Snehapriya.com

March 7, 2026

ಮಾಮೂಲಿ ಜ್ವರದಲ್ಲಿ ಕೋವಿಡ್ ಸುಳಿ

ತಂಗಾಳಿ ಇಡೀ ಮೈಯನ್ನು ಆವರಿಸಿದ ಆ ಕ್ಷಣಕ್ಕೆ ಮೈ ಮನದ ತುಂಬೆಲ್ಲಾ ಏನೋ ನೋವಿನ ಯಾತನೆ.. ಮಳೆಯಲ್ಲಿ ನೆನೆದು ಅನುಭವಿಸಿದ ಆ ಸ್ಥಿತಿಯಲ್ಲಿ ಏನೋ ನಡುಕ.. ಯಾರೋ ಹೇಳಿದರು ಗಂಟಲಿಗೆ ಕೊಂಚ ವಿಕ್ಸ್ ತಿಕ್ಕಿ..
ಅದೇ ಜೀವನದ ಮಹಾತಪ್ಪು ನಿರ್ಧಾರ ಎಂಬಂತೆ ಕೆಮ್ಮುವುದು ಜೊತೆಯಾಯಿತು.. ಅಲರ್ಜಿಕ್ ಕೆಮ್ಮು ಅದು ಎಂಬುದು ನನಗೆ ಗೊತ್ತು.. ಆದರೆ ಸುತ್ತಲಿನ ಸಮಾಜ ಕೇಳಬೇಕಲ್ಲ..‌ ಏಕೋ ವಾತಾವರಣ ಸರಿ ಇಲ್ಲ ಒಮ್ಮೆ ಪರೀಕ್ಷೆ ಮಾಡಿಸಿ ಎಂಬ ಸಲಹೆ ಬಂತು.. ಸರಿ ಎಲ್ಲಿ ಹೋದರೂ ಆಸ್ಪತ್ರೆಗಳ ಮುಂದೆ ಜನವೋ ಜನ. ಇದು ಜ್ವರವೋ ಕೆಮ್ಮೋ ಏನೋ ಎಂಬುದನ್ನು ಪರೀಕ್ಷೆ ಮಾಡಲು ಯಾರೂ ಸಿಗಲಿಲ್ಲ.. ಫಿವರ್ ಕೇಂದ್ರಗಳಿಗೆ ಹೋಗಲು ಸಲಹೆ ಬಂತು.. ಆದರೆ ನೆಗಡಿ ಉಸಿರಾಟದ ತೊಂದರೆ ಯಾವುದೂ ಇರಲಿಲ್ಲ.. ಹಾಗಾಗಿ ಅದು ಅನಗತ್ಯ ರಿಸ್ಕ್ ಎನಿಸಿತು.

ಅಷ್ಟರಲ್ಲಿ ಕುಟುಂಬ ಸ್ನೇಹಿತ ನರ್ಸ್ ಒಬ್ಬರು ಕೋವಿಡ್ ಆಸ್ಪತ್ರೆ ಯಲ್ಲಿ ಕೆಲಸ ನಿರ್ವಹಿಸಿದ್ದರು.. ಈಗ ಯಾವುದೇ ಕೆಮ್ಮು ಇದ್ದರೂ ಅದು ಪಾಸಿಟಿವ್ ಇರುತ್ತೆ ಎಂಬ ಹೆದರಿಕೆಯ ಬಾಣ ಬಿಟ್ಟರು. ಆದರೆ ನಾನು ಹೆದರಲಿಲ್ಲ.. ಪರಿಚಿತ ವೈದ್ಯರೊಬ್ಬರಿಗೆ ಕರೆ ಮಾಡಿದೆ. ಅವರು ಬಹಳ ದೂರದಲ್ಲಿದ್ದರು.. ವಿಕ್ಸ್ ಆಗಲ್ಲ ಅಂದ ಮೇಲೆ ಏಕೆ ತಿಕ್ಕಿಕೊಂಡಿರಿ.. ಏನಾದರಾಗಲಿ ಈ ಆಂಟಿ ಬಯೋಟಿಕ್ಸ್ ಐದು ದಿನ ತೆಗೆದುಕೊಳ್ಳಿ.. ಅಕಸ್ಮಾತ್ ಏನಿದ್ದರೂ ಅದಕ್ಕೆ ಔಷಧವಾಗುತ್ತದೆ ಎಂದರು. ಕೊನೆಗೆ ಫ್ಯಾಮಿಲಿ ಫ್ರೆಂಡ್ ಆಗಿರುವ ನರ್ಸ್ ಮಾತ್ರೆ ಸಿರಪ್ ಗಳನ್ನು ಒದಗಿಸಿದರು. ಐದು ದಿನ ಅದನ್ನು ಪ್ರಯೋಗ ಮಾಡುವಷ್ಟರಲ್ಲಿ ಆಂಟಿ ಬಯೋಟಿಕ್ಸ್ ಹಣ್ಣುಗಾಯಿ ನೀರುಗಾಯಿ ಮಾಡಿತು.. ಸಿರಪ್ ನಿಂದ ಕೆಮ್ಮು ಹೆಚ್ಚಾಯಿತು.. ಅದನ್ನೆಲ್ಲಾ ಎತ್ತಿ ಮೂಲೆಗೆಸೆದು ಎರಡು ದಿನ ಕಷಾಯ ದ ಪ್ರಯೋಗ ಮಾಡಿದೆ. ಕೆಮ್ಮು ತಹಬದಿಗೆ ಬಂದರೂ ಊಟ ಸೇರದಾಯ್ತು. ಅತಿಯಾದ ಮೆಣಸು, ಶುಂಠಿ, ಲಿಂಬೆ ದೇಹ ಸೇರಿತ್ತು. ನನ್ನ ಸೇವೆಯನ್ನು ಮಾಡುತ್ತಿದ್ದ ನನ್ನಾಕೆ ಇದು ಕೊವಿಡ್ ಎಂದೇ ನಂಬಿ ಜೋರಾಗಿ ಅಳತೊಡಗಿದಳು.. ನಾನು ಧೈರ್ಯ ಕಳೆದುಕೊಳ್ಳಲೇ ಇಲ್ಲ.

ನೋಡು ಮುಖ್ಯವಾಗಿ ನೆಗಡಿ ಇರುತ್ತದೆ ಗಂಟಲು ನೋವು ಬರುತ್ತದೆ.. ಕೊನೆಗೆ ಉಸಿರಾಟದ ತೊಂದರೆ ಬರುತ್ತದೆ. ಆಗ ಮಾತ್ರ ಅದು ಕೊವಿಡ್ ಇರಬಹುದು ಎಂದು ಸಮಾಧಾನ ಮಾಡಿದೆ. ಕಷಾಯವನ್ನು ಬಿಟ್ಟ ಬಳಿಕ ಕೊಂಚ ಊಟ ಸೇರತೊಡಗಿತು.. ಎರಡು ದಿನಗಳಲ್ಲಿ ನಾನು ಮಾಮೂಲಿನಂತಾದೆ. ಈಗ ಎಂದಿನಂತೆ ಓಡಾಡುತ್ತಿರುವೆ.. ಆದರೆ ಅನುಭವಿಸಿದ ಯಮ ಯಾತನೆ ಮನಸ್ಸಿನಿಂದ ಹೋಗಿಲ್ಲ.. ಇಷ್ಟೆಲ್ಲಾ ಆದ ಮೇಲೆ ಡಾ ಬಿ.ಎಂ.ಹೆಗಡೆ ಅವರ ಒಂದು ವಿಡಿಯೋ ನೋಡಿದೆ. ಅದರಲ್ಲಿ ಆಂಟಿ ಬಯೋಟಿಕ್ಸ್ ನುಂಗಿದರೆ ಆಗುವ ದುಷ್ಪರಿಣಾಮಗಳ ಬಗ್ಗೆ ಹೇಳುತ್ತಿದ್ದರು.. ಈ ವಿಡಿಯೋ ಮೊದಲೇ ನೋಡಿದ್ದರೆ ನಾನು ಆಂಟಿ ಬಯೋಟಿಕ್ಸ್ ನಿಂದ ದೂರವಿದ್ದು ಆರೋಗ್ಯ ಕಾಪಾಡಿಕೊಳ್ಳಬಹುದಿತ್ತು ಎನಿಸಿತು.

ಇನ್ನೊಂದು ಭಯ ಏನೆಂದರೆ ಪರಿಸ್ಥಿತಿ ಬಿಗಡಾಯಿಸಿದರೆ ಆಸ್ಪತ್ರೆಗೆ ಖರ್ಚು ಮಾಡಲು ಹಣ ಇರಲಿಲ್ಲ.. ಹೆಚ್ಚು ಕಡಿಮೆ ನಿರುದ್ಯೋಗದ ಪರಿಸ್ಥಿತಿಯಲ್ಲಿ ಇದೇನು ಶಿವ ಈ ಪರೀಕ್ಷೆ ಎಂದು ದೇವರ ಮೊರೆ ಹೋದೆ.. ನನ್ನಾಕೆಯಂತೂ ಭಯದಿಂದ ತತ್ತರಿಸಿ ಹೋಗಿದ್ದಳು.. ತಾಯಿಯಂತೆ ಸೇವೆ ಮಾಡಿದಳು. ಅವಳ ಆರೈಕೆ ಒಂದು ಮಾಮೂಲಿ ಜ್ವರ ಬಂದು ಹೊರಟು ಹೋಯ್ತು.. ಅಷ್ಟೇ..
ಈಗ ನಾನು ಸಂಪೂರ್ಣ ಆರೋಗ್ಯದಿಂದ ಇರುವೆ..

ರಮೇಶ್ ಶಿವಾಜಿ – ಎಲ್ಲ ಭಾಷೆಗೆ ಮಾರಾಟ

ಸಹಜ ನಟ ರಮೇಶ್ ಅರವಿಂದ್ ಮುಖ್ಯ ಪಾತ್ರದಲ್ಲಿರುವ ಶಿವಾಜಿ ಸುರತ್ಕಲ್ ಚಿತ್ರ ಕಳೆದ ಫೆಬ್ರವರಿ 21 ರಂದು ಬಿಡುಗಡೆಯಾಗಿದ್ದು ಚಿತ್ರಮಂದಿರಗಳಲ್ಲಿ ಉತ್ತಮ ಪ್ರತಿಕ್ರಿಯೆ ಪಡೆದಿತ್ತು. ಚಿತ್ರಮಂದಿರಗಳಲ್ಲಿ ತುಂಬಿದ ಗೃಹ ಪ್ರದರ್ಶನ ಕಂಡಿತ್ತು.
ಬಿಡುಗಡೆಯಾಗಿ ಮೂರು ವಾರದ ವರೆಗೂ ಒಳ್ಳೆ ಪ್ರತಿಕ್ರಿಯೆ ಸಿಕ್ಕಿತ್ತು. ಆದರೆ ಲಾಕ್ ಡೌನ್ ಪರಿಣಾಮ ಇದಕ್ಕೂ ತಟ್ಟಿತು. ಚಿತ್ರಮಂದಿರಗಳಲ್ಲಿ ಪ್ರದರ್ಶನ ನಿಲ್ಲಿಸಲಾಯಿತು.

ಈ ಚಿತ್ರಕ್ಕೆ ರಾಹುಲ್ ದ್ರಾವಿಡ್ ರವರು ಮೊದಲ ಪ್ರೇಕ್ಷಕರಾಗಿದ್ದು ವಿಶೇಷ. ಚಿತ್ರದ ಬಗ್ಗೆ ಇಷ್ಟೆಲ್ಲಾ ಹೇಳಲು ಕಾರಣವಿದೆ.

ಇದೆ ತಿಂಗಳ ಅಂದರೆ ಆಗಸ್ಟ್ 7 ರಂದು ಜಿ-5 ಎಂಬ ಓಟಿಟಿ ಅವಕಾಶದಲ್ಲಿ ಚಿತ್ರವು ಬಿಡುಗಡೆಯಾಗುತ್ತಿದೆ. ಕನ್ನಡಿಗರಲ್ಲದೆ ಕನ್ನಡೇತರರು ಕೂಡ ಈ ಚಿತ್ರವನ್ನು ನೋಡಬಹುದು.

ಇದು ಒಂದು ಪತ್ತೆದಾರಿ ಚಿತ್ರವಾಗಿದ್ದು ಚಿತ್ರಮಂದಿರದಲ್ಲಿ ಸಿಕ್ಕ ಪ್ರತಿಕ್ರಿಯೆ ಈ ಅವಕಾಶ ಬಂದಿದೆ. ಅಲ್ಲದೆ ಈ ಚಿತ್ರದ ಹಿಂದಿ ರಿಮೇಕ್ ರೈಟ್ಸ್ ಹಾಗೂ ಉತ್ತರ ಭಾರತದ ಎಲ್ಲ ಭಾಷೆಯ ಡಬ್ಬಿಂಗ್ ರೈಟ್ಸ್ ಅನ್ನು ಬಿ4ಯು ಮೂವೀಸ್ ಪಡೆದುಕೊಂಡಿದೆ ಎನ್ನಲಾಗಿದೆ. ದಕ್ಷಿಣ ಭಾರತದ ಭಾಷೆಗಳಲ್ಲೂ ಕೂಡ ಡಬ್ಬಿಂಗ್ ಆಗುವ ಬಗ್ಗೆ ಇನ್ನು ಮಾತುಕತೆ ನಡೆಯುತ್ತಿದ್ದು ಇದರ ಬಗ್ಗೆ ಮಾಹಿತಿಯನ್ನು ಚಿತ್ರದ ನಿರ್ದೇಶಕರು ನೀಡಬೇಕಿದೆ.

ದುಡಿದಿದ್ದು ಏನು ಮಾಡಿದೆ..??

ಹೀಗೂ ಒಂದು ಪ್ರಶ್ನೆ ಎದುರಾಗುತ್ತದೆ ಎಂದು ನಾನು ಭಾವಿಸಿರಲಿಲ್ಲ.. ಆದರೆ ಇರುವ ಕೆಲಸವೂ ಹೋಗಿ ಬರಿಗೈ ಆಗುತ್ತೇನೆ ಎಂಬುದನ್ನು ಸದಾ ಬೆನ್ನಿಗೆ ಕಟ್ಟಿಕೊಂಡಿರುತ್ತಿದ್ದೆ.

ಈ ಪತ್ರಿಕೋದ್ಯಮ ನಂಬಿಕೊಂಡ ಹೆಚ್ಚಿನ ಜನರಿಗೆ ಇದೇ ಆಗುತ್ತದೆ. ಅದರಲ್ಲೂ ಆದರ್ಶವೆಂಬ ಭ್ರಮೆಯನ್ನು ನಂಬಿಕೊಂಡರೆ ಮುಗಿದೇ ಹೋಯಿತು..ಎಷ್ಟೇ ಸಮರ್ಥನಿದ್ದರೂ ಎಲ್ಲಿಯೂ ಸಲ್ಲದೆ ಹೋಗುತ್ತಾನೆ. ಏಕೆಂದರೆ ಒಂದಷ್ಟು ಅಹಂ ಮೈಗೂಡಿರುತ್ತದೆ.. ಜೊತೆ ಪತ್ರಕರ್ತ ಎಂಬ ಕಿರೀಟ ಬೇರೆ ತಲೆಯ ಮೇಲೆಯೇ ಗಾಂಚಲಿ ಮಾಡಿಕೊಂಡಿರುತ್ತದೆ.

ಇದರ ಅರಿವು ಆಗುವಷ್ಟರಲ್ಲಿ ಕಾಲ ಮಿಂಚಿರುತ್ತದೆ.. ಒಂದಕ್ಕೆ ಅಂಟಿಕೊಳ್ಳುವಷ್ಟರಲ್ಲಿ ಇನ್ನೊಂದು ಕಳೆದು ಹೋಗಿರುತ್ತದೆ.. ಆದ್ದರಿಂದಲೇ ನಾನು ಸದಾ ಕಾಲವೂ ಎಲ್ಲದರಿಂದ ವಂಚಿತ ಎಂದೇ ಭಾವಿಸುತ್ತಿದ್ದೆ. This too will pass ಎಂದು ಸ್ಟೇಟಸ್ ನಲ್ಲಿ ಬರೆದುಕೊಳ್ಳುತ್ತಿದೆ. ಯಾವುದೇ ಇರಲಿ ಅರಿವಿಗೆ ಬರುವಷ್ಟರಲ್ಲಿ ಕಳೆದು ಹೋಗುತ್ತದೆ ಎಂದಾಗ ಬದುಕು ಏನಾಗುತ್ತದೆ.. ಅದು ಈ ಬೆಂಗಳೂರೆಂಬ ಬೆಂಗಳೂರಿನಲ್ಲಿ.. ದುಡಿಯುವ ಅರ್ಧಕ್ಕಿಂತಲೂ ಹೆಚ್ಚು ಬಾಡಿಗೆ ಮನೆಗೆ ಇಡಬೇಕು.. ಜೀವನ ವೆಚ್ಚವೂ ಅಧಿಕ.. ಎಷ್ಟೇ ಸರಳತೆಯ ವೇಷ ಹಾಕಿದರೂ ಬದುಕು ಕಟ್ಟಿಕೊಳ್ಳುವಲ್ಲಿ ಹಣದ ಮಹತ್ವ ಇದ್ದೇ ಇರುತ್ತದೆ.. ಸರಿ ಸಾಲ EMI ಎಲ್ಲವೂ ಇದ್ದೇ ಇರುತ್ತದೆ. ಅದೂ ಸುಮ್ಮನೆ ಬದುಕುವುದಕ್ಕಾಗಿ ಅವುಗಳ ಜೊತೆಗೆ ಹೊಡೆದಾಡುತ್ತಲೇ ಕಾಲ ಕಳೆಯುವಾಗ ಧುತ್ತನೆ ಮತ್ತೊಂದು ಆಘಾತದಂತೆ ಕೆಲಸ ಹೋಗಿರುತ್ತದೆ.. ಆಗ ಆಕಾಶವೇನು ಕಳಚಿ ಬೀಳುವುದಿಲ್ಲ.. ಮತ್ತೆ ಕೆಲಸಕ್ಕಾಗಿ ಹುಡುಕಾಟ ನಡೆಯುತ್ತದೆ.. ಆ ದಾರಿಯಲ್ಲಿ ಮತ್ತೊಂದಷ್ಟು ಸಾಲ ಅದೂ ಇದು.. ಇಂತಹ ಬದುಕು ಬಾಡಿಗೆ ಮನೆಯನ್ನೇ ಗಟ್ಟಿ ಮಾಡಿರುತ್ತದೆ. ಸ್ವಂತ ಮನೆ ಇರಲಿ ಒಂದು ಲೀಸ್ ಮನೆ ಕನಸು ಕಾಣುವುದಕ್ಕೂ ಅಸಾಧ್ಯ. ಇದು ಬೆಂಗಳೂರು.. ಹಾಗಾಗಿ ಬರೀ ಕನಸೆಂಬ ಕುದುರೆ ಏರಿ ಹೋರಾಡುವ ಜೀವನ.. ಇನ್ನು ದುಡಿದಿದ್ದು ಎಲ್ಲಿರುತ್ತದೆ.

ಈಚೆಗೆ ನಾನು ಕೆಲಸ ಕಳೆದುಕೊಂಡೆ ಎಂಬ ವಿಷಯ ತಿಳಿದಾಗ ಸಂಬಂಧಿಕರೊಬ್ಬರು ಕೇಳಿದರು.. ಇಲ್ಲಿಯವರೆಗೆ ದುಡಿದಿದ್ದನ್ನು ಏನ್ ಮಾಡ್ದಪ್ಪ.
ಅದು ಅವರ ತಪ್ಪಲ್ಲ ಮುಗ್ಧತೆ.. ನನ್ನದು ಅಸಹಾಯಕತೆ.. ಸಮಗ್ರವಾಗಿ ಬದುಕುವುದು ನಾಲ್ಕು ಹೆಸರು ಮಾಡುವುದು ಎಂಬುದೆಲ್ಲಾ ಭ್ರಮೆ ಎಂದು ಇನ್ನೂ ಅರ್ಥವಾಗಿಲ್ಲ ಎಂದರೆ ನಾವೆಷ್ಟು ಬುದ್ಧಿವಂತರು ಎಂಬುದನ್ನು ಯಾರಾದರೂ ಊಹಿಸಬಹುದು…

-ಸ್ನೇಹಪ್ರಿಯ

ಪ್ರತಿಷ್ಠೆಯ ಬದುಕು ಮನೆಗಳು ಖಾಲಿ ಖಾಲಿ

ಉದ್ಯಾನನಗರಿ, ಹವಾ ನಿಯಂತ್ರಿತ ನಗರ ಎಂದೆಲ್ಲಾ ಕರೆಸಿಕೊಂಡು ಪ್ರಶಾಂತವಾಗಿದ್ದ ಬೆಂಗಳೂರು ಮಧ್ಯಮ ವರ್ಗ ಮತ್ತು ಬಡವರಿಗೆ ಶಾಪವಾಗಿದ್ದು 2003ರ ಆಚೆಗೆ.. ಆಗ ಮುಖ್ಯಮಂತ್ರಿ ಯಾಗಿದ್ದ ಎಸ್. ಎಂ.ಕೃಷ್ಣ ಅವರು ಐಟಿ ಬಿಟಿಗೆ ಕೊಟ್ಟ ಉತ್ತೇಜನ ಮತ್ತು ಅದರ ಉದ್ಯೋಗಿಗಳಿಗೆ ದೊರೆಯುತ್ತಿದ್ದ ಯರ್ರಬಿರ್ರಿ ಸಂಬಳ ಬೆಂಗಳೂರು ದುಬಾರಿ ನಗರವಾಗಿ ರೂಪುಗೊಳ್ಳಲು ಕಾರಣವಾಯ್ತು.. ಪರಭಾಷಿಕರು ಮನೆ ಮಾಲೀಕರು ಕೇಳಿದಷ್ಟು ಹಣ ನೀಡುತ್ತಾ ಒಂದೊಂದು ಏರಿಯಾಗೆ ಈ ಮಟ್ಟದ ಬಾಡಿಗೆ ಎಂದು ನಿಗದಿಯಾಗಿ ಮಾಲೀಕರು ಸಮೃದ್ಧಿ ಪಡೆಯತೊಡಗಿದರು. ಅವರಿಗೆ ಹಣ ಕೈ ಸೇರತೊಡಗಿದಂತೆ ಮಕ್ಕಳಿಗೆ ದುಬಾರಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಕೊಡಿಸುವುದು.. ಮದುವೆ ಮುಂಜಿ ಅದ್ದೂರಿಯಾಗಿ ನಡೆಸುವುದು ಹೆಚ್ಚಾಯಿತು.. ಇತ್ತ ರಿಯಲ್ ಎಸ್ಟೇಟ್ ಚಿಗುರಿಕೊಂಡಿತು.. 9ಲಕ್ಷ ಇದ್ದ ನಿವೇಶನದ ಮೌಲ್ಯ 90 ಲಕ್ಷಕ್ಕೆ ಏರಿತು. ಐಟಿ ಬಿಟಿ ಹೇರಳ ಸಂಬಳದಿಂದ ಐಷಾರಾಮಿ ಬದುಕು ಫ್ಯಾಷನ್ ಆಯಿತು. ಎಲ್ಲರೂ ಎರಡೆರಡು ಕಾರುಗಳನ್ನು ಕೊಳ್ಳುವಷ್ಟು ಸಮರ್ಥರಾದರು. ಆಗ ಶುರುವಾಯಿತು ನಗರದಲ್ಲಿ ಟ್ರಾಫಿಕ್ ಸಮಸ್ಯೆ.

ಇತ್ತ ಬಡವರು ಮತ್ತು ಕೆಳಮಧ್ಯಮ ವರ್ಗದವರ ಬದುಕು ಚಿಂದಿ ಚಿತ್ರಾನ್ನವಾಯಿತು. ದುಡಿದ ಅರ್ಧಕ್ಕಿಂತಲೂ ಹೆಚ್ಚಿನ ಹಣವನ್ನು ಮನೆ ಬಾಡಿಗೆಗೆಂದೇ ಮೀಸಲಿಡಬೇಕಾಯಿತು. ಇತ್ತ ಮಕ್ಕಳನ್ನು ಒಳ್ಳೆ ಕಾನ್ವೆಂಟ್ ನಲ್ಲಿ ಓದಿಸಬೇಕು ಎಂಬ ಹಠ ಬೆಳೆಸಿಕೊಂಡರು. ಗಂಡ ಹೆಂಡತಿ ಇಬ್ಬರೂ ಕೆಲಸ ಮಾಡುವುದು ಮಾಮೂಲಿಯಾಯಿತು. ಇದರಿಂದ ಕೌಟುಂಬಿಕ ಘರ್ಷಣೆ ಕ್ರೈಮ್ ಹೆಚ್ಚಾದವು.

ಇಂತಹ ಕಾಲಘಟ್ಟದಲ್ಲಿ ಮನರಂಜನಾ ಕ್ಷೇತ್ರ ದುಬಾರಿ ಯಾಯಿತು. ಮಲ್ಟಿಪ್ಲೆಕ್ಸ್ ವ್ಯವಸ್ಥೆ ಯಲ್ಲಿ ಐಟಿಬಿಟಿಗಳು ಮನಬಂದಂತೆ ಹಣ ಚೆಲ್ಲತೊಡಗಿದರು. ಇದರಿಂದ ಸಿನಿಮಾ ರಂಗದ ಮಾರುಕಟ್ಟೆ ವಿಸ್ತಾರವಾಯಿತು. ಸ್ಟಾರ್ ನಟರು ಕೋಟಿ ಕೋಟಿ ಸಂಭಾವನೆ ಪಡೆಯತೊಗಿದರು. ಆಗಲೇ ಚಿತ್ರರಂಗದ ಒಳ್ಳೆಯ ಭಾವನೆಗಳು ನಾಶವಾದವು.

ವರನಟ ಡಾ.ರಾಜ್ ಕುಮಾರ್ ಸೇರಿದಂತೆ ಉದಾತ ವ್ಯಕ್ತಿತ್ವದ ಮಹನೀಯರು ಹಾಕಿಕೊಟ್ಟ ಆದರ್ಶದ ಬುನಾದಿ ಕಳಚತೊಡಗಿದವು. ವ್ಯಕ್ತಿಪೂಜೆ ಆರಾಧನೆ ಹೆಚ್ಚಾದವು. ಜೊತೆಗೆ ಸಾಮಾಜಿಕ ನೆಮ್ಮದಿ ತರುವ ಚಿತ್ರಗಳು ಇಲ್ಲವಾದವು.. ಬಿಲ್ಡಪ್ ಗಳೇ ಚಿತ್ರದ ಮುಖ್ಯವೆನಿಸುವ ಹಂತದಲ್ಲಿ ಟಿವಿಗಳು ಚಿಗುರಿಕೊಂಡವು. ಕೆಟ್ಟ ಕೆಟ್ಟ ರಿಯಾಲಿಟಿ ಶೋಗಳು ಜನರ ಮನಸ್ಸನ್ನು ಆವರಿಸಿತೊಡಗಿದವು. ಅತಿ ಸಿಲ್ಲಿ ಎನಿಸುವ ಧಾರಾವಾಹಿಗಳು ಜನರ ಚಿಂತನೆ ಹತ್ತಿಕ್ಕುವ ಹಂತ ತಲುಪಿದವು.
ಇಂತಹ ಸಂದರ್ಭದಲ್ಲಿ ಮೂರು ಘಟನೆಗಳು ಮಧ್ಯಮ ವರ್ಗದ ಬದುಕಿಗೆ ಕೊಳ್ಳಿ ಇಟ್ಟವು. ಅದರಲ್ಲಿ ಮೊದಲನೇಯದು ನೋಟ್ ಬ್ಯಾನ್ ಎರಡನೇಯದು ಜಿಎಸ್ ಟಿ ಈಗ ಮತ್ತೊಂದು ಕೊರೊನಾ ಎಂಬ ಮಹಾಮಾರಿ.

ಲಾಕ್ ಡೌನ್ ಸಂದರ್ಭದಲ್ಲಿ ಕೆಲಸ ಕಾರ್ಯ ಸಂಬಳವಿಲ್ಲದೆ ಯಾರೋ ಕೊಡುವ ಆಹಾರದ ಕಿಟ್ ಪಡೆದು ಹೇಗೋ ಬದುಕು ತಳ್ಳಿದವರು.. ಕೊನೆಗೆ ವೈರಾಣು ಉಪಟಳ ಹೆಚ್ಚಾಗಿ ಬದುಕು ದುರ್ಬರವಾದಾಗ ತಮ್ಮ ತಮ್ಮ ಊರುಗಳಿಗೆ ಗುಳೆ ಹೊರಟಿದ್ದಾರೆ. ಆ ರೀತಿ ಹೋಗುವವರು. ನಮ್ಮಿಂದ ಮನೆ ಬಾಡಿಗೆ ಕಟ್ಟುವುದು ಸಾಧ್ಯವಿಲ್ಲ ಎಂಬುದನ್ನು ಹೆಚ್ಚಿನವರು ಹೇಳುತ್ತಿದ್ದಾರೆ.

ಎಷ್ಟೋ ಸರ್ಕಾರಗಳು ಬಂದವು ಹೋದವು. ಬಡ ಮಧ್ಯಮ ವರ್ಗದ ವಸತಿಗೆಂದು ಯಾರು ತಲೆ ಕೆಡಿಸಿಕೊಳ್ಳಲಿಲ್ಲ.. ವಸತಿ ಖಾತೆಯೂ ಇದೆ ಸಚಿವರೂ ಇರುತ್ತಾರೆ.. ಆದರೂ ಮನೆ ಎಂಬುದು ಗಗನ ಕುಸುಮ. ಎಲ್ಲರಿಗೂ ಅವರವರ ಮಟ್ಟಕ್ಕೆ ಒಂದು ನೆಲೆ ಮಾಡಿಕೊಡುವ ಬಗ್ಗೆ ಯಾರೂ ಚಿಂತಿಸಲಿಲ್ಲ.

ಹೇಗೋ ಸಿದ್ದರಾಮಯ್ಯ ಅವರು ಅನ್ನಭಾಗ್ಯ ಯೋಜನೆ ಜಾರಿಗೊಳಿಸಿದ್ದರಿಂದ ಎಷ್ಟೋ ಬಡವರ ಹಸಿವು ನೀಗುತ್ತಿದೆ. ಅದರಾಚೆ ಏನೂ ಆಗಿಲ್ಲ.

‘ಮನೆ ಖಾಲಿ’ ಇದೆ ಎಂಬ ಬೋರ್ಡ್ ಗಳು ಎಲ್ಲಿ ನೋಡಿದರೂ ಕಾಣುತ್ತವೆ ಈಗ. ಆದರೆ ಬಾಡಿಗೆ ಕಡಿಮೆ ಮಾಡುವುದಿಲ್ಲ. ಈ ವಿಷಯದಲ್ಲಿ ರಾಜಿ ಆಗುವುದಿಲ್ಲ ಎನ್ನುತ್ತಿದ್ದಾರೆ ಮಾಲೀಕರು. ಕನಿಷ್ಟ ಒಂದು ವರ್ಷ ಅಂತಹ ಮನೆಗಳು ಖಾಲಿ ಬಿದ್ದರೆ ಮಾತ್ರ ಬಾಡಿಗೆ ಕಡಿಮೆ ಮಾಡುವ ಮನಸ್ಸು ಬರಬಹುದು.. ಅಂತಹ ಕಾಲವೇ ಬರಲಿ.

-ಸ್ನೇಹಪ್ರಿಯ

ಕಾಲಚಕ್ರದ ಅದ್ದೂರಿ ಹಾಡು

ವಸಿಷ್ಠ ಎನ್ ಸಿಂಹ ಮುಖ್ಯ ಪಾತ್ರದಲ್ಲಿರುವ ರಶ್ಮಿ ಫಿಲಂಸ್ ಮೂಲಕ ರಶ್ಮಿ ಕೆ ನಿರ್ಮಿಸಿರುವ ‘ಕಾಲಚಕ್ರ’ ಚಿತ್ರದ ‘ತರಗೆಲೆ’ ಹಾಡು ವರಮಹಾಲಕ್ಷ್ಮೀ ಹಬ್ಬದಂದು ಸಂಜೆ 6ಗಂಟೆಗೆ ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿದೆ. ಸಂತೋಷ್ ನಾಯಕ್ ರಚಿಸಿರುವ ಈ ಹಾಡನ್ನು ಹೆಸರಾಂತ ಗಾಯಕ ಕೈಲಾಷ್ ಕೇರ್ ಹಾಡಿದ್ದಾರೆ‌. ಸುಪ್ರಸಿದ್ಧ ಸಂಗೀತ ನಿರ್ದೇಶಕ ಗುರುಕಿರಣ್ ಈ ಸಂಗೀತ ನೀಡಿದ್ದಾರೆ.

ಸುಮಂತ್ ಕ್ರಾಂತಿ ರಚನೆ ಹಾಗೂ ನಿರ್ದೇಶನದ ಈ ಚಿತ್ರದ ತೆರೆಗೆ ಬರಲು ಸಿದ್ದವಾಗಿದೆ. ಸೈಕಲಾಜಿಕಲ್ ಕಥಾ ಹಂದರವಿರುವ ಈ ಚಿತ್ರಕ್ಕೆ ಬೆಂಗಳೂರು, ಮಂಗಳೂರಿನಲ್ಲಿ ಚಿತ್ರೀಕರಣ ನಡೆದಿದೆ.

ಲಾಕ್ ಡೌನ್ ಗೂ ಮುನ್ನ ನಡೆದಿದ್ದ ಅದ್ದೂರಿ ಸಮಾರಂಭದಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಚಿತ್ರದ ಟೀಸರ್ ಬಿಡುಗಡೆ ಮಾಡಿ, ಮೆಚ್ಚುಗೆ ಸೂಚಿಸಿದ್ದರು. ಚಿತ್ರದ ಟೀಸರ್ ಗೆ ಮೆಚ್ಚುಗೆ ಸಿಕ್ಕಿದೆ.

ಎಲ್ ಎಂ ಸೂರಿ ಛಾಯಾಗ್ರಹಣ, ಸೌಂದರ್ ರಾಜ್ ಸಂಕಲನ, ಡಿಫರೆಂಟ್ ಡ್ಯಾನಿ‌ ಸಾಹಸ ನಿರ್ದೇಶನ, ಮುರಳಿ ನೃತ್ಯ ನಿರ್ದೇಶನ ಹಾಗೂ ಮೋಹನ್ ಬಿ ಕೆರೆ ಅವರ ಕಲಾ‌ ನಿರ್ದೇಶನವಿರುವ ಈ ಚಿತ್ರಕ್ಕೆ ಬಿ.ಎ.ಮಧು ಸಂಭಾಷಣೆ ಬರೆದಿದ್ದಾರೆ.  ವಸಿಷ್ಠ ಎನ್ ಸಿಂಹ, ರಕ್ಷ, ದೀಪಕ್ ಶೆಟ್ಟಿ, ಸುಚೇಂದ್ರ ಪ್ರಸಾದ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ಆಸ್ಕರ್ ಕೃಷ್ಣ ಚಡ್ಡಿದೋಸ್ತ್ ಮತ್ತು ಕಡ್ಡಿ

ಸೆವೆನ್ ರಾಜ್ ನಿರ್ಮಾಣದಲ್ಲಿ ಆಸ್ಕರ್ ಕೃಷ್ಣ ಮೊದಲ ಬಾರಿಗೆ ನಾಯಕರಾಗಿ ನಟಿಸಿ, ನಿರ್ದೇಶಿಸಿರುವ ಚಡ್ಡಿದೋಸ್ತ್ ಕಡ್ಡಿ ಅಲ್ಲಾಡ್ಸ್ ಬಿಟ್ಟ ಚಿತ್ರವು ಸುಮಾರು ಮುಕ್ಕಾಲು ಭಾಗದಷ್ಟು ಚಿತ್ರೀಕರಣವನ್ನು ಮುಗಿಸಿಕೊಂಡಿದೆ. ಲಾಕ್ಡೌನ್ ನಂತರದ ಮೊದಲ ಚಿತ್ರವಾಗಿ ಮುಹೂರ್ತ ಆಚರಿಸಿಕೊಂಡ ಈ ಚಿತ್ರವು ಈಗ ಅಂತಿಮ ಹಂತದ ಚಿತ್ರೀಕರಣಕ್ಕೆ ಬಂದು ನಿಂತಿದೆ. ಖ್ಯಾತ ಕಾದಂಬರಿಕಾರ ಕೌಂಡಿನ್ಯ ರವರ ಮೈ ಡಿಯರ್ ಫ್ರೆಂಡ್ ಕಾದಂಬರಿಗೆ ಚಿತ್ರಕತೆ ಹಾಗೂ ಸಂಭಾಷಣೆ ಬರೆದು ಚಿತ್ರದಲ್ಲಿ ಒಂದು ವಿಶೇಷ ಪಾತ್ರವನ್ನು ನಿಭಾಯಿಸಿದ್ದಾರೆ ನಟ ಲೋಕೇಂದ್ರ ಸೂರ್ಯ.

ಮಲಯಾಳಿ ನಟಿ ಗೌರಿ ನಾಯರ್ ಚಿತ್ರದ ನಾಯಕಿಯಾಗಿ ಪಾತ್ರ ನಿರ್ವಹಿಸಿದ್ದು, ನಿರ್ಮಾಪಕ ಸೆವೆನ್ ರಾಜ್ ರವರೂ ಕೂಡ ಒಂದು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
ಬೆಂಗಳೂರು, ಕುಣಿಗಲ್ ಹಾಗೂ ಇನ್ನಿತರ ಸ್ಥಳಗಳಲ್ಲಿ ಚಿತ್ರೀಕರಣ ಮುಗಿಸಿಕೊಂಡು ಬಂದಿರುವ ಚಿತ್ರತಂಡ ಮುಂದಿನ ಭಾಗದ ಚಿತ್ರೀಕರಣಕ್ಕೆ ಸಿದ್ಧತೆ ನಡೆಸಿದೆ.

ಚಿತ್ರಕ್ಕೆ ಗಗನ ಕುಮಾರ್ ಛಾಯಾಗ್ರಹಣ, ಅನಂತ್ ಆರ್ಯನ್ ಸಂಗೀತ ನಿರ್ದೇಶನ, ಮರಿಸ್ವಾಮಿ ಸಂಕಲನ, ವೈಲೆಂಟ್ ವೇಲು ಸಾಹಸ ನಿರ್ದೇಶನ, ಅಕುಲ್ ರವರು ನೃತ್ಯ ನಿರ್ದೇಶನ, ಶ್ರೀಧರ್ ಸಿಯಾ ಹಾಗೂ ಕೃಷ್ಣಕುಮಾರ್ ಸಹ ನಿರ್ದೇಶನ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ವಿಕ್ರಂ ರವಿಚಂದ್ರನ್ | ಮಾರಾಟದಲ್ಲಿ ‘ತ್ರಿವಿಕ್ರಮ’

ಕನ್ನಡದ ಕನಸುಗಾರ ವಿ.ರವಿಚಂದ್ರನ್ ಅವರ ಎರಡನೇ ಪುತ್ರ ವಿಕ್ರಂ ರವಿಚಂದ್ರನ್ ಬಹಳ ಹಿಂದೆಯೇ ಚಿತ್ರರಂಗ ಪ್ರವೇಶ ಮಾಡುವ ಕನಸು ಕಂಡಿದ್ದರು. ಅದೇಕೋ ಎಲ್ಲವೂ ಕೂಡಿ ಬರಲಿಲ್ಲ.. ಕನ್ನಡದ ಸದ್ಯದ ಮುಂಚೂಣಿಯ ನಿರ್ದೇಶಕರಲ್ಲಿ ಒಬ್ಬರಾಗಿರುವ ನಾಗ್ ಶೇಖರ್ ವಿಕ್ರಂ ಸ್ಟಾರ್ ಆಗುವ ಕನಸು ಕಂಡು ಓಡಾಡಿದರು. ಅದೇನಾಯಿತೋ ಆ ಚಿತ್ರ ಮುಂದೆ ಸರಿಯಲಿಲ್ಲ.

ಸದ್ಯ ವಿಕ್ಕಿಗೆ ಈಗ ‘ತ್ರಿವಿಕ್ರಮ’ ಎಂಬುದು ಕೂಡಿ ಬಂದಿದೆ. ತ್ರಿವಿಕ್ರಮ ಹೆಸರಿನ ವಿಕ್ಕಿಯ ಅದೃಷ್ಡದ ಸಿನಿಮಾವಾಗಿಯೂ ಒಲಿದು ಬಂದಿದೆ. ಮಾಡುತ್ತಿದ್ದಾರೆ.. ವಿಕ್ರಂ ಹೆಸರಿಗೆ, ದೇಹಭಾಷೆಗೆ ಹೊಂದುವಂತಹ ಕಥೆ ಮಾಡಿದ್ದಾರೆ ನಿರ್ದೇಶಕ ಸಹನಾ ಮೂರ್ತಿ. ಇದರ ಚಿತ್ರೀಕರಣವೂ ನಡೆದು ಹೋಗಿದೆ. ಶೂಟಿಂಗ್ ಕೂಡ ಮಾಡಿದ್ದಾರೆ.

ಚಿತ್ರದ ಮೇಲೆ ನಿರ್ದೇಶಕರಿಗೆ ಹೆಚ್ಚಿನ ನಿರೀಕ್ಷೆ ಇದೆ. ಇದರ ನಿರ್ಮಾಪಕರಿಗೂ ಅಷ್ಟೇ. ಅದಕ್ಕೆ ಪೂರಕವಾಗಿ ವರಲಕ್ಷ್ಮಿ ಹಬ್ಬದ ಸಂದರ್ಭದಲ್ಲಿ ಸಿನಿಮಾಗೊಂದು ಬೆಲೆ ಬಂದಿದೆ.
ಆಡಿಯೋ ಹಕ್ಕಿನಲ್ಲಿ ‘ತ್ರಿವಿಕ್ರಮ’ನ ಪರಾಕ್ರಮ..!

ವಿಕ್ರಂ ರವಿಚಂದ್ರನ್ ಮೊದಲ ಸಿನಿಮಾ ಇದು. ಸಹನಾ ಮೂರ್ತಿ ಅವರಿಗೆ ಎರಡನೇ ಚಿತ್ರ. ಹಾಗಾಗಿ ಸಿಕ್ಕಾಪಟ್ಟೆ ಮುತ್ತುವರ್ಜಿ ವಹಿಸಿ ಈ ಸಿನಿಮಾ ಸಿದ್ಧಪಡಿಸಿದ್ದಾರೆ ಎಂಬುದು ಮಾಹಿತಿ. ನಿರ್ಮಾಪಕ ಸೋಮಣ್ಣ ಅವರಿಗೆ ಈ ಜ್ಯೂನಿಯರ್ ಕ್ರೇಜಿಸ್ಟಾರ್ ಪರದೆ ಮೇಲೆ ಮಿಂಚಬೇಕು ಬ ಆಸೆಯಿಂದ ಬಂಡವಾಳ ಸುರಿದಿದ್ದಾರೆ.. ಉದಾಹರಣೆಗೆ ತ್ರಿವಿಕ್ರಮನ ಎರಡು ಹಾಡುಗಳ ಚಿತ್ರೀಕರಣವನ್ನು ಭಾರತ ಚೀನಾ, ಭಾರತ, ಪಾಕಿಸ್ತಾನ ಗಡಿಗಳಲ್ಲಿ ಚಿತ್ರೀಕರಿಸಲು ಯೋಜನೆ ರೂಪಿಸಿರುವುದು. ಮಾಡಿರೋದು..
ಇದರ ಆಧಾರವೇ ಈಗ ಹಾಡುಗಳ ಹಕ್ಕು

50 ಲಕ್ಷಕ್ಕೆ ಮಾರಾಟವಾಗಿದೆ. ಎ2 ಮ್ಯೂಸಿಕ್ ಆಡಿಯೋ ಸಂಸ್ಥೆ ತ್ರಿವಿಕ್ರಮನ ಹಾಡುಗಳನ್ನು ಕೊಂಡುಕೊಂಡಿದೆ. ಸಿನಿಮಾದಲ್ಲಿ ಒಟ್ಟು 6 ಹಾಡುಗಳಿದ್ದು, ಅರ್ಜುನ್ ಜನ್ಯ ಇದರ ಸಂಗೀತ ನಿರ್ದೇಶಕ.

ಖಾಸಗಿ ಮತ್ತು ಆ ಮುಖ

ಈಚೆಗೆ ಟಿವಿ ಚಾನೆಲ್ ಗಳ ಬ್ರೇಕಿಂಗ್ ಗಳನ್ನು ನೋಡುತ್ತಿದ್ದರೆ ಬಹಳವೇ ನಗು ಬರುತ್ತದೆ. ಖಾಸಗಿ ಚಾನೆಲ್ ಗಳಾಗಿರುವ ಇವು, ಬೇರೆ ಖಾಸಗಿಯವರ ಬಂಡವಾಳ ಬಯಲು ಮಾಡಿದಂತೆ ತಮ್ಮಷ್ಟಕ್ಕೆ ತಾವೇ ಭುಜ ತಟ್ಟಿಕೊಳ್ಳುತ್ತಿವೆ.
ಖಾಸಗಿ ಆಸ್ಪತ್ರೆಗೆಗಳು ಈಗ ಚರ್ಚಿತ ಸಂಸ್ಥೆಗಳು.. ಇದರ ಜೊತೆಗೆ ಖಾಸಗಿ ವಿದ್ಯಾ ಸಂಸ್ಥೆಗಳು ಚರ್ಚೆಗೆ ಸಿಕ್ಕಿವೆ. ಇವೆರಡೂ ಜನರ ಶೋಷಣೆಗೆ ಇಳಿದು ಬಹಳಷ್ಟು ವರ್ಷಗಳೇ ಕಳೆದವು. ಖಾಸಗಿ ಆಸ್ಪತ್ರೆಗಳು ಹೇಗೆ ಸುಲಿಗೆ ಮಾಡುತ್ತವೆ ಎಂಬುದು ಜಗಜ್ಜಾಹಿರ.

ಅದೇ ರೀತಿ ಖಾಸಗಿ ವಿದ್ಯಾ ಸಂಸ್ಥೆಗಳು ಎಲ್ ಕೆ ಜಿ ಮಕ್ಕಳ ಪೋಷಕರಿಂದ ಹಿಡಿದು ಎಲ್ಲಿಯವರೆಗೂ ಸಾಧ್ಯವೋ ಅಲ್ಲಿವರೆಗೆ ಸುಲಿಗೆ ಮಾಡುವುದು ಕದ್ದು ಮುಚ್ಚಿ ಅಲ್ಲ; ಬಹಿರಂಗವಾಗಿ. ಆನ್ ಲೈನ್ ಕ್ಲಾಸ್ ಲೆಕ್ಕದಲ್ಲಿ ಸುಮಾರು 75 ಸಾವಿರದಿಂದ ಒಂದೂವರೆ ಲಕ್ಷದವರೆಗೆ ಹಣ ವಸೂಲಿ ಆಗುತ್ತಿದೆ. ಇದು ಮಧ್ಯಮ ವರ್ಗದ ಜನರನ್ನು ಹಣ್ಣುಗಾಯಿ ನೀರುಗಾಯಿ ಮಾಡುತ್ತಿದೆ ಎಂಬುದು ಸದ್ಯದ ವಾಸ್ತವ. ಏಕೆಂದರೆ ಮಧ್ಯಮ ಮತ್ತು ಕೆಳ ಮಧ್ಯಮ ವರ್ಗದ ಜನರ ಬದುಕಲ್ಲಿ ಬಿರುಗಾಳಿ ಬೀಸಿದೆ. ಕೆಲಸ ಕಳೆದುಕೊಂಡವರೆಷ್ಟೋ.. ಕೆಲಸವಿಲ್ಲದೆ ಅನಿವಾರ್ಯವಾಗಿ ತರಕಾರಿ ವ್ಯಾಪಾರಕ್ಕೆ ಇಳಿದವರು ಎಷ್ಟೋ ಮಂದಿ. ಆಟೋ ಚಾಲಕನೊಬ್ಬ ಸಂಪೂರ್ಣ ತೃಪ್ತಿಯಿಂದ ಮನೆಗೆ ಹೋಗುವುದಿಲ್ಲ.

ಇಂಥವರ ಮಕ್ಕಳು ಖಾಸಗಿ ಶಾಲೆಯಲ್ಲಿ ಓದುತ್ತಾರೆ.. ಓದಲಿ ಅದು ಖುಷಿಯ ವಿಚಾರವೇ.. ಆದರೆ ಖಾಸಗಿ ಶಾಲೆಗಳಿಗೆ ಹಣ ಕಟ್ಟಬೇಕಲ್ಲ; ಆಗ ಬಸವಳಿಸುತ್ತಾರೆ.. ಸಾಲ ಸೋಲ ಮಾಡಿ ಹಣ ಕಟ್ಟಿ ಅದನ್ನು ತೀರಿಸಲು ಜೀವನದಲ್ಲಿ ಹೆಣಗುತ್ತಲೇ ಹೋಗುತ್ತಾರೆ. ಇದರ ಅರಿವು ಯಾರಿಗಿದೆ.. ಸುಲಿಗೆ ಮಾಡುವವರಿಗೆ ಯಾವ ಮಾನವೀಯ ಸ್ಪರ್ಶವೂ ಇರುವುದಿಲ್ಲ..ಹಣದ ಥೈಲಿ ಅವರನ್ನು ಬದಲಾವಣೆ ಮಾಡಿಬಿಟ್ಟಿರುತ್ತದೆ.

ಇನ್ನು ಖಾಸಗಿ ಆಸ್ಪತ್ರೆ ಗಳ ಒಳ ಹೊಕ್ಕರೆ ಮುಗಿಯಿತು..ಟೆಸ್ಟ್ ಗಳ ಮಹಾಪೂರ.. ಇಲ್ಲದ ಕಾಯಿಲೆ ಹೊಕ್ಕು ತ್ತದೆ.. ಆಗ ಲಕ್ಷ ಲಕ್ಷ ಹಣ ತಾನಾಗಿಯೇ ಸುಲಿಗೆ ಆಗುತ್ತದೆ. ಈ ಕೋವಿಡ್ ಕಾಲದಲ್ಲಿ ಹಬ್ಬ ಆಚರಿಸುತ್ತಿವೆ ಖಾಸಗಿ ಆಸ್ಪತ್ರೆಗಳು.. ಇವುಗಳ ಸುಲಿಗೆಗೆ ಮಿತಿಯೇ ಇಲ್ಲ ಎಂಬುದು ಸರ್ಕಾರ ನೇಮಿಸಿರುವ ತಂಡ ಜಗಜಾಹಿರ ಮಾಡುತ್ತಿದೆ. ಬಡ ಅಥವಾ ಮಧ್ಯಮ ವರ್ಗದ ಒಬ್ಬ ವ್ಯಕ್ತಿ ಈ ಆಸ್ಪತ್ರೆಯ ಸುಳಿಗೆ ಸಿಲುಕಿದರೆ.. ಆತನ ಬದುಕೇ ಮುಗಿದು ಹೋದಂತೆ.