Snehapriya.com

April 9, 2025

ಚಲನಚಿತ್ರ ಪ್ರಶಸ್ತಿ ಮುಂದುವರಿಕೆಗೆ ಸರ್ಕಾರದ ಅವಿರತ ಪ್ರಯತ್ನ..

Social Share :

* ಕೆ.ವಿ.ಪ್ರಭಾಕರ್ ಭರವಸೆ *

* ರಾಘವೇಂದ್ರ ಚಿತ್ರವಾಣಿ 24ನೇ ವರ್ಷದ ಪ್ರಶಸ್ತಿ ಪ್ರದಾನ *

ಕಳೆದ ನಾಲ್ಕೈದು ವರ್ಷಗಳಿಂದ ನಿಂತು ಹೋಗಿದ್ದ ಕನ್ನಡ ಚಲನ ಚಿತ್ರ ಪ್ರಶಸ್ತಿ ಹಾಗೂ ಗುಣಾತ್ಮಕ ಚಿತ್ರಗಳಿಗೆ ನೀಡುವ ಸಬ್ಸಿಡಿ ನೀಡಿಕೆ ಪರಂಪರೆ ಮುಂದುವರೆಸಿರುವುದು ಸಿದ್ದರಾಮಯ್ಯ ಸರ್ಕಾರದ ಹೆಮ್ಮೆಯ ವಿಷಯವಾಗಿದೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ತಿಳಿಸಿದ್ದಾರೆ.

ಕನ್ನಡ ಚಿತ್ರಗಳಿಗೆ ಪ್ರಶಸ್ತಿ ಹಾಗೂ ಸಬ್ಸಿಡಿ ನೀಡಿಕೆ ಸಂಬಂಧ ಈಗಾಗಲೇ ಸಮಿತಿಗಳನ್ನು ರಚಿಸಿ ಚಿತ್ರಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆಯಲ್ಲಿ ಎರಡು ವರ್ಷದ (2019 ಹಾಗೂ 2020) ಕೆಲಸಗಳು ಮುಗಿದಿದ್ದು, ಮತ್ತೆರಡು ವರ್ಷಗಳ ಪ್ರಕ್ರಿಯೆ ಸದ್ಯವೇ ಆರಂಭವಾಗಲಿದೆ ಎಂದು ಹೇಳಿದರು.

ಕನ್ನಡದ ಮುಂಚೂಣಿಯ ಪ್ರಚಾರಕರ್ತ ದಿವಂಗತ ಡಿ.ವಿ.ಸುಧೀಂದ್ರ ಸ್ಮರಣಾರ್ಥ ಏರ್ಪಡಿಸಲಾಗಿದ್ದ ‘ರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ’ಗಳನ್ನು ಪ್ರದಾನ ಮಾಡಿ ಅವರು ಮಾತನಾಡುತ್ತಿದ್ದರು.

ಚಿತ್ರರಂಗದ ಅನೇಕ ಬೇಡಿಕೆಗಳನ್ನು ಮುಖ್ಯಮಂತ್ರಿ ಅವರು ಈಗಾಗಲೇ ಪರಿಶೀಲಿಸಿ ಸಾಕಷ್ಟು ಅನುಕೂಲ ಮಾಡಿಕೊಟ್ಟಿರುವುದು ಹೆಮ್ಮೆಯ ವಿಷಯವಾಗಿದೆ. ಚಿತ್ರರಂಗಕ್ಕೆ ಸರ್ಕಾರದ ಸಕಾರಾತ್ಮಕ ಸ್ಪಂದನೆ ನಿರಂತರವಾಗಿರುವುದು ಮುಖ್ಯಮಂತ್ರಿಗಳ ಆಸಕ್ತಿಯ ಫಲವಾಗಿದೆ ಎಂದರು.

ಸಿನಿಮಾ ಪ್ರಚಾರಕರ್ತರನ್ನು ಕರ್ನಾಟಕ ಚಲನಚಿತ್ರ ಅಕಾಡೆಮಿಯ ನಿರ್ದೇಶಕರನ್ನಾಗಿಸಲು ಮತ್ತು ಸರ್ಕಾರದ ಸಿನಿಮಾ ಪ್ರಶಸ್ತಿಗೆ ಪರಿಗಣಿಸುವ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಚರ್ಚಿಸುವುದಾಗಿಯೂ ಭರವಸೆ ನೀಡಿದರು.

ಶ್ರೀರಾಘವೇಂದ್ರ ಚಿತ್ರವಾಣಿ ಸಂಸ್ಥೆಯ 49ನೇ ವಾರ್ಷಿಕೋತ್ಸವ
ಈಗ ನಡೆಯುತ್ತಿದ್ದು, ಮುಂದಿನ ವರ್ಷ 50 ವರ್ಷದ ಕಾರ್ಯಕ್ರಮಕ್ಕೆ ಸರ್ಕಾರ ಸ್ಪಂದಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡುವುದಾಗಿ ಹೇಳಿದರು.

ಈ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ಹಿರಿಯ ಪತ್ರಕರ್ತೆ ವಿಜಯಮ್ಮ, ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ನರಸಿಂಹಲು, ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್, ಮಾಧ್ಯಮ ಅಕಾಡೆಮಿ ಮಾಜಿ ಅಧ್ಯಕ್ಷ ಸದಾಶಿವಶೆಣೈ, ಪತ್ರಕರ್ತ ಹಾಗೂ ಚಿತ್ರ ನಿರ್ದೇಶಕ ಇಂದ್ರಜಿತ್ ಲಂಕೇಶ್, ನಟಿ ರಾಗಿಣಿ ದ್ವಿವೇದಿ ಹಾಗೂ ಸಂಜಯ್ ಗೌಡ ಅತಿಥಿಗಳಾಗಿ ಭಾಗವಹಿಸಿದ್ದರು.

ಹಿರಿಯ ಚಲನಚಿತ್ರ ನಿರ್ಮಾಪಕಿ ಮೀನಾಕ್ಷಿ ಕೆ.ವಿ. ಜಯರಾಂ ಹಾಗೂ ಹಿರಿಯ ಪತ್ರಕರ್ತ ಕೆ.ಜೆ. ಕುಮಾರ್ ಅವರಿಗೆ ಶ್ರೀ ರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಅನುರಾಧಾ ಭಟ್‍(ಗಾಯಕಿ) ಅತ್ತ್ಯುತ್ತಮ ಹಿನ್ನೆಲೆ ಗಾಯಕಿ ಡಾ.ರಾಜ್ ಕುಮಾರ್ ಪ್ರಶಸ್ತಿ, ಹಿರಿಯ ನಿರ್ದೇಶಕ ಓಂಪ್ರಕಾಶ್‍ ರಾವ್‍ ಅವರಿಗೆ ಆರ್. ಶೇಷಾದ್ರಿ ಸ್ಮರಣಾರ್ಥ ಪ್ರಶಸ್ತಿ, ಹಿರಿಯ ನಟಿ ರೇಖಾರಾವ್ ಅವರಿಗೆ ನಟಿ ಡಾ.ಜಯಮಾಲ ಎಚ್.ಎಂ. ರಾಮಚಂದ್ರ ಪ್ರಶಸ್ತಿ, ಸಂಗೀತ ನಿರ್ದೇಶಕ ಅರ್ಜುನ್‍ ಜನ್ಯ ಅವರಿಗೆ ಎಂ.ಎಸ್. ರಾಮಯ್ಯ ಮೀಡಿಯಾ ಅಂಡ್ ಎಂಟರ್ಟೈನ್ಮೆಂಟ್ ಪ್ರೈ ಲಿ ಪ್ರಶಸ್ತಿ.

ಶಿವಮ್ಮ ಚಿತ್ರದ ಉತ್ತಮ ಕಥಾಲೇಖನಕ್ಕಾಗಿ ಜೈಶಂಕರ್ ಆರ್ಯರ್ ಅವರಿಗೆ ಕೆ.ವಿ. ಜಯರಾಂ ಪ್ರಶಸ್ತಿ, ಚಂದ್ರಜಿತ್ ಬೆಳ್ಳಿಯಪ್ಪ ಅವರಿಗೆ ಖ್ಯಾತ ಚಿತ್ರಸಾಹಿತಿ ಹುಣಸೂರು ಕೃಷ್ಣಮೂರ್ತಿ ಸ್ಮರಣಾರ್ಥ ಪ್ರಶಸ್ತಿ, ಚೊಚ್ಚಲ ನಿರ್ದೇಶನಕ್ಕಾಗಿ ಉತ್ಸವ್‍ ಗೋನ್ವಾರ್ ಅವರಿಗೆ ಬಿ. ಸುರೇಶ ಅವರು ನೀಡುವ ಪ್ರಶಸ್ತಿ, ಡಾ.ವಿ.ನಾಗೇಂದ್ರ ಪ್ರಸಾದ್ ಅವರಿಗೆ ಹಿರಿಯ ಪತ್ರಕರ್ತ ಪಿ.ಜಿ. ಶ್ರೀನಿವಾಸಮೂರ್ತಿ ಅವರ ಸ್ಮರಣಾರ್ಥ ಪ್ರಶಸ್ತಿ.

ಅಲ್ಲದೆ ಗೌರಿ ಚಿತ್ರದಲ್ಲಿನ ಅಭಿನಯಕ್ಕಾಗಿ ಸಮರ್ಜಿತ್ ಲಂಕೇಶ್ ಅವರು ಶ್ರೀರಾಘವೇಂದ್ರ ಚಿತ್ರವಾಣಿಯ ವಿಶೇಷ ಪ್ರಶಸ್ತಿಗೆ ಭಾಜನರಾದರು.

ರಾಘವೇಂದ್ರ ಚಿತ್ರವಾಣಿಯ ಮುಖ್ಯಸ್ಥ ಸುಧೀಂದ್ರ ವೆಂಕಟೇಶ್, ಸುನೀಲ್ ಸುಧೀಂದ್ರ, ವಾಸುದೇವ್, ಪವನ್ ಹಾಗೂ ಕುಟುಂಬ ವರ್ಗ ಸಮಾರಂಭದಲ್ಲಿ ಪಾಲ್ಗೊಂಡಿತ್ತು.

ಸಿನಿಮಾ-ಗಾಸಿಪ್
Social Share :

Leave a Comment

Your email address will not be published. Required fields are marked *