Snehapriya.com

June 10, 2025

ಪುನೀತ್ ರಾಜ್ ಕುಮಾರ್ ಹಾಡು ಮತ್ತು ಹರೀಶ ವಯಸ್ಸು 36

Social Share :

‘ಹರೀಶಣ್ಣಂಗೆ ವಯಸ್ಸು 36
ಆದ್ರೆ ಮದುವೆಯಾಗ್ಲಿಲ್ಲಾಂತ ಬೇಜಾರು..’

ಹೀಗೆ ಹಾಡಿಕೊಂಡು ನಕ್ಕು ಚಿತ್ರದ ಹಾಡು ಬಿಡುಗಡೆಯ ಕಾರ್ಯಕ್ಕೆ ಬರುವೆನೆಂದು ಹೇಳಿದ್ದ ಪುನೀತ್ ರಾಜ್ ಕುಮಾರ್ ಹೋಗಿದ್ದು ಮಾತ್ರ ಬಾರದ ಲೋಕಕ್ಕೆ…

ಹೀಗೆ ಮರೆಯಾದ ಪವರ್ ಸ್ಟಾರ್ ಅವರನ್ನು ನೆನೆದು ದುಃಖ ವ್ಯಕ್ತಪಡಿಸಿತು ಚಿತ್ರತಂಡ..‌ ಅದು ‘ಹರೀಶ ವಯಸ್ಸು 36’ ಎಂಬ ಹಾಸ್ಯಮಯ ಚಿತ್ರ. ಪುನೀತ್ ಹಾಡು ಚಿತ್ರದ ಹೈ ಲೈಟ್..

ಅದೇ ಹಾಡಿನ ಜೊತೆಗೆ ಇತರ ವಿವರಗಳನ್ನು ನೀಡಲು ಮಾಧ್ಯಮಗಳ ಮುಂದೆ ಬಂದಿತ್ತು ಚಿತ್ರತಂಡ.

ಅಂದ ಹಾಗೆ ಶಿವಮೊಗ್ಗ ಮೂಲದ ಮಂಗಳೂರು ವಾಸಿ ಎಲೆಕ್ಟ್ರಿಕಲ್ ಇಂಜಿನಿಯರ್ ಲಕ್ಷ್ಮಿ ಕಾಂತರಾವ್, ತಮ್ಮ ಗೆಳೆಯರಾದ ಬಿಹಾದ ವ್ಯಾಪಾರಿ ತ್ರಿಲೋಕ್ ಜಾ ಹಾಗೂ ಆಂಧ್ರಪ್ರದೇಶದ ಸಾಫ್ಟ್ ವೇರ್ ಎಂಜಿನಿಯರ್ ಚಕ್ರದಾರ್ ರೆಡ್ಡಿ ಅವರ ಜೊತೆ ಸೇರಿ ನಿರ್ಮಾಣ ಮಾಡಿದ್ದಾರೆ. ಫೆಬ್ರವರಿ ಮೊದಲ ವಾರ ಚಿತ್ರವು ಬಿಡುಗಡೆ ಕಾಣುತ್ತಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಹಾಗೂ ತುಳು ರಂಗಭೂಮಿಯಲ್ಲಿ ಪಳಗಿರುವ ಗುರುರಾಜ್ ಚಿತ್ರಕ್ಕೆ ನಿರ್ದೇಶನ ಮಾಡಿರುವುದರ ಜೊತೆಗೆ ಸಂಗೀತವನ್ನೂ ನೀಡಿದ್ದಾರೆ.

ಈ ಚಿತ್ರ ಒಂದು ಸಹಜವಾದ ಕಥೆಯನ್ನು ಹೊಂದಿದೆ. ನಮ್ಮ ನಿಮ್ಮೆಲ್ಲರ ನಡುವೆ ನಡೆಯುವ ಸಾಧಾರಣ ಘಟನೆ ಅಸಾಧಾರಣ ಹಾಸ್ಯ ರೂಪ ಪಡೆದು ಬರುತ್ತಿದೆ. ಚಿತ್ರದಲ್ಲಿ ಎಲ್ಲರೂ ಸಹಜವಾಗಿಯೇ ನಟಿಸಿದ್ದಾರೆ ಎಂಬ ವಿವರ ನೀಡಿದವರು ನಿರ್ದೇಶಕ ಗುರುರಾಜ್.

ಹಾಸ್ಯನಟ ಎಂ.ಎಸ್.ಉಮೇಶ್ ಒಬ್ಬರು ಬೆಂಗಳೂರಿನ ನಟ. ಇನ್ನುಳಿದಂತೆ ತುಳು ರಂಗಭೂಮಿಯ ಪರಿಚಯಸ್ಥರು ಈ ಚಿತ್ರದಲ್ಲಿ ನಟಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಗುರುವಾಯನ ಕೆರೆ ಮತ್ತು ಮಂಗಳೂರಿನ ಸುಂದರ ಪರಿಸರಗಳಲ್ಲಿ ಚಿತ್ರೀಕರಣಗೊಂಡಿದೆ ಎಂಬ ವಿವರ ಕೂಡ ಬಂತು ಅವರಿಂದ.

ಯೋಗೀಶ್ ಶೆಟ್ಟಿ ಹಾಗೂ ಶ್ವೇತ ಹರಿಹೊಳೆ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಅದಕ್ಕಿಂತಲೂ ಮುಖ್ಯವಾಗಿ ಅವರು ಸಹಜ ರೀತಿಯಲ್ಲಿ ನಟಿಸಿದ್ದಾರೆ. ಅಂದರೆ ಇರುವುದನ್ನು ಇರುವಂತೆಯೇ ತೋರಬೇಕು ಎಂಬುದು ನಿರ್ದೇಶಕರ ಹಂಬಲ..

ಆನಂದ್ ಆಡಿಯೋ ಹಾಡುಗಳನ್ನು ಹೊರತಂದಿದೆ. ಮುಖ್ಯವಾಗಿ ಪುನೀತ್ ಸರ್ ಗೆ ಗೌರವ ಸಲ್ಲಿಸುವುದು ನಮ್ಮ ಉದ್ದೇಶವಾಗಿದೆ ಎಂದರು ಆಡಿಯೋ ಸಂಸ್ಥೆಯ ಆನಂದ್.

ಸಿನಿಮಾ-ಗಾಸಿಪ್
Social Share :

Leave a Comment

Your email address will not be published. Required fields are marked *