* ಗಂಧದಗುಡಿ.. ಚೆಂದದ ಗುಡಿ..
* ಸರಳ ಯೋಗಿಯ ಮುಗ್ಧ ನಗೆ..
* ಅಪರಿಮಿತ ಕೌತುಕ ಜೀವ ವಿಜ್ಞಾನ
* ಸಸ್ಯ ಪ್ರಾಣಿ ಪಕ್ಷಿಗಳ ಆಕರ್ಷಣೆ..
* ಹಿರಿಯರ ಪ್ರಕೃತಿ ಆರಾಧನೆ ಗೌರವ
ಅಭಿಮಾನಿಗಳ ದೇವರು ಕರುನಾಡಿನ ಹೆಮ್ಮೆಯ ಪುತ್ರ, ಕರ್ನಾಟಕ ರತ್ನ ಡಾ.ಪುನೀತ್ ರಾಜ್ ಕುಮಾರ್ ಇಹಲೋಕದಿಂದ ಹೊರಡುವ ಮುನ್ನ ಇಂತಹ ಅನುಪಮ ಶೋಧದಲ್ಲಿ ತೊಡಗಿದ್ದರು ಎಂಬುದೇ ಇಲ್ಲಿ ಅಚ್ಚರಿ..
ಶೋಧಿಸುತ್ತಾ ಹೋದರೆ ಈ ಬದುಕೇ ನಿಗೂಢಗಳ ಅಚ್ಚರಿ.. ಅದರಲ್ಲಿಯೂ ಪ್ರಕೃತಿಯನ್ನು ಶೋಧಿಸುತ್ತಾ ಹೊರಟರೆ ಅದೊಂದು ಮೈ ನವಿರೇಳಿಸುವ ಪಯಣ..
ಕನ್ನಡದ ಅಗ್ರಮಾನ್ಯ ನಾಯಕ ನಟರಾಗಿ ಮಿಂಚಿ ದೈಹಿಕವಾಗಿ ಮಾತ್ರ ಮರೆಯಾಗಿರುವ ದೇವ ಮಾನವ ಪುನೀತ್ ರಾಜ್ ಕುಮಾರ್ ಪ್ರಕೃತಿಯ ಶೋಧ ನಡೆಸುವ ಈ ಯಾತ್ರೆಯಲ್ಲಿ
ಮಗುವಿನ ಕುತೂಹಲ; ಕಲಾವಿದನ ಕಲಾತ್ಮಕತೆ; ಯೋಗಿಯೊಬ್ಬನ ಪ್ರಶಾಂತ ನಿಲುವು ಗೋಚರಿಸುತ್ತದೆ..
ಜೀವ ವೈವಿಧ್ಯ; ವೈಜ್ಞಾನಿಕ ಲೋಕದ ವಿಸ್ಮಯ, ಪ್ರಕೃತಿಯ ಆರಾಧನೆಗೆ ಅವರು ತೆರೆದುಕೊಳ್ಳುವ ಪರಿ ಸಂತನೊಬ್ಬನ ವಿನಮ್ರ ನಡವಳಿಕೆ ಹಾಗೆಯೇ ಅಪರಿಮಿತ ಸರಳತೆ; ಅನನ್ಯ ಕುತೂಹಲ ಎದ್ದು ಕಾಣುತ್ತದೆ.
ಅಭಿಮಾನಿ ದೇವರುಗಳ ಅಭಿಮಾನಿಯಾಗಿ ಜೀವಿಸಿದ್ದಾರೆ ಪುನೀತ್ ರಾಜ್ ಕುಮಾರ್..! ನಾಗರ ಹೊಳೆ ಹುಲಿ ಅಭಯಾರಣ್ಯದಿಂದ ಆರಂಭವಾಗುವ ಪುನೀತ್ ರಾಜ್‍ಕುಮಾರ್ ಮತ್ತು ನಿರ್ದೇಶಕ ಅಮೋಘ ವರ್ಷ ಅವರ ಕುತೂಹಲದ ಯಾತ್ರೆ ‘ವಿಕಾಸ ಸಿದ್ಧಾಂತ ಬರೆದ ಚಾಲ್ಸ್ ಡಾರ್ವಿನ್ ಅವರ ಬೀಗಲ್ ಹಡಗಿನ ಯಾತ್ರೆ’ಯ ನೆನಪು ಮಾಡಿ ಕೊಡುತ್ತದೆ.
ಪ್ರಕೃತಿ ಆರಾಧಕರಿಗೆ ದೈವವನ್ನೇ ಸೃಷ್ಟಿ ಮಾಡಿಕೊಟ್ಟಂತೆ ಅನಿಸುವುದರಿಂದ ಪ್ರೇಕ್ಷಕ ಕೂಡ ಅನನ್ಯ ಪ್ರಕೃತಿಯ ನಡುವೆ ಜೀವಿಸಿ ಬಿಡುವ ಯೋಗ ಸಿಗುತ್ತದೆ.. ಸಮುದ್ರ ದಾಳದಲ್ಲಿ ಈಜಿ ಆಗಸದಲ್ಲಿ ವಿಹರಿಸಿದ ಅನುಭವವೂ ಆಗುತ್ತದೆ. ಡಾ.ರಾಜ್ ಕುಮಾರ್ ಹುಟ್ಟಿದ ಗಾಜನೂರಿನ ಮನೆ; ಮಲೆನಾಡಿನ ದಟ್ಟ ಅಡವಿ, ಕಡಲ ತೀರ ಮತ್ತು ಆಳ ಹೀಗೆ ವಿಸ್ಮಯ ಗಳನ್ನು ನೋಡುತ್ತಾ ಹೋಗುವುದೇ ಹಬ್ಬ..
ಹಾಗಾಗಿ ಈ ಚಿತ್ರದ ಮೌಲ್ಯವನ್ನು ಕೇವಲ ಗ್ರಹಿಸುವುದರಿಂದ ಸಾಧ್ಯವಾಗದು.. ಅದನ್ನು ನೋಡಿಯೇ ಅನುಭವಿಸಬೇಕು..
ನಿಸರ್ಗವನ್ನು ಅವಲೋಕಿಸುವಾಗ ಇರಬೇಕಾದ ಕುತೂಹಲ ಅದ್ವೀತಿಯವೆನಿಸಿದೆ..
ಆದ್ದರಿಂದಲೇ ಅಲ್ಲಿ ಗೋಚರವಾಗುವ ಸಂಗತಿಗಳು ವಿಜ್ಞಾನದ ತಳಹದಿಯಲ್ಲಿ ಸಂಶೋಧಿಸಿದಂತೆ ಮನಸ್ಸಿನ ಒಳ ಹೊಕ್ಕುತ್ತವೆ.
ಪ್ರಕೃತಿ ಮತ್ತು ಅದರ ಕೌತುಕವನ್ನು ಒಂದು ಸರಳ ಪಯಣದಲ್ಲಿ ಮೈ ನವಿರೇಳಿಸುವ ದೃಶ್ಯಗಳ ಮೂಲಕ ನಿರೂಪಿಸಿರುವುದೇ ಇಲ್ಲಿನ ವೈಶಿಷ್ಟ್ಯ..
ಗಾಜನೂರು, ಬಿಳಿಗಿರಿ ರಂಗನ ಬೆಟ್ಟ, ಮಲ್ಪೆ ಸುತ್ತಲಿನ ನೇತ್ರಾಣಿ, ಬಳ್ಳಾರಿ ಸುತ್ತಲಿನ ಡೆಕ್ಕನ್ ಫಾರೆಸ್ಟ್, ಕಾಳಿನದಿ ಹೀಗೆ ಅಮೋಘ ವರ್ಷ ಅವರ ಜೊತೆ ಸಂಚರಿಸುವ ಪುನೀತ್ ರಾಜ್‍ಕುಮಾರ್ ಒಮ್ಮೆ ಮಗುವಾದರೆ ಮತ್ತೊಮ್ಮೆ ಪ್ರಬುದ್ಧ ಸಂಶೋಧಕರಂತೆ, ಕೆಲವೊಮ್ಮೆ ಸರಳತೆಯ ಸಾಕಾರ ಮೂರ್ತಿಯಂತೆ ಕಾಣುತ್ತಾರೆ.
ಬುಡಕಟ್ಟು ಸಮುದಾಯದ ಜೊತೆ ಬೆರೆಯುವುದು; ಅತ್ಯಂತ ಹಿಂದುಳಿದ ಪ್ರದೇಶದ ಶಾಲೆಯ ಮಕ್ಕಳ ಜೊತೆ ಮಗುವಾಗಿ ಬೆರೆಯುವುದು; ಮತ್ತು ಅಣ್ಣಾವ್ರು ಹಾಡಿದ ರಾಷ್ಟ್ರಕವಿ ಕುವೆಂಪು ಅವರ ‘ಎಲ್ಲಾದರು ಇರು ಎಂತಾದರು ಇರು..’ ಹಾಡನ್ನು ಮಕ್ಕಳಿಗೆ ಹೇಳಿಕೊಡುವುದು.. ಕಾಳಿನದಿಯಲ್ಲಿ ಈಜುವುದು, ಹಾವಿನ ಬಗ್ಗೆ ಭಯ ಹೊರ ಹಾಕಿ ತಮಾಷೆ ಮಾಡುವುದು; ಕಪ್ಪೆ ಡ್ಯಾನ್ಸ್ ಗೆ ಮನಸ್ಸಿನಲ್ಲೇ ಆಹ್ಲಾದಕರ ಸಂಭ್ರಮ ಕಾಣುವುದು ಹೀಗೆ ಅಪ್ಪು ವೈವಿಧ್ಯಮಯ ಗುಣಗಳನ್ನು ವರ್ಣಿಸುದೇ ಅಸಾಧ್ಯ..
ವರನಟ ಡಾ.ರಾಜ್ ಕುಮಾರ್ ಅವರ ‘ಗಂಧದಗುಡಿ’ ಹಾಡಿನಲ್ಲಿ ಬರುವ ‘ಹಸುರಿನ ಬನಸಿರಿಗೇ ಒಲಿದು
ಸೌಂದರ್ಯ ಸರಸ್ಪತಿ ಧರೆಗಿಳಿದು..’
ಹಾಡಿನ ನಿಜವಾದ ಅರ್ಥ ಏನೆಂದು ತಿಳಿಯಲು; ಕನ್ನಡದ ಅಗ್ರಮಾನ್ಯ ಲೇಖಕ ಕೆ.ಪಿ.ಪೂರ್ಣ ಚಂದ್ರ ತೇಜಸ್ವಿ ಅವರ ಕಾದಂಬರಿಗಳಲ್ಲಿ ಬರುವ ಕಾಡು, ಪ್ರಾಣಿ, ಪಕ್ಷಿಗಳ ಕೌತುಕಮಯ ವರ್ಣನೆ ಕಣ್ಣುಗಳಿಂದ ಅನುಭವಿಸಲು ‘ಗಂಧದಗುಡಿ’ ನೋಡಲೇ ಬೇಕು.
ಒಬ್ಬ ಹೀರೋ ನಿಜವಾದ ವಿಶ್ವ ಮಾನವ ಆಗುವುದೆಂದರೆ ಇದೇ ಇರಬೇಕು. ಅಪ್ಪು ಪ್ರಕೃತಿ ನಡುವೆ ಸುಮ್ಮನೆ ಜೀವಿಸಿಲ್ಲ.. ಹೀರೋತನವನ್ನು ಪಕ್ಕಕ್ಕಿಟ್ಟು ಸಾಮಾನ್ಯ ಮನುಷ್ಯನಂತೆ ಓಡಾಡಿದ್ದಾರೆ. ಹಾಗಾಗಿ ಅವರು ದಟ್ಟ ಅರಣ್ಯದಲ್ಲಿ ನಿಂತು ‘ಏನೋ ನಿಮ್ಮನ್ನು ನಂಬಿ ಬಂದು ಬಿಟ್ಟಿರುವೆ.. ಮನೆಯಲ್ಲಿ ಹೆಂಡ್ತಿ ಮಕ್ಳು ಎಲ್ಲಾ ಕಾಯ್ತಾ ಇರ್ತಾರೆ’ ಎಂದು ಅಮೋಘ ವರ್ಷ ಅವರಿಗೆ ಹೇಳುವ ಮಾತುಗಳು ಹೃದಯ ಕಲಕಿ ಬಿಡುತ್ತದೆ..
ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಆರಂಭದಲ್ಲಿ ಚಿತ್ರದ ಆಶಯಗಳ ಬಗ್ಗೆ ಮಾತನಾಡಿದ್ದಾರೆ.
ಪ್ರತೀಕ್ ಶೆಟ್ಟಿ ಕ್ಯಾಮೆರಾ ಪ್ರಕೃತಿ ಒಡಲು ಮತ್ತು ಮೇಲಿನ ವಿಹಂಗಮ ನೋಟವನ್ನು ಪರಿಚಯಿಸುತ್ತದೆ. ಅಜನೀಶ್ ಲೋಕನಾಥ್ ಸಂಗೀತದ ಅಚ್ಚರಿಯೂ ಇದೆ. ಕೆಲವೊಮ್ಮೆ ಅವರು ಟೈಟಾನಿಕ್ ಸಂಗೀತ ನಿರ್ದೇಶಕ ಜೇಮ್ಸ್ ಹಾರ್ನರ್ ಅವರನ್ನು ನೆನಪು ಮಾಡಿ ಬಿಡುತ್ತಾರೆ.
ಅಪ್ಪು ಅವರನ್ನು ಅಪ್ಪುವಾಗಿಯೇ ನೋಡಿ ಎನ್ನುವ ಮಾತು ದೇವರನ್ನು ದೇವರಾಗಿಯೇ ನೋಡಿ ಎಂಬಂತೆ ಕೇಳಿಸಿದರೆ ಅದು ಅಚ್ಚರಿಯೇ ಅಲ್ಲ.. ಅಷ್ಟು ಆಪ್ತರಾಗುತ್ತಾರೆ; ದೇವ ಮಾನವ ಆಗುತ್ತಾರೆ ಅಪ್ಪು..
ಕೊನೆಯಲ್ಲಿ ಅವರು ನಮ್ಮ ನಾಡನ್ನು ಜನರನ್ನು ರಕ್ಷಿಸು ಎಂದು ವನದೇವತೆಗೆ ಮಾಡುವ ಪ್ರಾರ್ಥನೆ ವಿದಾಯದ ಪ್ರಾರ್ಥನೆ ರೀತಿಯಲ್ಲಿಯೇ ಇದೆ ಎಂಬುದು ಮಾತ್ರ ಪ್ರತಿಯೊಬ್ಬರ ಜೀವನ ಇಂತಿಷ್ಟೇ ಎಂದು ಮೊದಲೇ ನಿರ್ಧಾರಿತವಾಗಿರುತ್ತದೆ ಎಂಬುದು ನಿಜವೇ ಎಂಬ ಪ್ರಶ್ನೆ ಮತ್ತು ವಿಸ್ಮಯ ಮೂಡಿಸುತ್ತದೆ.