ಮಂಗಳೂರು ಕನ್ನಡವೇ ಹೆಚ್ಚು ಆವರಿಸಿಕೊಂಡಿರುವ ಹಾಸ್ಯ ಪ್ರಧಾನವಾಗಿರುವ ಚಿತ್ರ ‘ಹರೀಶ ವಯಸ್ಸು 36’ ಈ ವಾರ (ಮಾರ್ಚ್ 11) ತೆರೆ ಕಾಣುತ್ತಿದೆ.
ಈ ಚಿತ್ರದ ಮುಖ್ಯ ಆಕರ್ಷಣೆ ಎಂದರೆ ಪುನೀತ್ ರಾಜ್ ಕುಮಾರ್ ಹಾಡಿರುವ ‘ಹರೀಶಣ್ಣಂಗೆ ವಯಸ್ಸು 36.. ಮದುವೆಯಾಗ್ಲಿಲ್ಲ ಅಂತಾ ಬೇಜಾರು..’ ಎಂಬ ಹಾಡು.. ಈ ಹಾಡಿನಲ್ಲಿ ಹಾಸ್ಯವಿದೆ ಜೊತೆಗೆ ಆಕರ್ಷಣೆಯೂ ಇದೆ. ಆದ್ದರಿಂದಲೇ ಪುನೀತ್ ರಾಜ್ಕುಮಾರ್ ಹಾಡನ್ನು ಮೆಚ್ಚಿ ಚಿತ್ರತಂಡವನ್ನು ಪ್ರಶಂಸಿಸಿದ್ದರು.
ಆದರೆ ಅಪ್ಪು ಅವರು ದೈಹಿಕವಾಗಿ ಈಗ ಜೊತೆಯಲ್ಲಿ ಇಲ್ಲ ಎಂಬ ದುಃಖದ ಭಾವಗಳನ್ನು ಚಿತ್ರತಂಡ ಹೊರಹಾಕಿತು. ಚಿತ್ರದ ಬಿಡುಗಡೆ ಪೂರ್ವ ಪ್ರಚಾರ ಸಭೆಯಲ್ಲಿ ಹಿರಿಯ ನಟ ಎಂ.ಎಸ್.ಉಮೇಶ್ ಪಾಲ್ಗೊಂಡಿದ್ದರು. ಮಂಗಳೂರು ಕನ್ನಡ ನನಗೂ ಇಷ್ಟ. ಅದು ಚಿತ್ರದಲ್ಲಿ ಅತ್ಯುತ್ತಮವಾಗಿ ಅಭಿವ್ಯಕ್ತಿಗೊಂಡಿದೆ ಎಂದು ತಿಳಿಸಿದರು.
ಲಕ್ಷ್ಮಿಕಾಂತ್ ರಾವ್ ಹಾಗೂ ಗೆಳೆಯರು ಈ ಚಿತ್ರವನ್ನು ನಿರ್ಮಿಸಿ ದ್ದು, ಸ್ವತಃ ಲಕ್ಷ್ಮಿಕಾಂತ್ ರಾವ್ ಒಂದು ಹಾಡನ್ನೂ ಹಾಡಿರುವುದು ವಿಶೇಷವಾಗಿದೆ. ಚಿತ್ರಕ್ಕೆ ಸಂಗೀತವನ್ನು ನಿರ್ದೇಶಕ ಗುರುರಾಜ್ ಅವರೇ ನೀಡಿದ್ದಾರೆ.
ಚಿತ್ರದ ಬಿಡುಗಡೆಯ ಈ ಹಂತದಲ್ಲಿ ಸಹಜವಾಗಿ ತಲೆ ಬಿಸಿ ಹೆಚ್ಚಾಗಿದೆ. ವಿತರಕ ವಿಜಯ್ ಚಿತ್ರಮಂದಿರಗಳ ಸೆಟ್ ಅಪ್ ಮಾಡಿಕೊಟ್ಟಿದ್ದಾರೆ. ನಾವು ಪರೀಕ್ಷೆ ಬರೆದಿದ್ದೇವೆ. ಉಳಿದಿದ್ದನ್ನು ಪ್ರೇಕ್ಷಕ ಮಹಾಪ್ರಭುವಿಗೆ ಬಿಡುತ್ತೇವೆ ಎಂದವರು ನಿರ್ಮಾಪಕ ಲಕ್ಷ್ಮಿಕಾಂತ್.
ದೀಪಿಕಾ ರಾಮ್ ಮುಖ್ಯ ಪಾತ್ರದಲ್ಲಿ ನಟಿಸಿದ್ದು, ಭರತನಾಟ್ಯ ಕಲಿತಿರುವ ನನಗೆ ಒಂದು ಹಾಡನ್ನೇ ಮಾಡಿರುವುದು ದೊಡ್ಡ ವಿಷಯವಾಗಿದೆ. ಇದು ಮೊದಲ ಚಿತ್ರವಾಗಿರುವುದರಿಂದ ಕುತೂಹಲ ಬಿಡುಗಡೆಯ ಕುತೂಹಲ ಹೆಚ್ಚಿದೆ ಎಂದು ಹೇಳುತ್ತಾ ಹೋದರು ನವ ನಟಿ.
ಯೋಗೀಶ್ ಶೆಟ್ಟಿ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಶ್ವೇತಾ ಅರಹೊಳೆ ಹಾಗೂ ಇತರರು ಪಾತ್ರವರ್ಗದಲ್ಲಿ ಇದ್ದಾರೆ. ಸಂಬಂಧ ಸುತ್ತ ನಡೆಯುವ ಕಥೆಯಲ್ಲಿ ನಗುವೇ ಪ್ರಧಾನ ಪಾತ್ರ ವಹಿಸುತ್ತದೆ ಎಂದರು ನಿರ್ದೇಶಕ ಗುರುರಾಜ್ ಜೇಷ್ಠ.