ಪವರ್ ಸ್ಟಾರ್, ಕರ್ನಾಟಕ ರತ್ನ ಡಾ.ಪುನೀತ್ ರಾಜ್ ಕುಮಾರ್ ಅವರ ಕಡೆಯ ಚಿತ್ರ ‘ಗಂಧದ ಗುಡಿ’ ಬಿಡುಗಡೆ ದಿನಾಂಕ ಹತ್ತಿರವಾಗುತ್ತಿರುವಂತೆಯೇ ಚಿತ್ರದ ಬಿಡುಗಡೆ ಪೂರ್ವ ಕಾರ್ಯಕ್ರಮ ‘ಪುನೀತ ಪರ್ವಕ್ಕೆ’ ಕ್ಷಣಗಣನೆ ಆರಂಭವಾಗಿದೆ.
ಅರಮನೆ ಮೈದಾನದಲ್ಲಿ ಅಕ್ಟೋಬರ್ 21ರ ಶುಕ್ರವಾರ ಸಂಜೆ ನಡೆಯುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವವರು ಶ್ವೇತ ವಸ್ತ್ರಧಾರಿಗಳಾಗಿ ಅಂದರೆ ಬಿಳಿಯ ಬಟ್ಟೆ ತೊಟ್ಟು ಬರುವಂತೆ ವಿನಂತಿಸಲಾಗಿದೆ.
‘ಪುನೀತ ಪರ್ವ’ದ ಸಲುವಾಗಿ ವಿಶಾಲ ಮೈದಾನದಲ್ಲಿ ಹಾಕಿರುವ ದೊಡ್ಡ ವೇದಿಕೆಯಲ್ಲಿ ಭಾರತೀಯ ಚಿತ್ರರಂಗದ ಗಣ್ಯರು ಸೇರಿದಂತೆ 500 ಅತಿ ಗಣ್ಯರು, 5000 ವಿಶೇಷ ಗಣ್ಯರು ಹಾಗೂ ಮೂರು ಲಕ್ಷಕ್ಕೂ ಅಧಿಕ ಅಭಿಮಾನಿಗಳು ಪಾಲ್ಗೊಳ್ಳಲು ವ್ಯವಸ್ಥೆ ಮಾಡಲಾಗಿದೆ.
ಸ್ವತಃ ಅಶ್ವಿನಿ ಪುನೀತ್ ರಾಜ್‍ಕುಮಾರ್ ಅವರು ‘ಗಂಧದ ಗುಡಿ’ ಅದ್ದೂರಿ ಬಿಡುಗಡೆಗೆ ಸಿದ್ಧತೆಯ ಉಸ್ತುವಾರಿ ವಹಿಸಿದ್ದಾರೆ.
ಅದರಂತೆ ಪುನೀತ್ ರಾಜ್‍ಕುಮಾರ್ ಅವರ ಪುಣ್ಯಸ್ಥಳವಾಗಿರುವ ಕಂಠೀರವ ಸ್ಟುಡಿಯೋ ಆವರಣ ಮತ್ತು ಹೊರಗೆ ಲೈಟಿಂಗ್ ವಿಶೇಷಗಳನ್ನು ಮಾಡುವುದರ ಜೊತೆಗೆ ಪುನೀತ್ ಅವರ ಸಾಮಾಜಿಕ ಕಾರ್ಯಗಳ ಅನಾವರಣ ಮಾಡುವ ಚಿಂತನೆ ನಡೆಸಲಾಗಿದೆ.
ಪುನೀತ ಪರ್ವದ ಬಳಿಕ ಚಿತ್ರದ ಪ್ರಚಾರಕ್ಕೆ ಹೆಚ್ಚು ಒತ್ತು ಕೊಡಲಾಗಿದೆ. ಮುಂದಿನವಾರ ಚಿತ್ರ ಬಿಡುಗಡೆಯಾಗುತ್ತಿರುವ ಹಿನ್ನೆಲೆಯಲ್ಲಿ ಭರ್ಜರಿ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.
ಮುಖ್ಯವಾಗಿ ಚಿತ್ರಮಂದಿರಗಳ ಮುಂದೆ ನಿಲ್ಲುವ ಕಟೌಟ್ ಗಳು ದಾಖಲೆ ನಿರ್ಮಿಸಲಿವೆ. ಅಪ್ಪು ಅವರು ಭೋಜನಪ್ರಿಯರು. ಹಾಗಾಗಿ ಹೊಟೇಲ್ ಗಳಲ್ಲಿ ಈಗಾಗಲೇ ಅಪ್ಪು ಹಬ್ಬ ಆರಂಭವಾಗಿದೆ.
ಕಣ್ಣುಗಳ ಶ್ರೇಷ್ಠ ದಾನ ಮಾಡಿದ ಅಪ್ಪು ಸ್ಮರಣೆಯಲ್ಲಿ ಅದರ ನೋಂದಾಣಿಗೆ ವಿಶೇಷ ವ್ಯವಸ್ಥೆ ಮಾಡಲಾಗುತ್ತಿದೆ.
ಕಮಲ್ ಹಾಸನ್ ಸೇರಿದಂತೆ ದಕ್ಷಿಣ ಭಾರತದ ಹೆಸರಾಂತ ತಾರೆಯರು ಪುನೀತ ಪರ್ವದಲ್ಲಿ ಪಾಲ್ಗೊಳ್ಳುವುದು ವಿಶೇಷವಾಗಿದೆ.