ರಾಬಿನ್ ಹುಡ್ ಕಥೆಯ ಥ್ರಿಲ್ಲರ್ ಯುವ ಸರ್ಕಾರ್ ಚಿತ್ರದ ಟೀಸರ್

* ಶಿವಣ್ಣ ಮೆಚ್ಚಿದ ಟೀಸರ್ *
ರಾಬಿನ್ ಹುಡ್ ಮಾದರಿಯ ಕಥೆಯೊಂದು ಸದ್ದಿಲ್ಲದೆ ರೂಪುಗೊಂಡು ಬಿಡುಗಡೆಯ ಹಂತಕ್ಕೆ ಬಂದಿದ್ದು, ಚಿತ್ರದ ಟೀಸರ್ ಈಚೆಗೆ ಬಿಡುಗಡೆ ಕಂಡಿದೆ.
ಅದೇ ಯುವ ಸರ್ಕಾರ್..!
ದಿವಂಗತ ಪಾರ್ವತಮ್ಮ ರಾಜ್ ಕುಮಾರ್ ಅವರ ತಂಗಿಯ ಪುತ್ರ ಸಂತೋಷ್ ಕುಮಾರ್ ಈ ಚಿತ್ರದ ನಿರ್ದೇಶಕ. ಹಿಂದೆ ಅವರು ಬಿಂದಾಸ್ ಗೂಗ್ಲಿ, ಕ್ಯಾಂಪಸ್ ಕ್ರಾಂತಿ ಸೇರಿದಂತೆ ಮೂರು ಚಿತ್ರಗಳನ್ನು ನಿರ್ದೇಶಿಸಿದ್ದರು.

ಇದು ಸಂತೋಷ್ ಕುಮಾರ್ ಅವರ ನಾಲ್ಕನೇ ಚಿತ್ರ. ಯುವ ನಟ ವೀರೇನ್ ಕೇಶವ್ ಚಿತ್ರದ ಮುಖ್ಯ ಪಾತ್ರದಲ್ಲಿದ್ದು, ಜಾಹ್ನವಿ, ಶೃತಿ ದೇಶಪಾಂಡೆ ಹಾಗೂ ಅಲ್ಫಿಯಾ ಅವರ ಎದುರು ನಟಿಸಿದ್ದಾರೆ.
ಚಿತ್ರದ ಟೀಸರ್ ಬಗ್ಗೆ ಹ್ಯಾಟ್ರಿಕ್ ಹೀರೋ ಡಾ.ಶಿವರಾಜ್ ಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದ್ದು, ತಮ್ಮ ಚಿಕ್ಕಮ್ಮನ ಮಗ ಸಂತೋಷ್ ಯುವ ಮನಸ್ಸುಗಳ ನಾಡಿ ಮಿಡಿತ ಬಲ್ಲವರು. ಅವರಿಂದ ಉತ್ತಮ ಚಿತ್ರ ಹೊರಬರಲಿ ಎಂಬ ಆಶಯ ವ್ಯಕ್ತಪಡಿಸಿದ್ದರು.

ಪ್ರೇಮಿಗಳ ದಿನದ ಅಂಗವಾಗಿ ಈ ಚಿತ್ರದ ರೊಮ್ಯಾಂಟಿಕ್ ಹಾಡನ್ನು ಹಿರಿಯ ನಿರ್ಮಾಪಕ ಎಸ್.ಎ.ಚಿನ್ನೇಗೌಡ ಹಾಗೂ ಎಸ್.ಎ.ಗೋವಿಂದರಾಜ್ ಬಿಡುಗಡೆ ಮಾಡಿ ಶುಭ ಹಾರೈಸಿದರು.
ಇದೇ ಸಂದರ್ಭದಲ್ಲಿ ಚಿತ್ರದ ಟೀಸರ್ ನ್ನು ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಭಾ.ಮ.ಹರೀಶ್, ಎ.ಗಣೇಶ್ ಹಾಗೂ ಮಾಧವಿ ಸೇರಿ ಬಿಡುಗಡೆ ಮಾಡಿದರು.

ಈ ಚಿತ್ರವನ್ನು ಕನ್ನಡ, ಹಿಂದಿ ಹಾಗೂ ತಮಿಳು ಭಾಷೆಗಳಲ್ಲಿ ನೇರವಾಗಿ ಚಿತ್ರೀಕರಿಸಲಾಗಿದೆ. ಹಾಗಾಗಿ ಚಿತ್ರದಲ್ಲಿ ಮೂರು ಭಾಷೆಯ ಕಲಾವಿದರೂ ನಟಿಸಿದ್ದಾರೆ. ನಟ ಧರ್ಮ ಕೀರ್ತಿರಾಜ್ ಹಾಗೂ ತಂದೆ ಕೀರ್ತಿರಾಜ್ ಕೂಡ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ.
ತಾಯಿ ಮಗನ ಮಧ್ಯೆ ನಡೆಯುವ ಎಮೋಷನಲ್ ಕಥೆಯಿದು ಎಂದರು ನಿರ್ದೇಶಕ ಸಂತೋಷ್ ಕುಮಾರ್. ತಮಿಳಲ್ಲಿ ಯುವನ್ ರಾಬಿನ್ ಹುಡ್, ಹಿಂದಿಯಲ್ಲಿ ಅದೇ ಯುವ ಸರ್ಕಾರ್ ಎಂಬ ಹೆಸರಿಡಲಾಗಿದೆ.

ತಾಯಿ ತನ್ನ ಮಗನನ್ನು ಗಾಂಧಿಯ ಅದರ್ಶದಲ್ಲಿ ಬೆಳೆಸುತ್ತಾಳೆ, ಆದರೆ ಆ ಮಗ ಯಾಕೆ ರಾಬಿನ್ ಹುಡ್ ರೀತಿ ಆಗ್ತಾನೆ ಅನ್ನೋದೇ ಈ ಚಿತ್ರದ ಕಥೆ. ಆ ರಾಬಿನ್ ಹುಡ್ ಬಡವರಿಗೆ ಸಹಾಯ ಮಾಡ್ತಿದ್ದ, ಆತನನ್ನು ಒಬ್ಬ ದರೋಡೆಕೋರನ ರೀತಿ ಬಿಂಬಿಸಲಾಗಿತ್ತು. ಆದರೆ ಇಲ್ಲಿ ಜನಸ್ನೇಹಿಯಾಗಿ ತೋರಿಸಲಾಗಿದೆ. ನೇರವಾಗಿ ಮೂರು ಭಾಷೆಯಲ್ಲಿ ಚಿತ್ರೀಕರಣ ನಡೆಸಲಾಗಿದೆ ಎಂದರು ನಿರ್ಮಾಪಕ ಹಾಗೂ ನಿರ್ದೇಶಕ ಸಂತೋಷ್ ಕುಮಾರ್.
ಸದ್ಯ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೆಯುತ್ತಿದ್ದು, ಚಿತ್ರದಲ್ಲಿ 5 ಹಾಡುಗಳಿವೆ. ನಾಲ್ಕು ಸಾಹಸ ದೃಶ್ಯಗಳಿವೆ. ಇದೊಂದು ಜನರಿಗೆ ಸ್ಫೂರ್ತಿ ನೀಡುವ ಚಿತ್ರವಾಗಿದ್ದು, ಚೆನ್ನೈ, ಚಿಕ್ಕಮಗಳೂರು, ಮೇಲುಕೋಟೆಯ ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ ಎಂದರು.

ವೀರೇನ್ ಕೇಶವ್ ಅವರ ತಂದೆ, ನಿರ್ಮಾಪಕ ಡಾ.ಶಿವಪ್ಪ ಮಾತನಾಡಿ, ಸಂತೋಷ್ ಅವರಿಗೆ ಮಾರ್ಗದರ್ಶಕನಾಗಿ ಅವರ ಜತೆ ಇದ್ದೇನೆ. ಸಿನಿಮಾ ಬಗ್ಗೆ ಅವರಿಗಿರುವ ಕಾಳಜಿ ದೊಡ್ಡದು ಎಂದರು.
ವೀರೆನ್ ಕೇಶವ್, ಧರ್ಮ ಕೀರ್ತಿರಾಜ್, ಜಾಹ್ನವಿ ಹಾಗೂ ಇತರರು ಪಾತ್ರಗಳ ಕುರಿತಂತೆ ಮಾತನಾಡಿದರು.

ಚಿತ್ರವನ್ನು ಮೇ ಅಥವಾ ಜೂನ್ ನಲ್ಲಿ ಬಿಡುಗಡೆ ಮಾಡುವ ಆಶಯವಿದೆ ಎಂಬ ವಿವರಗಳೂ ಬಂದವು.
ಅಂದ ಹಾಗೆ ಹಿರಿಯ ಛಾಯಾಗ್ರಾಹಕ ಮ್ಯಾಥ್ಯು ರಾಜನ್ ಅವರ ಕ್ರಿಯಾಶೀಲ ಕಾಯಕ ಈ ಚಿತ್ರಕ್ಕಿದೆ..







































