ಚಿತ್ರದ ಹೆಸರು ಕಾಣೆಯಾಗಿದ್ದಾಳೆ..
ಹುಡುಕಿ ಕೊಟ್ಟವರಿಗೆ ಬಹುಮಾನ ಎಂಬುದು ಟ್ಯಾಗ್ ಲೈನ್..
ಇದು ಅರ್.ಕೆ ಎಂದು ಹೆಸರು ಬದಲಿಸಿಕೊಂಡಿರುವ ರಾಜ್ ಕಾರ್ತಿಕ್ ನಿರ್ದೇಶನದ ಚಿತ್ರ. ಅದೇನು ಕಾಕತಾಳೀಯವೋ ಈ ಚಿತ್ರದ ಹೀರೋಯಿನ್ ಕಾಣೆಯಾಗಿದ್ದರು..
ನಿಮ್ಮ ಹೀರೋಯಿನ್ ಎಲ್ಲಿ ಎಂಬುದಕ್ಕೆ ಅವರು ತೆಲುಗು ಬಿಗ್ ಬಾಸ್ ಮನೆಯಲ್ಲಿ ಇದ್ದಾರೆ. ಹಾಗಾಗಿ ಬಂದಿಲ್ಲ ಎಂಬ ಉತ್ತರ ಬಂತು ನಿರ್ದೇಶಕರಿಂದ.
ಇದು ಮಹಿಳಾ ಜಾಗೃತಿ ಸಿನಿಮಾ ಆಗಿರುವುದರಿಂದ ಸಿನಿಮಾ ಮಹಿಳಾ ಸಾಧಕಿಯರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿತ್ತು. ಇದರಲ್ಲಿ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿರುವ ಗಿರೀಜಾ ಲೋಕೇಶ್ ಸಹ ಸೇರಿದ್ದರು. ಇನ್ನುಳಿದಂತೆ ನಟಿ, ನಿರ್ದೇಶಕಿ ಪ್ರಿಯಾ ಹಾಸನ್, ನಟಿಯರಾದ ಶರಣ್ಯ, ನಿಶ್ಚಿತಾ ಗೌಡ ಮೊದಲಾದವರು ಭಾಗವಹಿಸಿದ್ದರು.
ಅಂದ ಹಾಗೆ ‘ಕಾಣೆಯಾಗಿದ್ದಾಳೆ’ ಚಿತ್ರದ ಟ್ರೈಲರ್ ಹಾಗೂ ಹಾಡುಗಳ ಬಿಡುಗಡೆ ಸಮಾರಂಭವಾಗಿತ್ತು ಅದು. ಚಿತ್ರತಂಡದ ಸದಸ್ಯರು ಹಾಗೂ ಹಿತೈಷಿಗಳು ಭಾಗವಹಿಸಿದ್ದರು.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮ.ಹರೀಶ್, ಫಾರ್ ರಿಜಿಸ್ಟ್ರೇಶನ್ ಚಿತ್ರದ ನಿರ್ದೇಶಕ ನವೀನ್ ದ್ವಾರಕನಾಥ್, ನಿರ್ಮಾಪಕ ನವೀನ್ ರಾವ್ ಹಾಗೂ ಇತರರು ಸಮಾರಂಭದಲ್ಲಿ ಭಾಗವಹಿಸಿದ್ದರು.
ಇದು ಹೆಣ್ಣು ಮಕ್ಕಳ ಬಗ್ಗೆ ಅದರಲ್ಲಿಯೂ ಸಾಮಾಜಿಕ ಜಾಲ ತಾಣಗಳಿಂದ ಮೋಸ ಹೋಗುವ ಮಹಿಳೆಯರಿಗಾಗಿ ಮಾಡಿದ ಕಥೆ ಎಂದರು ನಿರ್ದೇಶಕ ಆರ್.ಕೆ. ಸಾಮಾಜಿಕ ಕಳಕಳಿಯ ಈ ಚಿತ್ರದಲ್ಲಿ ಹೊಸ ನಟ ವಿನಯ್ ಕಾರ್ತಿಕ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ ಎಂಬ ವಿವರ ಕೊಟ್ಟರು ನಿರ್ದೇಶಕರು.
ಜೊತೆಗೆ ಹಿರಿಯ ನಟಿ ಗಿರಿಜಾ ಲೋಕೇಶ್, ವಿನಯಾಪ್ರಸಾದ್, ಬಿರಾದಾರ್ ಸಹ ಇದ್ದಾರೆ. ಕೌಶಿಕ್ ಸುಮಧುರವಾಗಿ ಸಂಗೀತ ಸಂಯೋಜಿಸಿದ್ದಾರೆ. ಈಗಾಗಲೇ ಸೆನ್ಸಾರ್ ಮಂಡಳಿ ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದೆ .ನವೆಂಬರ್ ಕೊನೆ ಭಾಗ ಅಥವಾ ಡಿಸೆಂಬರ್ ಮೊದಲವಾರ ಚಿತ್ರ ಕಾಣಲಿದೆ ಎಂಬ ವಿವರ ಬಂತು ಅವರಿಂದ.
ವಿನಯ್ ಕಾರ್ತಿಕ್ ಗ್ರಾಮೀಣ ಭಾಗದ ಪ್ರತಿಭೆ ಅವರಿಂದ ಇನ್ನು ಮುಂದೆ ಹೆಚ್ಚಿನದನ್ನು ನಿರೀಕ್ಷಿಸಬಹುದು ಎಂದು ಹೇಳುತ್ತಾ ಹೋದರು ನಿರ್ದೇಶಕರು.
ಕಾರ್ಯಕಾರಿ ನಿರ್ಮಾಪಕ ಸಂಜಯ್ ಹಾಗೂ ನಟಿ ಅಂಜನಾ ಗಿರೀಶ್ ಇದ್ದರು.