ತೇಜಸ್ ಕ್ರಿಯೇಷನ್ಸ್ ಮೂಲಕ ಚಿತ್ರಗಳನ್ನು ನಿರ್ಮಾಣ ಮಾಡುತ್ತಿರುವ ಚಂದ್ರಶೇಖರ್ ತಮ್ಮ ಪುತ್ರ ಅಭಯ್ ಗಾಗಿ ಎರಡನೇ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದು, ಆ ಚಿತ್ರಕ್ಕೆ ‘ಮಂಡ್ಯ ಹೈದ’ ಎಂಬ ಹೆಸರಿಡಲಾಗಿದೆ.
ಈಚೆಗೆ ಅಭಯ್ ಹುಟ್ಟುಹಬ್ಬದ ಸಂದರ್ಭದಲ್ಲಿ ಚಿತ್ರದ ಫಸ್ಟ್ ಲುಕ್ ಮತ್ತು ಶೀರ್ಷಿಕೆ ಬಿಡುಗಡೆ ಸಮಾರಂಭದಲ್ಲಿ ಚಿತ್ರತಂಡ ಅತ್ಯಂತ ಉತ್ಸಾಹದಿಂದ ಪಾಲ್ಗೊಂಡಿತ್ತು.
ಮಂಡ್ಯ ಹೈದ ಚಿತ್ರವು ತೇಜಸ್ ಕ್ರಿಯೇಷನ್ಸ್ ನ ಐದನೇ ಚಿತ್ರ ಹಾಗೂ ಅಭಯ್ ಚಂದ್ರಶೇಖರ್ ಎರಡನೇ ಚಿತ್ರವಾಗಿತ್ತು. ಈ ಮುಂಚೆ ‘ಮನಸಾಗಿದೆ’ ಎಂಬ ಚಿತ್ರವನ್ನು ಮಗನಿಗಾಗಿ ಚಂದ್ರಶೇಖರ್ ಮಾಡಿದ್ದರು.
ಹಿಂದೆ ರಾಘಣ್ಣ ಅಭಿನಯದ ‘ವಾರ್ಡ್ ನಂ.11’ ಎಂಬ ಚಿತ್ರವನ್ನು ನಿರ್ದೇಶನ ಮಾಡಿದ್ದ ವಿ. ಶ್ರೀಕಾಂತ್ ಕಥೆ, ಚಿತ್ರಕಥೆ ಬರೆದು ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಇದೇ ತಿಂಗಳ 18 ರಂದು ಬಂಡೆ ಮಾಂಕಾಳಮ್ಮ ದೇವಸ್ಥಾನದಲ್ಲಿ ಈ ಚಿತ್ರದ ಮುಹೂರ್ತ ನಡೆಯಲಿದೆ ಎಂಬ ಮಾಹಿತಿಗಳನ್ನು ನೀಡಿತು ಚಿತ್ರತಂಡ.
ಅಭಯ್ ಎದುರು ಕಿರುತೆರೆ ನಟಿ ಭೂಮಿಕಾ ನಟಿಸುತ್ತಿದ್ದು, ಪ್ರೀತಿ ಪ್ರೇಮದ ಕಥಾ ಹಂದರವಿರುವ ಈ ಚಿತ್ರಕ್ಕೆ ಶೇ.80ರಷ್ಟು ಚಿತ್ರೀಕರಣ ಮಂಡ್ಯ ಹಾಗೂ ಅದರ ಸುತ್ತಮುತ್ತಲಿನ ಪ್ರದೇಶದಲ್ಲಿ ನಡೆಯಲಿದೆ. ಮನುಗೌಡ ಛಾಯಾಗ್ರಹಣ, ಸುರೇಂದ್ರನಾಥ್ ಸಂಗೀತ ಚಿತ್ರಕ್ಕಿದೆ.