ಉತ್ತರ ಕರ್ನಾಟಕ ಭಾಗದಲ್ಲಿ ರೀಲ್ಸ್ ಮೂಲಕ ಹೆಸರಾಗಿರುವ ಮಲ್ಲು ಜಮಖಂಡಿ ಈಗ ಸಿನಿಮಾದ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.
ಅದು ವಿದ್ಯಾ ಗಣೇಶ್..!
ಇದೇ ವಾರ ಅಂದರೆ ಫೆಬ್ರವರಿ 21 ರಂದು ಬಿಡುಗಡೆ ಕಾಣುತ್ತಿರುವ ಈ ಚಿತ್ರದ ಪ್ರಚಾರದ ಸಲುವಾಗಿ ಕಳೆದ ವಾರ ಇಡೀ ಚಿತ್ರತಂಡ ಮಾಧ್ಯಮಗಳ ಮುಂದೆ ಬಂದಿತ್ತು.
ಹಿರಿಯ ನಟ ರಮೇಶ್ ಭಟ್, ಜನಪ್ರಿಯ ನಟ ತಬಲಾನಾಣಿ ಸೇರಿದಂತೆ ಮಲ್ಲು ಜಮಖಂಡಿ, ಕಾಕ್ರೋಚ್ ಸುಧಿ, ನಟಿ ಸುರಕ್ಷ ಕೈರಾ, ಸಂಭಾಷಣೆ ಬರೆದ ನಾಗೇಶ್, ನಿರ್ಮಾಪಕ ಚೇತನ್ ಹಾಗೂ ನಿರ್ದೇಶಕ ಉಮೇಶ್ ಚಂದ್ರ ವೇದಿಕೆಯ ಮೇಲಿದ್ದರು.
ಚಿತ್ರತಂಡದ ಪರವಾಗಿ ಮಾತನಾಡಿದ ನಟ ತಬಲ ನಾಣಿ, ಸಾಕಷ್ಟು ಪರಿಶ್ರಮ ಹಾಕಲಾಗಿದೆ. ಉತ್ತರ ಕರ್ನಾಟಕದ ಭಾಷೆ ಗಮನ ಸೆಳೆಯುತ್ತದೆ. ಅಲ್ಲಿ ಜಮಖಂಡಿ ಅವರು ಈಗಾಗಲೇ ಪ್ರಖ್ಯಾತರಾಗಿದ್ದಾರೆ ಎಂಬ ವಿವರ ನೀಡಿದರು.
ವೃತ್ತಿ ಜೀವನದ ಆರಂಭದ ದಿನಗಳನ್ನು ಮೆಲುಕು ಹಾಕುತ್ತಲೇ ಈ ಚಿತ್ರವೂ ಅನೇಕ ವಿಷಯಗಳಲ್ಲಿ ವರವಾಗಿರುವುದರ ಬಗ್ಗೆ ವಿವರ ನೀಡಿದವರು ನಟ ಕಾಕ್ರೋಚ್ ಸುಧಿ.
ಮಲ್ಲು ಜಮಖಂಡಿ ಹಾಗೂ ಸುರಕ್ಷಾ ಕೈರಾ ಪಾತ್ರಗಳ ಬಗ್ಗೆ ವಿವರ ನೀಡಿದರು. ಹಿರಿಯ ನಟ ರಮೇಶ್ ಭಟ್ ತಂಡದ ಸ್ಫೂರ್ತಿಯ ಬಗ್ಗೆ ಮಾತನಾಡಿದರು.
ತಾಯಿಯವರನ್ನು ಕಳೆದುಕೊಂಡ ದುಃಖದಲ್ಲಿ ಭಾವುಕರಾಗಿ ಮಾತನಾಡಿದವರು ನಿರ್ದೇಶಕ ಉಮೇಶ್ ಚಂದ್ರ. ಕಷ್ಟದ ದಿನಗಳಲ್ಲಿ ಸಾಕಿದ ಅವ್ವನಿಗೆ ಚಿತ್ರ ತೋರಿಸಲು ಸಾಧ್ಯವಾಗಿಲ್ಲ ಎಂದರು.
ಇದಕ್ಕೂ ಮೊದಲು ಚಿತ್ರದ ಟ್ರೈಲರ್ ಬಿಡುಗಡೆ ಕಂಡಿತು. ಮಲ್ಲು ಜಮಖಂಡಿ ಹಾಸ್ಯದ ಮೂಲಕ ಜನಪ್ರಿಯತೆ ಪಡೆದಿದ್ದರೂ ಚಿತ್ರದಲ್ಲಿ ಎಲ್ಲಾ ರೀತಿಯ ನಟನೆ ಹಾಗೂ ಸಾಹಸಗಳನ್ನು ಮಾಡಿದ್ದಾರೆ ಎಂಬ ವಿವರ ಕೊಟ್ಟರು ನಿರ್ದೇಶಕ ಉಮೇಶ್ ಚಂದ್ರ.