ಇದೊಂದು ನೈಜ ಘಟನೆ ಆಧಾರಿಸಿದ ಕಥೆ. ಅದರಲ್ಲಿಯೂ ಆಧುನಿಕ ಸಂವೇದನೆಗಳಿರುವ ಕಥೆ. ಮಿಸ್ಡ್ ಕಾಲ್ ನಿಂದ ಆದ ಪ್ರೇಮದ ಕಥೆ..
ಹೆಸರು ಜೊತೆಯಾಗಿರು..!
ಈಚೆಗೆ ಚಿತ್ರದ ಟ್ರೈಲರ್ ಬಿಡುಗಡೆಯಲ್ಲಿ ಚಿತ್ರತಂಡ ಅತ್ಯಂತ ಖುಷಿಯಲ್ಲಿ ಭಾಗಿಯಾಗಿತ್ತು. ಇದೀಗ ಚಿತ್ರವು ಬಿಡುಗಡೆಯ ಸಿದ್ಧತೆಯಲ್ಲಿದೆ.
ರೇಣು ಮೂವೀಸ್ ಮೂಲಕ ಒಂದಷ್ಟು ಸ್ನೇಹಿತರೇ ಸೇರಿ ನಿರ್ಮಿಸಿರುವ ಚಿತ್ರವಿದು. ‘ಅಜರಾಮರ’, ‘ನಾನೊಬ್ನೆ ಒಳ್ಳೇವ್ನು’ ಸೇರಿದಂತೆ ಹಲವಾರು ಸಿನಿಮಾಗಳಿಗೆ ಸಹಾಯಕ ನಿರ್ದೇಶಕ, ಸಹ ನಿರ್ದೇಶಕರಾಗಿಯೂ ಕೆಲಸ ಮಾಡಿದ ಸತೀಶ್ ಕುಮಾರ್ ಈ ಚಿತ್ರಕ್ಕಾಗಿ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ.
ಮೊಬೈಲ್ ಫೋನ್ ಆಗ ತಾನೆ ಸಾಮಾನ್ಯರ ಕೈಗೆಟುಕುತ್ತಿದ್ದ ಕಾಲಮಾನ 2006ರಲ್ಲಿ ನಡೆದ ನೈಜ ಘಟನೆ ಆಧರಿಸಿದ ಚಿತ್ರವಿದು. ಒಂದು ರೀತಿಯಲ್ಲಿ ನಿರ್ದೇಶಕರ ಸ್ನೇಹಿತನ ಜೀವನದಲ್ಲಿ ನಡೆದ ಕಥೆಗೆ ರಂಗು ಮೂಡಿಸಿ ಈ ಚಿತ್ರ ಮಾಡಲಾಗಿದೆ.
ಕಥೆ ಎರಡು ನೆಲೆಯಲ್ಲಿ ಸಾಗುತ್ತದೆ. ಸೋಷಿಯಲ್ ಮೀಡಿಯಾ ಇಲ್ಲದ ಕೀಪ್ಯಾಡ್ ಕಾಲದಲ್ಲಿ ಮಿಸ್ಡ್ ಕಾಲ್ ನಿಂದ ಹುಟ್ಟಿದ ಪ್ರೇಮ ಕಥೆಯೊಂದು ಫ್ಲ್ಯಾಷ್ ಬ್ಯಾಕ್ ನಲ್ಲಿ ಬರುತ್ತದೆ. ಇನ್ನೊಂದು ಕಥೆಯಲ್ಲಿ ಹಣದ ಆಸೆಗೆ ಬಿದ್ದ ಹುಡುಗಿಯನ್ನು ಹುಡುಗ ಲವ್ ಮಾಡಿದರೆ ಏನಾಗುತ್ತೆ ಎಂಬುದನ್ನು ಹೇಳಲಾಗಿದೆ ಎಂದರು ನಿರ್ದೇಶಕರು.
ಬೆಂಗಳೂರು, ಕನಕಪುರ, ಕಳಸ, ಸಕಲೇಶಪುರ, ಕುಂದಾಪುರ, ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ. ಮಿಸ್ಡ್ ಕಾಲ್ ನಿಂದ ಹುಟ್ಟಿದ ಪ್ರೇಮಕಥೆಯಲ್ಲಿ ವೆಂಕಟೇಶ್ ಹೆಗಡೆ, ರಶ್ಮಿಗೌಡ ಹಾಗೂ ಇನ್ನೊಂದು ಕಥೆಯಲ್ಲಿ ಸುನಿಲ್ ಕಾಂಚನ್, ಪೂಜಾ ಆಚಾರ್ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ.
ಯು/ಎ ಪ್ರಮಾಣ ಪತ್ರ ಪಡೆದಿರುವ ಚಿತ್ರವೀಗ ಬಿಡುಗಡೆ ಹಂತದಲ್ಲಿದೆ.
ಉಳಿದಂತೆ ಶಂಕರ ನಾರಾಯಣ್, ಸಂತೋಷ್, ಸುಧಾ ತಾರಾಗಣದಲ್ಲಿ ಇದ್ದಾರೆ. ರಾಜಶೇಖರ್ ಸಂಭಾಷಣೆ, ವಿನು ಮನಸು ಸಂಗೀತ, ಕೆ.ಕಲ್ಯಾಣ್, ಮನ್ವರ್ಷಿ, ಸತೀಶ್ ಕುಮಾರ್ ಸಾಹಿತ್ಯ, ಸತೀಶ್ ಚಂದ್ರಯ್ಯ ಸಂಕಲನ, ವಿ ನಾಗೇಶ್ ನೃತ್ಯ, ಲಯನ್ ಗಂಗರಾಜ್ ಸಾಹಸ,ರಾಜ ಶಿವಶಂಕರ್, ಆನಂದ್ ಇಳಯರಾಜ್ ಛಾಯಾಗ್ರಹಣ ಚಿತ್ರಕ್ಕಿದೆ.