ರೇಟಿಂಗ್ : 3.5
ನಿರ್ಮಾಣ : ಮಂಜುನಾಥ್ ವಿಶ್ವಕರ್ಮ ಹಾಗೂ ಕಿರಣ್ ಭರ್ತೂರ್
ನಿರ್ದೇಶನ : ದೀಪಕ್ ಮಧುವನಹಳ್ಳಿ
ಹುಡುಗಾಟದ ಶೈಲಿ ಹಣದ ಥೈಲಿ..
ಇದು ಜೇಮ್ಸ್ ಬಾಂಡ್ ಚಿತ್ರಗಳ ಶೈಲಿ ಅಲ್ಲ; ಜೇಮ್ಸ್ ಬಾಂಡ್ ಮಾದರಿಯ ತಿರುವುಗಳನ್ನು ನೀಡಿ ಹುಡುಗಾಟ ಆಡುವ ಹುಡುಗನೊಬ್ಬನ ಕಥೆ.
ಬ್ಯಾಂಕುಗಳ ಸೇಫ್ಟಿ ಲಾಕರ್ ಗಳಿರುವುದು ಅದರ ಗ್ರಾಹಕರ ಹಣವನ್ನು ಸುರಕ್ಷಿತವಾಗಿಟ್ಟು ಕಾಪಾಡುವುದಕ್ಕೆ. ಆದರೆ ರಾಜಕಾರಣಿಗಳು ಅಲ್ಲಿಯೂ ತಮ್ಮ ವರಸೆ ತೋರಿ ಅನಧಿಕೃತ ಹಣ ಇಡುವ ಪ್ರಕರಣಗಳು ನಡೆದಿವೆ.
ಒಂದು ಬ್ಯಾಂಕ್ ದರೋಡೆ ಮತ್ತು ಅಲ್ಲಿನ ಹೆಚ್ಚುವರಿ ಹಣ ಮತ್ತು ಅದಕ್ಕಾಗಿ ನಡೆಯುವ ಟಿಟ್ ಫಾರ್ ಟ್ಯಾಟ್ ನಡೆಯೇ ಚಿತ್ರದ ಕಥಾವಸ್ತು..
‘ಜೀವನದಲ್ಲಿ ರಿಸ್ಕ್ ತೆಗೆದುಕೊಳ್ಳದಿರುವುದೇ ದೊಡ್ಡ ರಿಸ್ಕ್..’ ಈ ಪ್ರತಿಪಾದನೆ ಮಾಡುವ ಹುಡುಗ ರಾಜು ಮುಂದೆ ಕೈ ಹಾಕುವುದು ಬ್ಯಾಂಕ್ ದರೋಡೆಗೆ..
ಅದಕ್ಕೆ ಸಾಥ್ ನೀಡುವುದು ಆತನ ಮಾವ ಮತ್ತು ಟಿವಿ ಚಾನಲ್ ನ ಹುಡುಗಾಟದ ಗೆಳೆಯ. ಸುವರ್ಣಪುರ ಎಂಬ ಊರಿನ ರಾಜು ಎಂಬ ಹುಡುಗನ ದೊಡ್ಡ ಕನಸು ಎಂದರೆ ಊರಿನಲ್ಲಿರುವ ಬ್ಯಾಂಕ್ ನ ಮ್ಯಾನೇಜರ್ ಆಗುವುದು ಮತ್ತು ಅಡವಿಟ್ಟ ಅಮ್ಮ ಕಟ್ಟಿಸಿದ ಮನೆಯನ್ನು ಉಳಿಸಿಕೊಳ್ಳುವುದು.
ರಾಜುಗೆ ವಿದ್ಯಾ ಎಂಬ ಶಿಕ್ಷಕಿ ಗೆಳತಿ. ಆಕೆಯನ್ನು ಮದುವೆಯಾಗುವುದೇ ಮುಂದಿನ ಏಕೈಕ ಗುರಿ ಎಂದು ಬೀಗುವ ರಾಜು ಕಲ್ಪನೆಯ ಹಾಡುಗಳಿಗೆ (ವಿದೇಶ) ತೆರಳುವುದೇ ಅದ್ದೂರಿ.
ತಂದೆ ತಾಯಿ ಇಬ್ಬರನ್ನೂ ಕಳೆದುಕೊಂಡು ಅವರ ಪ್ರೀತಿಯ ಮನೆ ಉಳಿಸಿಕೊಳ್ಳಲು ಹೆಣಗುವ ರಾಜು, ಪ್ರೇಮಿಸಿದ ಹುಡುಗಿಯನ್ನೂ ಕಳೆದುಕೊಳ್ಳುವ ಭೀತಿ ಎದುರಾದಾಗ, ಬ್ಯಾಂಕ್ ದರೋಡೆಗೆ ಇಳಿಯುವುದೇ ರೋಚಕ. ಟಿಆರ್ ಪಿ ಟಿವಿ ಗೆಳೆಯ ಮತ್ತು ಮಾವನ ಜೊತೆ ಅದು ಅತಿ ಸುಲಭವಾಗಿ ನೆರವೇರುತ್ತದೆ ಎಂಬುದು ಅಚ್ಚರಿ.
ಆದರೆ ಬ್ಯಾಂಕ್ ನಲ್ಲಿ ದೊರೆಯುವುದು ದುಪ್ಪಟ್ಟು ಅಥವಾ ಅದಕ್ಕಿಂತ ಹೆಚ್ಚಿನ ಹಣ. ಅದು ಹೇಗೆ ಸಂದಾಯವಾಯಿತು ಎಂಬ ಪ್ರಶ್ನೆ ಮೂಡುವುದರೊಳಗೆ ಎಂಎಲ್ ಎ ಭೂತಯ್ಯನ ಎಂಟ್ರಿ.
ಬ್ಯಾಂಕ್ ಮ್ಯಾನೇಜರ್ ಜೊತೆ ಅಜೆಸ್ಟ್ ಮೆಂಟ್ ಆಟದಲ್ಲಿ ಬ್ಯಾಂಕ್ ನಲ್ಲಿ ಅನಧಿಕೃತ ಹಣ ಇಟ್ಟಿರುವ ಭೂತಯ್ಯನಿಗೆ ಬ್ಯಾಂಕ್ ದರೋಡೆಯಿಂದ ಹಣ ಕಳೆದುಕೊಂಡು ಮುಳುಗಿ ಹೋದ ಅನುಭವವಾಗುತ್ತದೆ.
ಮುಂದೆ ನಡೆಯುವುದೇ ಬೇರೆ.. ರಾಜು ಪಾತ್ರದಲ್ಲಿ ಗುರು ನಂದನ್ ಫಸ್ಟ್ ರಾಂಕ್ ಗಿಂತ ಕೊಂಚ ಸುಧಾರಣೆ ಕಂಡಿದ್ದಾರೆ. ಟಿಆರ್ ಪಿ ಚಿಕ್ಕಣ್ಣ, ಮಾವ ಅಚ್ಯುತ್ ಕುಮಾರ್ , ಪೊಲೀಸ್ ಅಧಿಕಾರಿ ಜೈ ಜಗದೀಶ್ ಮತ್ತು ಭೂತಯ್ಯನಾಗಿ ರವಿಶಂಕರ್ ಪಾತ್ರಗಳು ಗಮನಾರ್ಹ.
ಸಾಧು ಕೋಕಿಲ, ತಬಲನಾಣಿ ಕೆಲವೆಡೆ ನಗಿಸುತ್ತಾರೆ. ಮೃದುಲಾ, ಮಂಜುನಾಥ ಹೆಗಡೆ ಪಾತ್ರಗಳೂ ಗಮನ ಸೆಳೆಯುತ್ತವೆ.
ಮನೋಹರ ಜೋಷಿ ಕ್ಯಾಮೆರಾ ಹಾಡುಗಳಲ್ಲಿ ಚೆಂದ. ಅನೂಪ್ ಸೀಳಿನ್ ಸಂಗೀತ ಚಿತ್ರಕ್ಕೆ ಪೂರಕ.