Snehapriya.com

June 5, 2025

ಚಿತ್ರಮಂದಿರದಲ್ಲಿ ವೀರಂ ಟ್ರೈಲರ್

Social Share :

ಸಿನಿಮಾ ಟ್ರೈಲರ್ ನ್ನು ಚಿತ್ರಮಂದಿರದಲ್ಲಿ ಅದೂ ಸಾವಿರಾರು ಅಭಿಮಾನಿಗಳ ಮುಂದೆ ಬಿಡುಗಡೆ ಮಾಡುವ ಹೊಸ ಪರಂಪರೆ ಆರಂಭವಾಗಿದ್ದು, ಈ ಸಾಲಿಗೆ ಪ್ರಜ್ವಲ್ ದೇವರಾಜ್ ಮುಖ್ಯ ಪಾತ್ರದಲ್ಲಿರುವ ‘ವೀರಂ’ ಸೇರ್ಪಡೆಯಾಗಿದೆ.

ಈಚೆಗೆ ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ವೀರೇಶ್ ಚಿತ್ರಮಂದಿರದಲ್ಲಿ ವೀರಂ ಟ್ರೈಲರ್ ಬಿಡುಗಡೆಗೊಂಡ ಕ್ಷಣದಲ್ಲಿ ಅಭಿಮಾನಿಗಳ ಕಲರವ ಹೆಚ್ಚಾಗಿತ್ತು.

ಶಶಿಧರ್ ಸ್ಟುಡಿಯೋಸ್ ಪ್ರೊಡಕ್ಷನ್‌ನ ಮೂರನೇ ಚಿತ್ರವಾಗಿ ಕೆ.ಎಂ. ಶಶಿಧರ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಮನಮಿಡಿಯುವ ಸಾಹಸ ಥ್ರಿಲ್ಲರ್ ವಿಷಯ ಒಳಗೊಂಡ ವೀರಂ ಈಗ ಬಿಡುಗಡೆಗೆ ಸಿದ್ಧವಿದೆ.

ಡಾಟರ್ ಆಫ್ ಪಾರ್ವತಮ್ಮ, ಶುಗರ್‌ಲೆಸ್ ಚಿತ್ರದ ನಂತರ ಕೆ.ಎಂ.ಶಶಿಧರ್ ಈಗ ಆಕ್ಷನ್ ಥ್ರಿಲ್ಲರ್ ಜಾನರ್ ಚಿತ್ರದೊಂದಿಗೆ ಬರುತ್ತಿದ್ದಾರೆ. ಪ್ರಜ್ವಲ್ ದೇವರಾಜ್, ರಚಿತಾರಾಮ್ ಮುಖ್ಯ ಪಾತ್ರದಲ್ಲಿದ್ದಾರೆ.

ವೀರೇಶ್ ಚಿತ್ರಮಂದಿರದಲ್ಲಿ ನೆರೆದಿದ್ದ ಸಾವಿರಾರು ಪ್ರೇಕ್ಷಕರ ನಡುವೆ ಟ್ರೈಲರ್ ಬಿಡುಗಡೆಗೊಂಡಿತು ಹಾಗೂ ಅಭಿಮಾನಿಗಳ ಗಮನ ಸೆಳೆಯಿತು.


ಖದರ್ ಕುಮಾರ್ ನಿರ್ದೇಶನದ ಈ ಚಿತ್ರವು ಏಪ್ರಿಲ್ 7ರಂದು ರಾಜ್ಯಾದ್ಯಂತ ತೆರೆಕಾಣುತ್ತಿದ್ದು, ಹಿರಿಯ ನಟ ದೇವರಾಜ್ ಚಿತ್ರದ ಟ್ರೈಲರ್ ಬಿಡುಗಡೆಗೊಳಿಸಿ ಶುಭ ಹಾರೈಸಿದರು.

ವೀರಂ ಎಂದರೆ ಯಾರಿಗೂ ಹೆದರದ ವ್ಯಕ್ತಿ. ಪ್ರಿನ್ಸ್ ಪ್ರಜ್ವಲ್ ದೇವರಾಜ್ ಹಾಗೂ ಹಿರಿಯ ನಟಿ ಶೃತಿ ಅಕ್ಕ ತಮ್ಮನಾಗಿ ಅಲ್ಲದೆ ಸಾಹಸಸಿಂಹ ವಿಷ್ಣುವರ್ಧನ್ ಅಭಿಮಾನಿಗಳಾಗಿ ಕಾಣಿಸಿಕೊಂಡಿದ್ದಾರೆ.

ಟ್ರೈಲರ್‌ನಲ್ಲಿ ವೀರಾವೇಶ ಕಾಣುತ್ತಿದೆ ಎಂದರು ಹಿರಿಯ ನಟ ದೇವರಾಜ್.
ಚಿತ್ರಮಂದಿರದಲ್ಲಿ ಟ್ರೈಲರ್ ನೋಡಿದ್ದು ಮೊದಲ ಅನುಭವ. ಜನರ ಕೂಗಾಟ, ಚಪ್ಪಾಳೆ ಕೇಳಿ ತುಂಬಾ ಖುಷಿಯಾಯ್ತು ಎಂದರು ದೇವರಾಜ್.

ದೀಪಕ್‌ ಮೊದಲಬಾರಿಗೆ ಪೂರ್ಣಪ್ರಮಾಣದ ಖಳನಾಯಕನಾಗಿ ನಟಿಸಿದ್ದಾರೆ. ವಿಶೇಷವಾಗಿ ಸಾಹಸಸಿಂಹ ವಿಷ್ಣುವರ್ಧನ್ ಅವರ ಪಾತ್ರವನ್ನಿಟ್ಟುಕೊಂಡು ಕಥೆ ಹೇಳಿದ್ದೇವೆ ಎಂದರು ನಿರ್ಮಾಪಕ ಶಶಿಧರ್.

ಶ್ರೀನಗರ ಕಿಟ್ಟಿ ವಿಶೇಷ ಪಾತ್ರದಲ್ಲಿದ್ದು, ಬಲ ರಾಜವಾಡಿ, ಅಚ್ಯುತ್‌ಕುಮಾರ್, ಸ್ವಾತಿ, ಮೈಕೋ ನಾಗರಾಜ್, ಪ್ರಶಾಂತ್ ನಟನಾ, ಹನುಮಂತೇಗೌಡ ಅಲ್ಲದೆ ನಿರ್ದೇಶಕರಾದ ಜೋಸೈಮನ್, ವಿ.ನಾಗೇಂದ್ರಪ್ರಸಾದ್ ತಾರಾಗಣದಲ್ಲಿದ್ದಾರೆ ಎಂಬ ಮಾಹಿತಿಯೂ ಬಂತು.

ವಿಷ್ಣು ದಾದಾ ಅವರ ಹಚ್ಚೆ ಹಾಕಿಸಿಕೊಂಡು ನಟಿಸಿದ್ದು ಬಹಳವೇ ಥ್ರಿಲ್ಲಿಂಗ್ ಆಗಿತ್ತು ಎಂದರು ಪ್ರಜ್ವಲ್ ದೇವರಾಜ್. ಅನೂಪ ಸೀಳಿನ್ ಸಂಗೀತ, ಲವಿತ್ ಛಾಯಾಗ್ರಹಣ ಚಿತ್ರಕ್ಕಿದೆ.

ಸಿನಿಮಾ-ಗಾಸಿಪ್
Social Share :

Leave a Comment

Your email address will not be published. Required fields are marked *