ಹಿರಿಯ ನಟ ದೇವರಾಜ್ ಅವರ ಎರಡನೇ ಪುತ್ರ ಪ್ರಣಾಮ್ ಸಹ ಚಿತ್ರರಂಗದಲ್ಲಿ ಸದ್ದು ಮಾಡಲು ಸಜ್ಜುಗೊಂಡಿದ್ದಾರೆ.
ಅದೂ ಅವರ ಎರಡನೇ ಚಿತ್ರ ವೈರಂ ಮೂಲಕ. ಆಂಗ್ರಿ ಯಂಗ್ ಮ್ಯಾನ್ ಆಗಿ ಕಾಣಿಸಿಕೊಳ್ಳುವ ಮೂಲಕ ಚಿತ್ರರಂಗದಲ್ಲಿ ನವ ನವೀನ ಪ್ರತಿಭೆಯಾಗಿ ಹೊಮ್ಮುತ್ತಿದ್ದಾರೆ.
ಈಚೆಗೆ ನಡೆದ ‘ವೈರಂ’ ಚಿತ್ರದ ಟೀಸರ್ ಬಿಡುಗಡೆಯಲ್ಲಿ ದೇವರಾಜ್, ಚಂದ್ರಕಲಾ ದೇವರಾಜ್ ಹಾಗೂ ರಾಗಿಣಿ ಪ್ರಜ್ವಲ್ ಹಾಗೂ ಚಿತ್ರತಂಡದ ಸದಸ್ಯರು ಹಾಜರಿದ್ದರು.
ಚಿತ್ರರಂಗ ಈಗ ಮತ್ತೆ ಚಟುವಟಿಕೆ ಪಡೆದಿದೆ. ಇಂತಹ ಸಂದರ್ಭದಲ್ಲಿ ಪ್ರಣಾಮ್ ಚಿತ್ರ ಕೂಡ ಸದ್ದು ಮಾಡುತ್ತಿದೆ ಎಂಬುದು ಅತ್ಯಂತ ಖುಷಿಯ ವಿಷಯ ಎಂದರು ದೇವರಾಜ್. ನಿರ್ದೇಶಕ ಸಾಯಿ ಶಿವನ್ ಅತ್ಯುತ್ತಮ ಚಿತ್ರ ಮಾಡಿದ್ದಾರೆ ಎಲ್ಲರಿಗೂ ಒಳ್ಳೆಯದಾಗಲಿ ಎಂದರು.
ಚಿಕ್ಕ ವಯಸಿನಿಂದ ಅಪ್ಪ ಮತ್ತು ಅಣ್ಣ ಪ್ರಜ್ವಲ್ ಅವರ ಸಿನಿಮಾಗಳನ್ನು ನೋಡುತ್ತಾ ಬೆಳೆದವನು ಎಂದರು ಪ್ರಣಾಮ್ ದೇವರಾಜ್. ನಾಲ್ಕು ವರ್ಷಗಳ ಬಳಿಕ ಒಂದು ಅಪೂರ್ವ ಅವಕಾಶ ಸಿಕ್ಕಿದೆ. ಹಿಂದಿನ ಚಿತ್ರದಲ್ಲಿ ಚಾಕೊಲೇಟ್ ಬಾಯ್ ಆಗುವ ಅವಕಾಶವಾಗಿತ್ತು. ಈ ಸಿನಿಮಾದಲ್ಲಿ ಆಕ್ಷನ್ ಹೀರೋ ಅಗುವ ಅವಕಾಶ ಸಿಕ್ಕಿತು. ನಿರ್ದೇಶಕ ಸಾಯಿ ಶಿವನ್ ಅವರಲ್ಲಿ ಚಿತ್ರದ ಬಗ್ಗೆ ಬಹಳವೇ ಆತ್ಮ ವಿಶ್ವಾಸವಿದೆ. ನಿರ್ಮಾಪಕರಾಗಿ ಮಲ್ಲಿಕಾರ್ಜುನ ಹಾಗೂ ವೇಮಾರೆಡ್ಡಿ ಅವರ ಪ್ರಯತ್ನ ಕೂಡ ದೊಡ್ಡದಾಗಿದೆ ಎಂದು ಹೇಳುತ್ತಾ ಹೋದರು.
ವಿಲನ್ ಪಾತ್ರಧಾರಿ ಗರುಡರಾಮ್, ಶಂಕರ್ ಅಶ್ವಥ್, ವೀಣಾಸುಂದರ್ ಅವರಂಥ ಕಲಾವಿದರ ಜೊತೆ ಅಭಿನಯಿಸಿರುವುದು ಹೆಮ್ಮೆ ಎಂದರು.
ಪ್ರಣಾಮ್ ಎದುರು ನಟಿಸಿರುವ ಮೋನಾಲ್ ಗೆ ಇದು ಮೊದಲ ಕನ್ನಡ ಚಿತ್ರ. ಪ್ರಣಾಮ್ ಪ್ರತಿಭೆಯ ಬಗ್ಗೆ ನಿರ್ದೇಶಕ ಸಾಯಿ ಶಿವನ್ ಮೆಚ್ಚುಗೆ ಮಾತನಾಡಿದರು. ಗೋಪಿನಾಥ್ ಛಾಯಾಗ್ರಹಣ ಹಾಗೂ ಮಹತಿ ಸ್ವರ ಸಾಗರ್ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ ಎಂಬ ವಿವರಗಳು ಬಂದವು.