ಕನ್ನಡ ಚಿತ್ರವೊಂದು ನೂರು ಕೋಟಿ ಕ್ಲಬ್ ಸೇರಿದ್ದು ‘ಕೆಜಿಎಫ್’ ಮೊದಲ ಭಾಗದ ಮೂಲಕ. ಆ ಚಿತ್ರ ಸುಮಾರು ಮುನ್ನೂರು ಕೋಟಿವರೆಗೆ ಗಳಿಕೆ ಮಾಡಿತು ಮತ್ತು ಅದೇ ದಾಖಲೆಯನ್ನು ‘ಕೆಜಿಎಫ್2’ ಮುರಿಯಿತು. ಆ ಚಿತ್ರ ವಿಶ್ವಾದ್ಯಂತ ಒಂದು ಸಾವಿರ ಕೋಟಿ ಮೀರಿ ಗಳಿಕೆ ಮಾಡಿದ್ದು ಇತಿಹಾಸ..
ಆದರೆ ಕರ್ನಾಟಕದಲ್ಲಿ ವೀಕ್ಷಣೆಯಲ್ಲಿ ಕೆಜಿಎಫ್ ಸರಣಿಯನ್ನು ಮೀರಿ ನಡೆದಿರುವ ‘ಕಾಂತಾರ’ ಮಾಡಿದ ಗಳಿಕೆ ಎಷ್ಟು.. ಅದು ಕೆಜಿಎಫ್ ಗಳಿಕೆ ಮೀರಿ ನಡೆದಿದೆಯಾ ಎಂಬುದು ಪ್ರಶ್ನೆ..
ಅದನ್ನು ಪಕ್ಕಕ್ಕಿಟ್ಟು ಯೋಚಿಸುವುದಾದರೆ, ಒಂದೇ ಚಿತ್ರ ಸಂಸ್ಥೆಯ ಚಿತ್ರವೊಂದು ಮಾಡಿದ ದಾಖಲೆಯನ್ನು ಅದೇ ಸಂಸ್ಥೆಯ ಮತ್ತೊಂದು ಚಿತ್ರ ಮುರಿಯುತ್ತದೆ..
ಅದೇ ‘ಹೊಂಬಾಳೆ ಫಿಲಮ್ಸ್’ ನ ಹೆಗ್ಗಳಿಕೆ.
ಕನ್ನಡದ ಹೆಮ್ಮೆಯ ಮತ್ತು ಪ್ರತಿಷ್ಠಿತ ನಿರ್ಮಾಣ ಸಂಸ್ಥೆಯಾಗಿರುವ ಹೊಂಬಾಳೆಯ ಕಾಂತಾರ ಮಾಡಿರುವ ಸಾಧನೆಗೆ ಇಡೀ ದೇಶವೇ ಕೊಂಡಾಡುತ್ತಿದೆ ಎಂದರೆ ಅದು ಅಚ್ಚರಿ ಅಲ್ಲವೇ ಅಲ್ಲ..
‘ಕಾಂತಾರ’ ಚಿತ್ರವು ಬಿಡುಗಡೆಯಾದ ಇಪ್ಪತ್ತೈದು ದಿನಕ್ಕೆ ಹೊಸ ದಾಖಲೆಯೊಂದನ್ನು ನಿರ್ಮಿಸಿರುವುದು ಹೊಂಬಾಳೆ ಫಿಲಮ್ಸ್ ಯಶಸ್ಸಿನ ಓಟಕ್ಕೆ ಹೊಸ ಮುನ್ನುಡಿ ಬರೆದಂತಾಗಿದೆ.
ಕರ್ನಾಟಕದಲ್ಲಿ 25 ದಿನಗಳಲ್ಲಿ 77 ಲಕ್ಷ ಮಂದಿ ಕಾಂತಾರ ಚಿತ್ರವನ್ನು ವೀಕ್ಷಿಸಿರುವುದು ಹೊಸ ದಾಖಲೆಯಾಗಿದೆ. ಇದು ಹೊಂಬಾಳೆ ಫಿಲಮ್ಸ್ ಸಂಸ್ಥೆ ನಿರ್ಮಿಸಿದ ಎಲ್ಲಾ ಚಿತ್ರಗಳ ದಾಖಲೆಯನ್ನು ಮೀರಿಸಿದೆ ಎಂದು ಸ್ವತಃ ಹೊಂಬಾಳೆ ಸಂಸ್ಥೆ ವಿವರ ನೀಡಿದೆ.
ಈ ಮುಂಚೆ 2017 ರಲ್ಲಿ ಬಿಡುಗಡೆಯಾದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ‘ರಾಜಕುಮಾರ’ ಚಿತ್ರವನ್ನು 65 ಲಕ್ಷ ಜನರು ವೀಕ್ಷಿಸಿದ್ದು ದಾಖಲೆಯಾಗಿತ್ತು.
ನಂತರ 2018 ರಲ್ಲಿ ಹೊಂಬಾಳೆ ನಿರ್ಮಿಸಿದ ಕೆಜಿಎಫ್ ಮೊದಲ ಭಾಗವನ್ನು 75 ಲಕ್ಷ ಜನರು ವೀಕ್ಷಿಸಿ ಮತ್ತೊಂದು ದಾಖಲೆ ನಿರ್ಮಾಣವಾಗಿತ್ತು.
ಆ ಬಳಿಕ ಹೊಂಬಾಳೆ ಸಂಸ್ಥೆ ನಿರ್ಮಿಸಿ 2022 ರಲ್ಲಿ ಬಿಡುಗಡೆಯಾದ ‘ಕೆಜಿಎಫ್ 2’ ಕರ್ನಾಟಕದಲ್ಲಿ 72 ಲಕ್ಷ ಜನರ ವೀಕ್ಷಣೆ ಪಡೆದಿತ್ತು. ಈ ಚಿತ್ರ ದೇಶ ವಿದೇಶಗಳಲ್ಲಿ ಮಾಡಿದ ದಾಖಲೆ ಕನ್ನಡಕ್ಕೆ ವಿಶೇಷ ಮಾರುಕಟ್ಟೆ ನಿರ್ಮಿಸಿ ಕೊಡುವಲ್ಲಿ ನೆರವಾಗಿತ್ತು ಎಂಬುದು ಇಲ್ಲಿ ಗಮನಾರ್ಹ.
ಇದೀಗ ‘ಕಾಂತಾರ’ ಹಿಂದಿನ ಎಲ್ಲಾ ದಾಖಲೆಗಳನ್ನು ಇಪ್ಪತ್ತೈದು ದಿನಗಳಲ್ಲಿಯೇ ಬ್ರೇಕ್ ಮಾಡಿದೆ ಮತ್ತು ಇನ್ನೇನು ಒಂದು ಕೋಟಿ ಪ್ರೇಕ್ಷಕರನ್ನು ತಲುಪಲಿದೆ ಎಂಬುದು ಹೊಂಬಾಳೆ ಫಿಲಮ್ಸ್ ಗೆ ಹೊಸ ಗರಿಮೆ ಮತ್ತು ಹಿರಿಮೆಯಾಗಲಿದೆ.
ಆದರೆ ‘ಕಾಂತಾರ’ ಗಳಿಕೆಯಲ್ಲಿ ‘ಕೆಜಿಎಫ್’ ದಾಖಲೆ ಮುರಿದಿದೆಯಾ ಎಂಬುದು ಪ್ರಶ್ನೆಯಾಗಿಯೇ ಉಳಿಯುತ್ತದೆ. ಏಕೆಂದರೆ ಬಿಡುಗಡೆಯಾದಾಗ ‘ಕೆಜಿಎಫ್2’ ಆವರಿಸಿಕೊಂಡಿದ್ದು ಹತ್ತು ಸಾವಿರಕ್ಕೂ ಅಧಿಕ ಪರದೆಗಳನ್ನು..
ಮತ್ತು ಮಾಡಿದ ಗಳಿಕೆ ಒಂದು ಸಾವಿರ ಕೋಟಿ ಮೀರಿದ್ದು..