ಮುಗ್ಧ ನಗೆಯ ಸಾಹುಕಾರ
ಕಾಲದ ಜೊತೆ ಜೊತೆಗೆ ನಡೆಯುತ್ತಾ ಕಾಲಮಾನಕ್ಕೆ ತಕ್ಕಂತೆ ಸಿನಿಮಾ ಮಾಡುತ್ತಾ ನಡೆದ ಕನ್ನಡದ ಹೆಮ್ಮೆಯ ನಟ ಹ್ಯಾಟ್ರಿಕ್ ಹೀರೋ ಡಾ.ಶಿವರಾಜ್ ಕುಮಾರ್ ಸುಮಾರು ಮೂರು ದಶಕದ ಎಲ್ಲಾ ಪೀಳಿಗೆಯ ಅವರ ವರಸೆಯ ಅವರ ಸಮಕಾಲೀನ ನಟ..
ಸದ್ಯದ ಹಿರಿಯ ನಟ ಎಂಬುದು ಗೊತ್ತಿದ್ದರೂ ಶಿವಣ್ಣ ಸಾರ್ವಕಾಲಿಕ ನಾಯಕ ನಟ ಎಂಬುದು ಅತ್ಯಂತ ಸೂಕ್ತ. ಎಲ್ಲಾ ಜಮಾನದ ನಟರ ಜೊತೆ ಸಮನಾಗಿ ಬೆರೆಯಬಲ್ಲ ಮತ್ತು ಅವರ ನಡುವೆ ಮೆರೆಯಬಲ್ಲ ಕನ್ನಡದ ಏಕೈಕ ಪ್ರತಿಭೆ.
ಇಂದು ಅಂದರೆ ಜುಲೈ 12 ಅವರ ಹುಟ್ಟುಹಬ್ಬ.. ಇದು ಸಾಮಾನ್ಯವಲ್ಲ; ಅವರ 60ನೇ ಹುಟ್ಟುಹಬ್ಬ. ಅರೇ.. ಶಿವರಾಜ್ ಕುಮಾರ್ ಅವರಿಗೆ ಇಷ್ಟು ವಯಸ್ಸಾ.. ನೋ ಚಾನ್ಸ್.. ನಂಬುವ ಪ್ರಶ್ನೆಯೇ ಇಲ್ಲ..
ಇತ್ತೀಚೆಗಂತೂ ತಮ್ಮ ವಿನಮ್ರ ನಡವಳಿಕೆಯಿಂದ ಎಲ್ಲರ ಮನಸ್ಸು ಗೆಲ್ಲುತ್ತಿದ್ದಾರೆ. ಶಿವಣ್ಣ ಅವರಂತೆ ಕೊಂಚವೂ ಬಿಂಕ ಬಿಗುಮಾನ ಅಹಂ ಇಲ್ಲದ ಮತ್ತೊಬ್ಬರನ್ನು ಕನ್ನಡ ಚಿತ್ರರಂಗ ಇರಲಿ ಇಡೀ ಭಾರತೀಯ ಚಿತ್ರರಂಗದಲ್ಲಿ ನೋಡಲು ಸಾಧ್ಯವಿಲ್ಲ..
ಏಕೆಂದರೆ ಶಿವಣ್ಣ ಗುಡಿಸಲು ಮಾದರಿಯ ಹೊಟೇಲ್ ಗೆ ಬಂದು ಅಲ್ಲೇ ಕಲ್ಲು ಹಾಸಿನ ಮೇಲೆ ಕುಳಿತು ಮಾಮೂಲಿ ಲೋಟದಲ್ಲಿ ಚಹ ಕುಡಿದು ಹೋಗುವಷ್ಟು ಸರಳ..
ಅಷ್ಟು ಸರಳತೆಯ ಜೊತೆಗೆ ಮಗುವಿನ ಮನಸ್ಸು.. ‘ಎಂಥಾ ಸೊಗಸ್ಸು ಮಗುವಿನ ಮನಸ್ಸು..’ ಎಂಬ ಅಣ್ಣಾವ್ರ ಹಾಡಿನಂತೆ ಶಿವಣ್ಣ ಸರಳತೆ ಮತ್ತು ವಿನಮ್ರ ಮನಸ್ಸಿನ ಸೊಗಸು ಮೈವೆತ್ತ ಸಂಸ್ಕಾರವಂತ ಸ್ಟಾರ್ ನಟ.
ಇರಲಿ; ಸ್ವಲ್ಪ ಹಿಂದಕ್ಕೆ ಹೋಗಿ ಶಿವಣ್ಣನವರ ಸಿನಿಮಾ ಪ್ರಯಾಣವನ್ನು ಗಮನಿಸೋಣ.. ಅದು 80ರ ದಶಕದ ಕೊನೆ. ಆಗಿನ ಕಾಲದಲ್ಲಿ ಕನ್ನಡ ಚಿತ್ರಗಳಿಗೆ ಒಂದು ಕೊರತೆ ಎದುರಾಗಿತ್ತು. ಅದು ಆಗಿನ ಹೊಸ ಪೀಳಿಗೆಗೆ ಅನುಗುಣವಾದ ಡಿಸ್ಕೋ ಕುಣಿತ.
ಹೌದು ಆಗ ಇಡೀ ವಿಶ್ವದಲ್ಲಿ ಮೈಕೆಲ್ ಜಾಕ್ಸನ್ ಅವರ ಪ್ರಭಾವ ಹೆಚ್ಚಾಗಿತ್ತು. ಭಾರತೀಯ ಚಿತ್ರರಂಗದಲ್ಲಿ ಅದು ಶುರುವಾಗಿತ್ತು. ಹಿಂದಿಯಲ್ಲಿ ಡಿಸ್ಕೋ ಡ್ಯಾನ್ಸರ್ ಮೂಲಕ ಮಿಥುನ್ ಚಕ್ರವರ್ತಿ, ಆನಂತರ ‘ಇಲ್ಜಾಮ್’ ಎಂಬ ಚಿತ್ರದ ಮೂಲಕ ಬಂದ ಗೋವಿಂದ ಅಬ್ಬರಿಸುತ್ತಿದ್ದರು. ಅತ್ತ ತಮಿಳಿನಲ್ಲಿ ತಾಯ್ ನಾಗೇಶ್ ಪುತ್ರ ಆನಂದ್ ಬಾಬು ‘ಪಾನಂ ವಾನಂ ಬಾಡಿ’ಯಂತಹ ಡ್ಯಾನ್ಸ್ ಮಾದರಿಯ ಚಿತ್ರ ಮಾಡಿ ಮಿಂಚುತ್ತಿದ್ದರು. ಆ ಚಿತ್ರ ಡಿಸ್ಕೋ ಡ್ಯಾನ್ಸರ್ ರೀಮೇಕ್ ಆಗಿತ್ತು. ಅಲ್ಲಿ ರಾಜೇಶ್ ಖನ್ನ ಮಾಡಿದ್ದ ಪಾತ್ರವನ್ನು ಇಲ್ಲಿ ತಾಯ್ ನಾಗೇಶ್ ಅವರೇ ಮಾಡಿದ್ದರು. ತೆಲುಗಿನಲ್ಲಿ ಚಿರಂಜೀವಿ ಡ್ಯಾನ್ಸ್ ಅಬ್ಬರ ಹೆಚ್ಚಾಗಿತ್ತು.
ಇಂತಹ ಕಾಲಘಟ್ಟದಲ್ಲಿ ಆಧುನಿಕ ಡ್ಯಾನ್ಸ್ ಮಾಡುವ ಯುವ ನಟ ಕನ್ನಡಕ್ಕೆ ಬೇಕಾಗಿತ್ತು.. ಅದು ಕೊರತೆಯಾಗಿತ್ತು. ಆಗ ಬಂದರು ಶಿವರಾಜ್ ಕುಮಾರ್..!
ಆನಂದ್ ನಲ್ಲಿ ‘ಟುವಿ ಟುವಿ..’ ಎಂದು ಹಾಡುವ ಡ್ಯಾನ್ಸ್ ನೋಡಿದ ಯುವ ಪಡೆಯ ಸಂತಸಕ್ಕೆ ಪಾರವೇ ಇರಲಿಲ್ಲ; ‘ಟಿಕ್ ಟಿಕ್ ಬರುತ್ತಿದೆ ಕಾಲ..’ ‘ನಗುವು ಚೆನ್ನ..ಮೊಗವು ಚೆನ್ನ..’ ಎಲ್ಲಾ ಹಾಡಿನಲ್ಲಿಯೂ ಶಿವರಾಜ್ ಕುಮಾರ್ ಡ್ಯಾನ್ಸ್ ಚೆನ್ನ. ಆಗ ಡ್ಯಾನ್ಸ್ ಪಂರಂಪರೆಗೆ ನಾಂದಿ ಹಾಡಿದ ಶಿವರಾಜ್ ಕುಮಾರ್ ಮಾಡದ ಡ್ಯಾನ್ಸ್ ಇಲ್ಲ; ಆದರೂ ರಿಯಾಲಿಟಿ ಶೋನಲ್ಲಿ ಕುಳಿತು ಶಾಲಾ ಹುಡುಗನಂತೆ ಪ್ರತಿ ಡ್ಯಾನ್ಸ್ ನ್ನು ಬೆರಗುಗಣ್ಣಿನಿಂದ ಅವರು ನೋಡುವ ಪರಿಯೇ ಅಚ್ಚರಿ.
80-90ರ ದಶಕದಲ್ಲಿ ಅದೊಂದೇ ಪವಾಡ ನಡೆಯಲ್ಲಿಲ್ಲ.. ಕನ್ನಡದಲ್ಲಿ ಹೊಸ ಬಗೆಯ ಚಿತ್ರಗಳು ಬೇಕು ಎಂದು ಹಂಬಲಿಸುತ್ತಿದ್ದ ದಿನಗಳಲ್ಲಿ ಮೊದಲು ಬಂದಿದ್ದೇ ‘ಓಂ’ ಅದು ಬೇರೆ ಬಗೆಯ ಚಿತ್ರಗಳಿಗೆ ಮುನ್ನುಡಿ ಬರೆದ ಚಿತ್ರ.
ತಂದೆ ಡಾ.ರಾಜ್ ಕುಮಾರ್ ಅವರು ಮೇರುನಟ, ವರನಟ ಎಲ್ಲವೂ ಆಗಿದ್ದರೂ ಅವರ ಪ್ರಭಾವಳಿಗೆ ಸಿಲುಕದೆ ಬೆಳೆದ ಮಹಾನ್ ನಟ ಶಿವರಾಜ್ ಕುಮಾರ್ ಎಂದರೆ ಅದು ಅತಿಶಯೋಕ್ತಿ ಅಲ್ಲವೇ ಅಲ್ಲ..
ಈ ಕರುನಾಡ ಚಕ್ರವರ್ತಿ ಇಲ್ಲಿಯವರೆಗೂ125ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದರೂ ಪ್ರತಿ ಹೊಸ ಪೀಳಿಗೆಗೆ ಅದೇ ಮಾದರಿಯ ಚಿತ್ರ ಕೊಟ್ಟ ಹೆಗ್ಗಳಿಕೆ ಇರುವ ನಟ. ಈಗಲೂ ಇಂದಿನ ಪೀಳಿಗೆಯ ಚಿತ್ರವನ್ನೇ ಮಾಡುತ್ತಿದ್ದಾರೆ. ಅದು ಸಿನಿಮಾ ಜಗತ್ತಿನ ಅಚ್ಚರಿಯೋ ಅಥವಾ ವಯಸ್ಸೇ ಆಗದ ಶಿವಣ್ಣ ಪ್ರಭಾವಳಿಯೋ ಎಂಬುದು ಸೋಜಿಗದ ಸಂಗತಿ..!
🌷ನಲ್ಮೆಯ, ನೆಚ್ಚಿನ ನಟ, ಸದಾ ನವತರುಣರಾಗಿರುವ ಶಿವಣ್ಣ ಅವರಿಗೆ ಹುಟ್ಟುಹಬ್ಬದ ಶುಭಾಶಯ ಹೇಳೋಣ..🎂🌹
🖋ಸ್ನೇಹಪ್ರಿಯ ನಾಗರಾಜ್
Disco dancer ನಾಯಕ ರಾಜೇಶ್ ಖನ್ನಾ ಅಲ್ಲ. ಮಿಥುನ್ ಚಕ್ರವರ್ತಿ. ಸರಿಪಡಿಸಿ
ಇನ್ನೂ 125 ಆಗಿಲ್ಲ. ಬೈರಾಗಿ 123 ನೇ ಚಿತ್ರ