ರೇಟಿಂಗ್ : 3.5/5
ನಿರ್ಮಾಣ : ಪರಮೇಶ್
ನಿರ್ದೇಶನ : ಎಸ್.ದತ್ತಾತ್ರೇಯ
ಪ್ರತಿ ಕ್ಷಣವೂ ನಯನ ಮನೋಹರ
ಅಪರೂಪದ ಕೌಟುಂಬಿಕ ವಾತಾವರಣದಲ್ಲಿ ಇಬ್ಬರ ನಡುವೆ ಪ್ರೇಮ ಅಥವಾ ಮೋಹ ಅರಳುತ್ತದೆ. ಮದುವೆಯ ಭರವಸೆಯಲ್ಲಿ ಇಬ್ಬರೂ ಪ್ರೇಮಾಲಾಪದಲ್ಲಿ ತೊಡಗುವ ‘ಉತ್ಸವ’ಕ್ಕೆ ಅಲ್ಲೊಬ್ಬ ವಿಲನ್ ಅಡ್ಡಿಯಾಗುತ್ತಾನೆ..
ಅದೇ ರೀತಿ ಮದುವೆ ನಂತರವೂ ಮತ್ತೊಬ್ಬ ಪ್ರೇಮಿ ಎದುರಾಗುತ್ತಾನೆ. ಇದು ಮನಸ್ಸು ಮತ್ತು ವಾಸ್ತವದ ನಡುವೆ ಎದುರಾಗುವ ಸಂಘರ್ಷ. ಆದರೆ ಹಾಗೆಂದು ಅನಿಸುವುದೇ ಇಲ್ಲ. ಏಕೆಂದರೆ ಪ್ರತಿ ದೃಶ್ಯವೂ ಕಣ್ಣಿಗೆ ಹಬ್ಬ..!
ಗೌತಮ ಸುಂದರ ಮತ್ತು ಮನೋಹರ.. ಅವನ ಅತ್ತೆಯ ಮಗಳು ಅಮೃತಾ ಸುಂದರಿ ಮತ್ತು ನಯನ ಮನೋಹರಿ.. ಇಬ್ಬರಿಗೂ ಮದುವೆ ಗೊತ್ತಾದ ಮೇಲೆ ಹುಡುಕಾಡುವುದು ಮೋಹಕ ನೆಲೆಗೆ..
ಇಬ್ಬರ ಒಡನಾಟ ಮೋಜಿನಾಟವಾಗುತ್ತದೆ. ಅದಕ್ಕೆ ಕುಟುಂಬ ಮತ್ತು ಸ್ನೇಹವಲಯದ ಉತ್ತೇಜನವೂ ಸಿಗುತ್ತದೆ. ಆದರೆ ಸುಂದರಿಯ ಮೇಲೆ ಮತ್ತೊಬ್ಬನ ಕಣ್ಣು. ಆತ ನೀಡುವ ಕಿರುಕುಳದ ಜೊತೆಗೆ ಕ್ಲೈಮ್ಯಾಕ್ಸ್ ನಲ್ಲಿ ಮತ್ತೊಂದು ಪ್ರೇಮಕಥೆ ಬಿಚ್ಚಿಕೊಳ್ಳುತ್ತದೆ..
ಕೌಟುಂಬಿಕ ಪ್ರೀತಿ ಮತ್ತು ಪ್ರಣಯ ಸನ್ನಿವೇಶಗಳಲ್ಲಿ ಪ್ರತಿ ಪ್ರೇಮ್ ಬಣ್ಣಗಳಿಂದ ಅಲಂಕೃತ ಮತ್ತು ನೋಡಲು ಚೆಂದ. ಜೊತೆಗೆ ಅವಳು ಮೋಹಕ ಬೆಡಗಿ. ಪ್ರತಿ ಉಡುಗೆಯೂ ಆಕರ್ಷಕ. ಅದರ ಜೊತೆಗೆ ಕಣ್ತುಂಬುವ ಅಪೂರ್ವ ದೃಶ್ಯಗಳು. ಅದಕ್ಕೆ ಪೂರಕವಾಗಿ ಎದೆ ಮೀಟುವ ಹಿನ್ನೆಲೆ ಸಂಗೀತ..
ಪ್ರಣಯಂ ಚೆಂದವೆನಿಸುವುದು ಆಗಲೇ..!
ಛಾಯಾಗ್ರಾಹಕ ನಾಗೇಶ್ ಆಚಾರ್ಯ ಮತ್ತು ಸಂಗೀತ ನಿರ್ದೇಶಕ ಮನೋಮೂರ್ತಿ ತಮ್ಮ ಅನುಪಮ ಆಟಗಳಿಂದ ಪ್ರೇಕ್ಷಕನಿಗೆ ಕಚಗುಳಿ ಇಡುತ್ತಾರೆ. ಹಾಗಾಗಿ ಕಾಲ ಸರಿಯುವುದು ತಿಳಿಯುವುದೇ ಇಲ್ಲ.
ರಾಜವರ್ಧನ್ ಅಮಲುಗಣ್ಣು ಹಾಗೂ ಕೆಚ್ಚೆದೆಯ ಸಾಹಸಗಳಿಂದ ಗಮನ ಸೆಳೆದರೆ; ನೈನಾ ಗಂಗೂಲಿಯ ಮೋಹಕ ನಿಲುವೇ ಆಕರ್ಷಣೆ. ಉಳಿದ ಪಾತ್ರಗಳು ಪೂರಕ ಮತ್ತು ಪ್ರೇರಕ.
ಹಾಸ್ಯ ಪಾತ್ರಧಾರಿ ಗೋವಿಂದೇಗೌಡ, ವಿಲನ್ ಆಗಿರುವ ರಾಘವ ನಾಯಕ್ ಹಾಗೂ ಕೊನೆಯಲ್ಲಿ ಬರುವ ಅಚ್ಚರಿಯ ಪಾತ್ರ ಪವನ್ ಸೂರ್ಯ ಗಮನ ಸೆಳೆಯುತ್ತಾರೆ.
ಹಾಡುಗಳ ಜೊತೆಗೆ ದೃಶ್ಯಗಳನ್ನು ಎಂಜಾಯ್ ಮಾಡುವ ಅವಕಾಶದಿಂದ ಇದು ಸಂಪೂರ್ಣ ಮನರಂಜನಾತ್ಮಕ ಚಿತ್ರ.