗಲ, ಉದ್ಯಮಿ, ನಿರ್ಮಾಪಕ ರವಿ ಹಾಜರಿದ್ದರು.