ಕನ್ನಡ ರಾಜ್ಯೋತ್ಸವದ ದಿನವಾದ ನವೆಂಬರ್ ಒಂದರಂದು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮಾಡಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ನವೆಂಬರ್ ಒಂದರಂದು ಸಂಜೆ ನಾಲ್ಕು ಗಂಟೆಗೆ ವಿಧಾನಸೌಧದ ಮೆಟ್ಟಿಲುಗಳ ಮೇಲೆ ಸಮಾರಂಭ ಏರ್ಪಡಿಸಿ ಈ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಭೆಯ ಬಳಿಕ ಮುಖ್ಯಮಂತ್ರಿ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಘೋಷಣೆ ಮಾಡಿರುವ ಸರ್ಕಾರ ಆ ಪ್ರಶಸ್ತಿ ಪ್ರದಾನ ಮಾಡುವ ಸಲುವಾಗಿ ಸಮಾರಂಭ ನಿಗದಿಪಡಿಸುವ ಸಲುವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗುರುವಾರ ಸಭೆ ನಡೆಸಿದರು.
ಅಶ್ವಿನಿ ಪುನೀತ್ ರಾಜ್‍ಕುಮಾರ್, ರಾಘವೇಂದ್ರ ರಾಜ್ ಕುಮಾರ್ ಹಾಗೂ ಸಚಿವ ಸಂಪುಟದ ಹಿರಿಯ ಸದಸ್ಯರು ಇದರಲ್ಲಿ ಪಾಲ್ಗೊಂಡಿದ್ದರು.
ಡಾ.ಪುನೀತ್ ರಾಜ್ ಕುಮಾರ್ ಅವರಿಗೆ ಮರಣೋತ್ತರವಾಗಿ ‘ಕರ್ನಾಟಕ ರತ್ನ’ ಪ್ರಶಸ್ತಿ ಘೋಷಣೆ ಮಾಡಿದ್ದ ಸರ್ಕಾರ, ಅದನ್ನು ಪ್ರದಾನ ಮಾಡುವ ಕಾರ್ಯಕ್ರಮ ಹೇಗೆ ಮಾಡುವುದೆಂಬುದರ ಚಿಂತನೆ ನಡೆಸಿತ್ತು.
ಇದೇ ತಿಂಗಳು ಪುನೀತ್ ರಾಜ್‍ಕುಮಾರ್ ಅವರ ಪುಣ್ಯ ಸ್ಮರಣೆ ಇರುವುದರಿಂದ ಈ ಸಂದರ್ಭದಲ್ಲಿ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಏರ್ಪಡಿಸಲು ಮುಖ್ಯಮಂತ್ರಿ ಅವರು ಚಿಂತನೆ ನಡೆಸಿದ್ದರು.