ಕನ್ನಡದ ಗಂಡುಗಲಿ ನಿರ್ಮಾಪಕ ಕೆ.ಮಂಜು ಅವರ ಪುತ್ರ ಶ್ರೇಯಸ್ ಮುಖ್ಯ ಪಾತ್ರದಲ್ಲಿರುವ ‘ರಾಣ’ ಚಿತ್ರದ ವಿಶೇಷತೆಗಳು ಆಗಾಗ ದಾಖಲಾಗುತ್ತಲೇ ಇರುತ್ತವೆ..
ಇದೀಗ ಸಾಹಸದ ಟ್ರೈಲರ್ ಬಿಡುಗಡೆ ಕಂಡಿದ್ದು, ಈಚೆಗೆ ನಡೆದ ಸಮಾರಂಭದಲ್ಲಿ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅದನ್ನು ಬಿಡುಗಡೆ ಮಾಡಿದ್ದಾರೆ.
ಶ್ರೇಯಸ್ ಈ ಚಿತ್ರದ ಸಲುವಾಗಿ ಪಟ್ಟಿರುವ ಕಷ್ಟದ ಅರಿವಿದೆ. ಹಾಗಾಗಿ ಈ ಚಿತ್ರದ ವಿಶೇಷತೆಗಳನ್ನು ನಾನು ಬಲ್ಲೇ.. ಕೆ.ಮಂಜು ಮತ್ತು ಅವರ ಪುತ್ರ ಶ್ರೇಯಸ್ ಗೆ ಗೆಲುವಾಗಲಿ ಎಂದರು ಧ್ರುವಸರ್ಜಾ.
ನಿರ್ಮಾಪಕ ರಮೇಶ್ ರೆಡ್ಡಿ, ವಾಣಿಜ್ಯ ಮಂಡಳಿ ಗೌರವ ಕಾರ್ಯದರ್ಶಿ ಎಂ.ಎನ್.ಕುಮಾರ್, ಸೂರಪ್ಪ ಬಾಬು, ಚೇತನ್ ಗೌಡ, ಕಡ್ಡಿಪುಡಿ ಚಂದ್ರು, ರೈತ ಕೇಶವ್ ಮತ್ತು ನಿರ್ದೇಶಕ ಮಹೇಶ್ ಕುಮಾರ್ ಸೇರಿದಂತೆ ಅನೇಕ ಗಣ್ಯರು ಈ ಸಂದರ್ಭದಲ್ಲಿ ಹಾಜರಿದ್ದು ಶುಭ ಕೋರಿದರು.
ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ವಿಕ್ರಮ್ ರವಿಚಂದ್ರನ್ ಸಹ ಸಮಾರಂಭಕ್ಕೆ ಆಗಮಿಸಿ ಶುಭ ಕೋರಿದ್ದು ವಿಶೇಷವಾಗಿತ್ತು.
ಪಡ್ಡೆ ಹುಲಿ ಬಳಿಕ ರಾಣ ಬಿಡುಗಡೆ ಕಾಣುತ್ತಿದೆ. ಇದರಲ್ಲಿ ಹಲವು ವರ್ಷಗಳ ಶ್ರಮವಿದೆ. ಅಪ್ಪ ನನ್ನ ಮೇಲಿಟ್ಟಿರುವ ನಂಬಿಕೆ ಮತ್ತು ಧ್ರುವಸರ್ಜಾ ಮತ್ತು ಗಣ್ಯರ ನಂಬಿಕೆ ಉಳಿಸಿಕೊಳ್ಳುವ ಭರವಸೆ ಇದೆ ಎಂಬುದು ಶ್ರೇಯಸ್ ಮಾತು.
ಶ್ರೇಯಸ್ ಎದುರು ರೀಷ್ಮಾ ನಾಣಯ್ಯ ನಟಿಸಿದ್ದಾರೆ. ರಜನಿ ಭಾರದ್ವಾಜ್, ರಘು, ಮೋಹನ್ ಧನರಾಜ್ ಮೊದಲಾದವರ ತಾರಾಗಣವಿದೆ.
ಇಡೀ ಚಿತ್ರರಂಗ ಮತ್ತು ಗಣ್ಯರ ಶ್ರೀರಕ್ಷೆ ಇರುವುದು ನಮ್ಮ ಪುಣ್ಯ ಎಂದರು ನಿರ್ದೇಶಕ ನಂದ ಕಿಶೋರ್. ಚಿತ್ರದಲ್ಲಿ ಹಾಡುಗಳ ಜೊತೆಗೆ ಹಿನ್ನೆಲೆ ಸಂಗೀತ ನೀಡುವ ಅದೃಷ್ಟವೂ ನನ್ನದಾಯಿತು ಎಂದರು ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ. ಚಿತ್ರಕ್ಕೆ ಶೇಖರ್ ಚಂದ್ರ ಛಾಯಾಗ್ರಾಹಕ.
ರಾಣ ಬಿಡುಗಡೆ ದಿನಾಂಕ ಉತ್ತಮವಾಗಿದೆ ಎಂಬುದು ಕೆ.ಮಂಜು ಅವರ ನಂಬಿಕೆ. 11.11.22 ಒಳ್ಳೆಯ ದಿನವಾಗಿದೆ; ಶ್ರೇಯಸ್ ಮತ್ತು ಇಂದಿನ ಯುವ ಪೀಳಿಗೆ ಉತ್ತಮ ಭವಿಷ್ಯ ಹೊಂದಲಿದೆ ಎಂದರು ಕೆ.ಮಂಜು.
ಕೆ.ಮಂಜು ಅವರ ಸಾರಥ್ಯದಲ್ಲಿ ಹಾಗೂ ಇಡೀ ತಂಡದ ಸಹಕಾರದಿಂದ ಚಿತ್ರ ಚೆನ್ನಾಗಿ ಮೂಡಿಬಂದಿದೆ; ನೋಡಿ ಹರಿಸಿ ಎಂದರು ನಿರ್ಮಾಪಕ ಗುಜ್ಜಲ್ ಪುರುಷೋತ್ತಮ್.