ರೇಟಿಂಗ್ : 3.5/5
ನಿರ್ಮಾಣ : ಮಂಜುನಾಥ್ ದಾಸೇಗೌಡ, ಗಿರೀಶ್ ಕುಮಾರ್
ನಿರ್ದೇಶನ : ದೀಪಕ್ ಮಧುವನಹಳ್ಳಿ
ನಿಧಿಯ ಶೋಧನೆ ನಗೆಯ ಭಾವನೆ..
ಭಾವನೆಗಳ ಬೆನ್ನತ್ತಿ ಬೀಗ ತೆಗೆಯುವ ಮಹಾಶೂರ ರಾಘವನ ಪ್ರೇಮ ವೃತ್ತಾಂತದ ಜೊತೆಗೆ ನಿಧಿಯ ಶೋಧನೆ ಮತ್ತು ನಗೆಯ ಭಾವನೆಗೆ ಇಡೀಯ ಕಥೆ ಮೀಸಲು..
ಬಾಲ್ಯದಲ್ಲಿ ಶಾಲೆಯಲ್ಲಿ ಕೂಡಿ ಹಾಕಲ್ಪಟ್ಟಿದ್ದ ಹುಡುಗಿಯನ್ನು ಭಾವನೆಯ ಕಿಡಿ ಹಚ್ಚಿ ಬೀಗ ತೆಗೆದು ಕಾಪಾಡಿದ್ದ ರಾಘವನ ಅಲ್ಲಿ ಮೊಳೆತ ಪ್ರೇಮ ಎಲ್ಲಿಗೆ ಹೋದರೂ ಬಿಡದೆ ಕಾಡುತ್ತದೆ.
ಎಂತಹ ಬೀಗವನ್ನಾದರೂ ತೆಗೆದು ಬೀಗುವ ಅವನಿಗೆ ಶೋಧನೆಯ ಮೂಲಕ ತೆಗೆದ ನಿಧಿ ಪೆಟ್ಟಿಗೆ ತೆಗೆಯುವ ಸವಾಲು. ಆದರೆ ಅದು ದೊರೆಯುವ ಮಾರ್ಗದಲ್ಲಿ ಸಮಸ್ಯೆಗಳು ಸಾಲು ಸಾಲು..
ಇಲ್ಲಿ ಪ್ರಾಚ್ಯವಸ್ತು ಶೋಧನೆ ಮತ್ತು ಸಂಶೋಧನಾ ವಿಷಯವನ್ನು ತಮಾಷೆಯಾಗಿ ಬಳಸಿಕೊಂಡಿರುವುದರಿಂದ ಯಾವುದಕ್ಕೂ ತರ್ಕ ಅನ್ವಯಿಸುವುದಿಲ್ಲ. ಹಾಗೆಯೇ ಅದು ಭೋಧನೆಯ ವಿಷಯವೂ ಅಲ್ಲ.
ಆದರೆ ರಾಘವ ಮತ್ತು ಆತನ ಮಾವ ಹರಿಶ್ಚಂದ್ರ ಮಾಡುವ ಚಿತ್ರ ವಿಚಿತ್ರ ಅವತಾರಗಳು ನಗೆಯ ವಿಷಯಗಳಾಗಿ ಚಿತ್ರದ ಉದ್ದಕ್ಕೂ ಚೆಲ್ಲಾಡುತ್ತವೆ. ಆರು ಅಡಿಯ ರಾಘವ ದುಷ್ಕರ್ಮಿಗಳನ್ನು ಹೊಡೆದು ಚಚ್ಚುವುದು ಸಾಹಸ ಪ್ರಿಯರಿಗೆ ಹಬ್ಬವಾಗಿ ಕಾಣುತ್ತದೆ.
‘ರಾಮ ರಾಮಾ ರೇ’ ಮೂಲಕ ಗಮನ ಸೆಳೆದ ಸತ್ಯ ಪ್ರಕಾಶ್ ಅದೇ ಮಾದರಿಯ ಬ್ರೆನ್ ಲಾಸ್ ಕಾಮಿಡಿಯ ಜಾನರ್ ತೆರೆದು ಕಥೆ ಕಟ್ಟಿದ್ದಾರೆ. ಆದರೆ ನಿರ್ದೇಶಕರು ಚಿತ್ರಕಥೆ ಬಿಗಿಗೊಳಿಸುವ ಹಾದಿಯಲ್ಲಿ ಎಡವಿದಂತೆ ಕಾಣುತ್ತದೆ.
ರಾಘವನ ಪಾತ್ರದಲ್ಲಿ ಮಿಲಿಂದ್ ಗೌತಮ್ ಹೊಡೆದಾಟ ಮತ್ತು ನೃತ್ಯದಲ್ಲಿ ಗಮನ ಸೆಳೆಯುತ್ತಾರೆ. ರಚೆಲ್ ಡೇವಿಡ್ ಗ್ಲಾಮರ್ ಬೊಂಬೆಯಂತೆ ಕಾಣುತ್ತಾರೆ. ಇನ್ನು ಹರಿಶ್ಚಂದ್ರ ಪಾತ್ರದಲ್ಲಿ ಇಡೀ ಚಿತ್ರವನ್ನು ಆವರಿಸಿರುವ ಸಾಧು ಚಿತ್ರ ವಿಚಿತ್ರ ಹಾವ ಭಾವಗಳಿಂದ ನಗೆ ಉಕ್ಕಿಸುತ್ತಾರೆ.
ಅಪರೂಪಕ್ಕೆ ಪೀಟರ್ ಪಾತ್ರದಲ್ಲಿ ಶೋಭರಾಜ್ ಅವರಿಗೆ ಕಾಮಿಡಿ ವಿಲನ್ ಆಗಿ ಮಿಂಚುವ ಅವಕಾಶ ದೊರೆತಿದೆ. ಅದನ್ನು ಅವರು ಸದುಪಯೋಗ ಪಡಿಸಿ ಕೊಂಡಿದ್ದಾರೆ.
ರಾಮಣ್ಣನಾಗಿ ರಮೇಶ್ ಭಟ್,
ಪೀಟರ್ ಪತ್ನಿ ಮಾಯಾ ಪಾತ್ರದಲ್ಲಿ ವೀಣಾ ಸುಂದರ್, ನಿಧಿಗಾಗಿ ಹೊಂಚು ಹಾಕುವ ವ್ಯಕ್ತಿಯ ಪಾತ್ರದಲ್ಲಿ ಸುಂದರ್, ಅಧಿಕಾರಿ ಜಗಪತಿ ಪಾತ್ರದಲ್ಲಿ ಅವಿನಾಶ್ ಪಾತ್ರಗಳಿಗೆ ನ್ಯಾಯ ಸಲ್ಲಿಸಿದ್ದಾರೆ.
ಅಲ್ಲದೆ ಧರ್ಮಣ್ಣ ಹಾಗೂ ಮೂಗ್ ಸುರೇಶ್ ಪಾತ್ರಗಳು ವಿಶೇಷವಾಗಿ ನಗು ತರಿಸುತ್ತವೆ. ಅನೂಪ್ ಸೀಳಿನ್ ಸಂಗೀತ ಚಿತ್ರಕ್ಕೆ ಪೂರಕ.